NEWSನಮ್ಮಜಿಲ್ಲೆನಮ್ಮರಾಜ್ಯ

ಮುಡಾ ಪ್ರಕರಣ: ಮುಡಾದ 14 ಸೈಟ್‌ಗಳನ್ನು ವಾಪಸ್‌ ಮಾಡಲು ನಿರ್ಧರಿಸಿದ ಪಾರ್ವತಿ ಸಿದ್ದರಾಮಯ್ಯ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಕ್ಲೀನ್​ ಹ್ಯಾಂಡ್​ ಎಂದೇ ಕರೆಸಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮುಡಾ ಪ್ರಕರಣ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ದಿನದಿಂದ ದಿನಕ್ಕೆ ಈ ಪ್ರಕರಣ ವಿಚಿತ್ರ ತಿರುವು ತೆಗೆದುಕೊಳ್ಳುತ್ತಿದೆ. ಒಂದೆಡೆ ಜಾರಿ ನಿರ್ದೇಶನಾಲಯ ಸಿದ್ದರಾಮಯ್ಯ ಹಾಗೂ ಇತರರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದ್ದರೆ, ಇತ್ತ ಸಿಎಂ ಪತ್ನಿ ಅಚ್ಚರಿಯ ನಿರ್ಧಾರ ತೆಗೆದುಕೊಂಡು, ಇಡೀ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​ ನೀಡಲು ಹೊರಟಟಿದ್ದಾರೆ.

ಮೊದಲ ಬಾರಿಗೆ ಪತ್ರ ಬರೆದ ಸಿಎಂ ಪತ್ನಿ ಪಾರ್ವತಿ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಕೇಳಿ ಬಂದಿರುವ ಗಂಭೀರ ಆರೋಪಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ನಂತರ ಮೊದಲ ಬಾರಿಗೆ ಸಿದ್ದರಾಮಯ್ಯ ಪತ್ನಿ ಪಾರ್ವತಿ ಬಹಿರಂಗ ಪತ್ರ ಬರೆದಿದ್ದಾರೆ. ಮುಡಾಗೆ ಪತ್ರ ಬರೆದಿರುವ ಅವರು ನಿವೇಶನಗಳನ್ನು ಹಿಂದಿರುಗಿಸುವುದಾಗಿ ತಿಳಿಸಿದ್ದಾರೆ.

ಸಿಎಂ ಪತ್ನಿ ಪತ್ರದಲ್ಲಿ ಏನಿದೆ..?: ನನ್ನ ಪತಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ 40 ವರ್ಷದ ಸುದೀರ್ಘ ರಾಜಕಾರಣದಲ್ಲಿ ಯಾವುದೇ ಸಣ್ಣ ಕಳಂಕ ಅಂಟಿಕೊಳ್ಳದಂತಹ ನೈತಿಕತೆಯನ್ನು ವ್ರತದಂತೆ ಪಾಲಿಸಿಕೊಂಡು ಬಂದವರು. ರಾಜಕೀಯವೂ ಸೇರಿದಂತೆ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡು ಅವರಿಗೆ ಮುಜುಗರ ಉಂಟು ಮಾಡಬಾರದು ಎಂಬ ನಿರ್ಧಾರಕ್ಕೆ ಬದ್ಧಳಾಗಿ ಬದುಕಿದವಳು ನಾನು.

ಇನ್ನು ನಾನೆಂದೂ ಮನೆ, ಆಸ್ತಿ, ಚಿನ್ನ, ಸಂಪತ್ತನ್ನು ಬಯಸಿದವಳಲ್ಲ. ಯಾವುದೇ ಕಾರಣಕ್ಕೂ ನನ್ನಿಂದ ಅವರ ರಾಜಕೀಯ ಜೀವನಕ್ಕೆ ಒಂದು ಸಣ್ಣ ಹನಿಯಷ್ಟೂ ಕಳಂಕ ತಟ್ಟಬಾರದೆಂದು ಎಚ್ಚರಿಕೆಯಿಂದ ನಡೆದುಕೊಂಡವಳು. ನನ್ನ ಪತಿಗೆ ರಾಜ್ಯದ ಜನತೆ ಹರಿಸುತ್ತಾ ಬಂದ ಪ್ರೀತಿ ಅಭಿಮಾನಗಳನ್ನು ದೂರದಿಂದಲೇ ಕಂಡು ಸಂತೋಷ ಮತ್ತು ಹೆಮ್ಮೆ ಪಟ್ಟವಳು.

