Search By Date & Category

NEWSನಮ್ಮಜಿಲ್ಲೆರಾಜಕೀಯ

ಬಿಜೆಪಿ ಆಡಳಿತಾವಧಿಯಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ: ಡಾ.ಯತೀಂದ್ರ ಸಿದ್ದರಾಮಯ್ಯ

ವಿಜಯಪಥ ಸಮಗ್ರ ಸುದ್ದಿ

ಹುಣಸೂರು: ದೇಶದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಆಡಳಿತಾವಧಿಯಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆಯಾಗಿದೆ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಶಾಸಕ ಎಚ್‌.ಪಿ.ಮಂಜುನಾಥ್ ಅವರಿಗೆ ನಗರದ ಕಲ್ಕುಣಿಕೆ ಬಡಾವಣೆಯಲ್ಲಿ ವಿವಿಧ ಸರ್ಕಾರಿ ಸವಲತ್ತು ಪಡೆದ ಫಲಾನುಭವಿಗಳು ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಸತ್ತಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪ್ರಶ್ನಾವಳಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಿಸಲಾಗದೆ ಅವರ ವಿರುದ್ಧ ಸ್ವಪಕ್ಷೀಯ ಸದಸ್ಯರಿಂದಲೇ ನಿಂದನೆ ಪ್ರಕರಣ ದಾಖಲಿಸಿ ಸಂಸತ್ತಿನಿಂದ ಅನರ್ಹಗೊಳಿಸಿ ಏಕಚಕ್ರಾಧಿಪತ್ಯ ಮೆರೆದಿದ್ದಾರೆ ಎಂದು ದೂರಿದರು.

ಎಚ್.ಡಿ.ಕೋಟೆ ಶಾಸಕ ಅನಿಲ್ ಕುಮಾರ್ ಮಾತನಾಡಿ, ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ್ದ ನನ್ನ ತಂದೆ ಚಿಕ್ಕಮಾದು ಅವರ ಕೊಡುಗೆಯನ್ನು ಎಚ್.ಡಿ.ಕುಮಾರಸ್ವಾಮಿ ಸ್ಮರಿಸದೆ, ನನ್ನ ರಾಜಕೀಯ ಬೆಳವಣಿಗೆಯ ಬಾಗಿಲು ಮುಚ್ಚಿದ್ದರು. ಆದರೆ, ಕಾಂಗ್ರೆಸ್‌ ನನ್ನ ಬೆಳವಣಿಗೆಗೆ ಸಹಕಾರ ನೀಡಿತು ಎಂದರು.

ಶಾಸಕ ಎಚ್‌.ಪಿ.ಮಂಜುನಾಥ್ ಮಾತನಾಡಿ, ‘ಮೂರು ಬಾರಿ ಆಯ್ಕೆಯಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಈ ಬಾರಿಯೂ ಮತದಾರರು ನನ್ನನ್ನು ಕೈ ಬಿಡುವುದಿಲ್ಲ ಎಂಬ ನಂಬಿಕೆ ಇದೆ. ಬಿಜೆಪಿ ಸರ್ಕಾರದ ದುರಾಡಳಿತದಿಂದಾಗಿ ಕ್ಷೇತ್ರಕ್ಕೆ ಅನುದಾನ ಸಿಕ್ಕಿಲ್ಲ ಎಂದು ಆರೋಪಿಸಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲಾಗದೆ ಸ್ಥಳೀಯರ ವಿರೋಧ ಕಟ್ಟಿಕೊಂಡಿರುವ ಜಿ.ಟಿ.ದೇವೇಗೌಡ ಅವರು, ಹುಣಸೂರು ಕ್ಷೇತ್ರದಲ್ಲಿ ತಮ್ಮ ವಿರುದ್ಧ ತೊಡೆ ತಟ್ಟುತ್ತಿದ್ದಾರೆ. ಅವರ ಕ್ಷೇತ್ರದಲ್ಲಿ ತೊಡೆ ತಟ್ಟಿ ಗೆಲ್ಲುವ ಕನಸು ಕಟ್ಟಿಕೊಳ್ಳಲಿ. ಹೊರಗಿನಿಂದ ಬಂದವರು ಮನೆ ಮಗನ ವಿರುದ್ಧ ಧ್ವನಿ ಎತ್ತಲು ಬಿಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಮಿತ್ ದೇವರಹಟ್ಟಿ, ಚೆನ್ನಬಸಪ್ಪ ಮಾತನಾಡಿದರು. ಪಕ್ಷದ ಹಲವಾರು ಕಾರ್ಯಕರ್ತರು ಇದ್ದರು.

Leave a Reply

error: Content is protected !!