ಹೀಗಿದ್ದರೂ ಮೈಸೂರಿನ ಮುಡಾ ನಿವೇಶನಕ್ಕೆ ಸಂಬಂಧಿಸಿದಂತೆ ಕೇಳಿಬಂದ ಆರೋಪಗಳಿಂದ ನಾನು ಘಾಸಿಗೊಂಡಿದ್ದೇನೆ. ನನ್ನ ಸ್ವಂತ ಸೋದರ ಅರಿಶಿನ ಕುಂಕುಮದ ಭಾಗವಾಗಿ ಕೊಟ್ಟ ಜಮೀನಿನ ಬಾಬ್ತು ಪಡೆದ ನಿವೇಶನಗಳು ಇಷ್ಟೊಂದು ರಾದ್ಧಾಂತವಾಗುತ್ತವೆ, ಇದರಿಂದ ನನ್ನ ಪತಿಯವರು ಅನ್ಯಾಯವಾಗಿ ಆರೋಪಗಳನ್ನು ಎದುರಿಸುವಂತಾಗಬಹುದು ಎನ್ನುವುದನ್ನು ನಾನು ಊಹಿಸಿದವಳೂ ಅಲ್ಲ.

ನನಗೆ ಈ ನಿವೇಶನ, ಮನೆ, ಆಸ್ತಿ, ಸಂಪತ್ತು ಯಾವುದೂ ಕೂಡ ನನ್ನ ಪತಿಯ ಗೌರವ, ಘನತೆ, ಮರ್ಯಾದೆ ಮತ್ತು ಅವರ ನೆಮ್ಮದಿಗಿಂತ ದೊಡ್ಡದಲ್ಲ. ಇಷ್ಟು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಅವರಿಂದ ಏನನ್ನೂ ನನಗಾಗಲೀ, ನನ್ನ ಕುಟುಂಬಕ್ಕಾಗಲೀ ಬಯಸದೇ ಇದ್ದ ನನಗೆ ಈ ನಿವೇಶನಗಳು ತೃಣಕ್ಕೆ ಸಮ. ಈ ಹಿನ್ನೆಲೆಯಲ್ಲಿ ವಿವಾದಕ್ಕೆ ಕಾರಣವಾಗಿರುವ ಮುಡಾದ 14 ನಿವೇಶನಗಳನ್ನು ವಾಪಸ್ ಮಾಡಲು ನಿರ್ಧರಿಸಿದ್ದೇನೆ. ಇದು ನಾನು ನನ್ನ ಆತ್ಮ ಸಾಕ್ಷಿಯ ಕರೆಗೆ ಓಗೊಟ್ಟು ಪ್ರಜ್ಞಾಪೂರ್ವಕವಾಗಿ ಕೈಗೊಂಡಿರುವ ತೀರ್ಮಾನ.

ಪತಿ ಗೌರವಕ್ಕಾಗಿ ಪತ್ನಿಯ ಭಾವನಾತ್ಮಕ ನುಡಿ: ಮುಡಾ ನಿವೇಶನ ಹಿಂದಿರುಗಿಸುವ ನಿರ್ಧಾರ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಇಷ್ಟೆಲ್ಲ ವಿವಾದವಾಗೋವರೆಗೂ ಯಾಕೆ ಸುಮ್ಮನಿದ್ದರು ಎಂಬ ಪ್ರಶ್ನೆ ಕೂಡ ಸಾಮಾನ್ಯವಾಗಿ ಮೂಡುತ್ತದೆ. ಹೀಗಾಗಿ ಅದಕ್ಕೂ ಉತ್ತರ ನೀಡಿರುವ ಪಾರ್ವತಿ ಭಾವನಾತ್ಮಕವಾಗಿ ಪತಿ ಸಿದ್ದರಾಮಯ್ಯ ಪರ ವಕಾಲತ್ತು ವಹಿಸಿದ್ದಾರೆ.

ಈ ಹಂತದಲ್ಲಿ ಇಂತಹ ನಿರ್ಧಾರಕ್ಕೆ ಏಕೆ ಬಂದೀರಿ ಎಂದು ಯಾರಾದರೂ ಕೇಳಬಹುದು. ಆರೋಪ ಕೇಳಿ ಬಂದ ದಿನವೇ ನಾನು ಈ ನಿರ್ಧಾರ ಮಾಡಿದ್ದೆ. ಆದರೆ, ಈ ಮುಡಾ ನಿವೇಶನ ಹಂಚಿಕೆಯ ಆರೋಪವನ್ನು ರಾಜಕೀಯ ದುರುದ್ದೇಶದಿಂದ ಮಾಡಲಾಗಿದ್ದು, ಈ ಅನ್ಯಾಯದ ವಿರುದ್ಧ ಹೋರಾಡಬೇಕು. ಅವರ ಸಂಚಿಗೆ ನಾವು ಬಲಿಯಾಗಬಾರದು ಎಂದು ಕೆಲವು ಹಿತೈಷಿಗಳು ಹೇಳಿದ ಕಾರಣಕ್ಕೆ ನಿವೇಶನ ವಾಪಸು ಮಾಡಬೇಕೆಂಬ ನಿರ್ಧಾರವನ್ನು ಕೈ ಬಿಟ್ಟಿದ್ದೆ.

ಆದರೆ, ಈಗ ನನ್ನ ಈ ನಿರ್ಧಾರ ಅಚಲವಾಗಿದ್ದು, ಈ ನಿವೇಶನಗಳನ್ನು ವಾಪಸು ನೀಡುವುದರ ಜತೆಗೆ ಮುಡಾಕ್ಕೆ ಸಂಬಂಧಿಸಿದ ಎಲ್ಲ ಆರೋಪಗಳ ಬಗ್ಗೆ ಸಮಗ್ರ ತನಿಖೆ ಮಾಡಬೇಕೆಂದು ಆಗ್ರಹಿಸುತ್ತೇನೆ. ಕೊನೆಯದಾಗಿ, ಎಲ್ಲ ರಾಜಕೀಯ ಪಕ್ಷದ ನಾಯಕರು ಮತ್ತು ಬಂಧುಗಳಲ್ಲಿ ನನ್ನ ವಿನಮ್ರ ವಿನಂತಿ. ದಯವಿಟ್ಟು ರಾಜಕೀಯ ಕ್ಷೇತ್ರದಿಂದ ದೂರವಿದ್ದು, ತಮ್ಮ ಪಾಡಿಗೆ ತಾವಿರುವ ರಾಜಕೀಯ ಕುಟುಂಬದ ಹೆಣ್ಣು ಮಕ್ಕಳನ್ನು ರಾಜಕೀಯ ದ್ವೇಷ ಸಾಧನೆಗಾಗಿ ವಿವಾದದ ಕಣಕ್ಕೆ ಎಳೆದು ತಂದು ಅವರ ಘನತೆ, ಗೌರವಗಳಿಗೆ ಹಾನಿ ಮಾಡಬೇಡಿ.

ಪತ್ನಿಯ ನಿರ್ಧಾರ ಗೌರವಿಸಿದ ಸಿದ್ದರಾಮಯ್ಯ: 14 ಸೈಟ್​ಗಳನ್ನು ಹಿಂದಿರುಗಿಸಿರುವುದಾಗಿ ತಿಳಿಸಿರುವ ಪತ್ನಿಯ ನಿರ್ಧಾರವನ್ನು ಸಿದ್ದರಾಮಯ್ಯ ಗೌರವಿಸುತ್ತೇನೆ ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ನನ್ನ ವಿರುದ್ಧ ನಡೆಯುತ್ತಿರುವ ರಾಜಕೀಯ ಷಡ್ಯಂತ್ರದಿಂದ ನೊಂದಿರುವ ನನ್ನ ಪತ್ನಿ ಈ ನಿವೇಶನಗಳನ್ನು ಹಿಂದಿರುಗಿಸುವ ನಿರ್ಧಾರ ಕೈಗೊಂಡು, ನನಗೂ ಆಶ್ಚರ್ಯ ಉಂಟು ಮಾಡಿದ್ದಾರೆ. ನನ್ನ 4 ದಶಕಗಳ ಸುದೀರ್ಘ ರಾಜಕಾರಣದಲ್ಲಿ ಎಂದೂ ಕೂಡಾ ಮಧ್ಯೆಪ್ರವೇಶಿಸದೆ ಕುಟುಂಬಕ್ಕಷ್ಟೆ ಸೀಮಿತವಾಗಿದ್ದ ನನ್ನ ಪತ್ನಿ ನನ್ನ ವಿರುದ್ಧದ ದ್ವೇಷದ ರಾಜಕಾರಣಕ್ಕೆ ಬಲಿಯಾಗಿ ಮಾನಸಿಕವಾಗಿ ಹಿಂಸೆ ಅನುಭವಿಸುವಂತಾಗಿರುವುದಕ್ಕೆ ನನಗೆ ವಿಷಾದ ಇದೆ. ಹೀಗಿದ್ದರೂ ನಿವೇಶನಗಳನ್ನು ಹಿಂದಿರುಗಿಸಿದ ನನ್ನ ಪತ್ನಿಯ ನಿರ್ಧಾರವನ್ನು ನಾನು ಗೌರವಿಸುತ್ತೇನೆ ಎಂದು ತಿಳಿಸಿದ್ದಾರೆ.

ಇನ್ನು ಮುಡಾ ಭೂ ಸುಳಿಯಲ್ಲಿ ಸಿಲುಕಿರುವ ಪತಿಯನ್ನು ಪಾರು ಮಾಡಲು ಸಿಎಂ ಪತ್ನಿ ಇಷ್ಟೆಲ್ಲ ರಾದ್ಧಂತಕ್ಕೆ ಕಾರಣವಾಗಿರುವ ಆ ಸೈಟ್​ಗಳನ್ನು ಹಿಂದಿರುಗಿಸಲು ನಿರ್ಧರಿಸಿದ್ದಾರೆ. ಆದರೆ ಈಗಾಗಲೇ ತನಿಖಾ ಹಂತಕ್ಕೆ ಬಂದಿರುವ ಕಾರಣ ಮುಡಾ ಪ್ರಕರಣ ಮತ್ತಷ್ಟು ಕುತೂಹಲ ಘಟ್ಟ ತಲುಪಿದ್ದು ಮುಂದೆ ಏನಾನುವುದೋ ಕಾದು ನೋಡಬೇಕಿದೆ.

Leave a Reply

error: Content is protected !!
LATEST
ರೈಲ್ವೆ ನೌಕರರಿಗೆ ದಸರಾ ಹಬ್ಬದ ಬಂಪರ್: 78 ದಿನಗಳ ಸಂಬಳಕ್ಕೆ ಸಮನಾದ ಬೋನಸ್ ಘೋಷಣೆ ಅ.6ರಂದು ನಿವೃತ್ತ ನೌಕರರ ಸಭೆ: BMTC & KSRTC ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTC ತುಮಕೂರು: ಖಾಸಗಿ ಚಾಲಕರಿಗೆ ಮಣೆ ಹಾಕುವ ಡಿಸಿ, ಡಿಎಂಇ 20-30ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಚಾಲಕರ ಕಡೆಗಣನೆ... ಕರ್ನಾಟಕ - ಆಂಧ್ರ ಗಡಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಹೆಚ್ಚಿಸಿ: ಎರಡೂ ನಿಗಮಗಳ ಎಂಡಿಗಳಿಗೆ ಪ್ರಯಾಣಿಕರ ಒತ್ತಾಯ ಹೆಚ್ಚುವರಿ ಪಿಂಚಣಿಗೆ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ KSRTC ನಿವೃತ್ತ ನೌಕರರಿಗೆ ಹೆಚ್ಚಿನ ಪಿಂಚಣಿ ಅನುಷ್ಠಾನ ಶೀಘ್ರ ಜಾರಿಗೊಳಿಸಿ: ಕೇಂದ್ರದ ರಾಜ್ಯ ಕಾರ್ಮಿಕ ಸಚಿವರಿಗೆ ಸಂಸದ... ಬಿಸ್ಮಿಲ್ಲ ನಗರದ ಸಮುದಾಯ ಭವನ ಕಾಮಗಾರಿ ಪೂರ್ಣಗೊಳಿಸಲು ಎಎಪಿ ಆಗ್ರಹ KSRTC ಹೊಳೆನರಸೀಪುರ ಘಟಕದ ನೌಕರರಿಗೆ ಕಿರುಕುಳ ಕೊಡುತ್ತಿರುವ DME- ದೂರು ನೀಡಿ 5 ತಿಂಗಳಾದರೂ ಸ್ಪಂದಿಸದ ಎಂಡಿ! BMTC ಚಾಲನಾ ಸಿಬ್ಬಂದಿಗಳಿಗೆ ಗನ್ ಲೈಸನ್ಸ್ ಪಡೆಯಲು ಅನುಮತಿ ನೀಡಬೇಕು: ಲಿಖಿತವಾಗಿ ಎಂಡಿಗೆ ಮನವಿ ಸಲ್ಲಿಸಿದ ನೌಕರ ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣ ಕುರಿತ ಕೆಂಪಣ್ಣ ಆಯೋಗದ ವರದಿ ತಕ್ಷಣ ಬಹಿರಂಗ ಪಡಿಸಿ, ಸದನದಲ್ಲಿ ಮಂಡಿಸಿ: ಎಎಪಿ ಒತ್...