ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ಅಪಘಾತದಿಂದ ಮರಣ ಹೊಂದಿದಲ್ಲಿ ಸ್ಟೆಟ್ ಬ್ಯಾಂಕ್ ಆಫ್ ಇಂಡಿಯಾ (SBI) ವತಿಯಿಂದ ನೀಡಲಾಗುವ 50ಲಕ್ಷ ವಿಮೆ ಹಣವನ್ನು, ಮೈಸೂರಿನ ಸಾತಗಳ್ಳಿ ಘಟಕದ ತಾಂತ್ರಿಕ ಸಿಬ್ಬಂದಿ ನಿತಿನ್ ಅವರ ಕುಟುಂಬಸ್ಥರಿಗೆ ಇಂದು ಚೆಕ್ ಮೂಲಕ ನೀಡಲಾಯಿತು.
ಅಪಘಾತದಲ್ಲಿ ಮೃತಪಟ್ಟ ತಾಂತ್ರಿಕ ಸಿಬ್ಬಂದಿ ನಿತಿನ್ ಅವರ ಅವಲಂಬಿತರಿಗೆ ಇಂದು ಸಾತಗಳ್ಳಿ ಘಟಕದ ಘಟಕ ವ್ಯವಸ್ಥಾಪಕರ ಸಮ್ಮುಖದಲ್ಲಿ ಮೈಸೂರಿನಲ್ಲಿರುವ SBI ಆಡಳಿತ ಕಚೇರಿಯಲ್ಲಿ ಬ್ಯಾಂಕ್ ಅಧಿಕಾರಿಗಳು 50 ಲಕ್ಷ ರೂ. ಅಪಘಾತ ವಿಮೆ ಪರಿಹಾರ ಚೆಕ್ ವಿತರಿಸಿದರು.
ಕೆಎಸ್ಆರ್ಟಿಸಿಯು ದೇಶದಲ್ಲಿಯೇ ಪ್ರಪ್ರಥಮವಾಗಿ ಕಾರ್ಮಿಕ ಕಲ್ಯಾಣದ ವಿನೂತನ ಯೋಜನೆ ಅಡಿಯಲ್ಲಿ ತನ್ನ ಸಿಬ್ಬಂದಿಗಳಿಗೆ 1 ಕೋಟಿ ರೂ. ಮೊತ್ತದ ಅಪಘಾತ ವಿಮೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಲ್ಲಿ, ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ವತಿಯಿಂದ ಪ್ರೀಮಿಯಂ ರಹಿತ 50 ಲಕ್ಷ ರೂ.ಗಳ ವಿಮೆ ಹಾಗೂ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ನಿಂದ ವಾರ್ಷಿಕ 885 ರೂ. ಪ್ರೀಮಿಯಂ (ನೌಕರರಿಂದ) ಪಾವತಿ ಮೇರೆಗೆ 50 ಲಕ್ಷ ರೂ.ಗಳ ವಿಮೆಯು ಒಳಗೊಂಡಿದೆ.
ಈ ಯೋಜನೆಯಡಿಯಲ್ಲಿ ಸಿಬ್ಬಂದಿಗಳು ಕರ್ತವ್ಯದಲ್ಲಿದ್ದಾಗ ಅಥವಾ ಇಲ್ಲದ ಸಂದರ್ಭಗಳಲ್ಲಿಯೂ ಉಂಟಾಗುವ ಅಪಘಾತಗಳಿಗೂ ಸಹ ಈ ವಿಮಾ ಸೌಲಭ್ಯ ಅನ್ವಯಿಸಲಿದೆ. ಈ ಯೋಜನೆ ಜಾರಿಯ ನಂತರದಲ್ಲಿ ಮೈಸೂರಿನ ಕೆಎಸ್ಆರ್ಟಿಸಿ ಸಾತಗಳ್ಳಿ ಘಟಕದ ತಾಂತ್ರಿಕ ಸಿಬ್ಬಂದಿ ನಿತಿನ್ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ಅವರ ಕುಟುಂಬದವರಿಗೆ ವಿಮಾ ಪರಿಹಾರದ ಚೆಕ್ 50 ಲಕ್ಷ ರೂ.ಗಳನ್ನು ಇಂದು ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಬ್ಯಾಂಕ್ ಅಧಿಕಾರಿಗಳು ಮೃತಪಟ್ಟ ಸಿಬ್ಬಂದಿಯನ್ನು ಮರಳಿ ತರಲು ಸಾಧ್ಯವಿಲ್ಲ. ಆದರೆ, ಅವರ ಕುಟುಂಬಗಳ ಸುಭದ್ರತೆಗಾಗಿ ಜಾರಿಯಾಗಿರುವ ಈ ಅಪಘಾತ ಪರಿಹಾರ ವಿಮಾ ಯೋಜನೆಯು ಬಹಳ ಉತ್ತಮವಾಗಿದೆ ಎಂದು ತಿಳಿಸಿದರು.
ಇನ್ನು ನಿತಿನ್ ಕುಟುಂಬದವರು ಈ ಹಣವನ್ನು ಬ್ಯಾಂಕ್‌ನಲ್ಲಿ ಸ್ಥಿರ ಠೇವಣಿ ಇಟ್ಟು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಗೂ ತಮ್ಮ ಮುಂದಿನ ಜೀವನಕ್ಕಾಗಿ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅನುಕಂಪದ ಆಧಾರದ ಮೇಲಿನ ಕೆಲಸಕ್ಕೆ ಅರ್ಜಿ ಸಲ್ಲಿಸಲು ಘಟಕ ವ್ಯವಸ್ಥಾಪಕರು ಸಲಹೆ ನೀಡಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾಂತ್ವನ: ತಾಂತ್ರಿಕ ಸಿಬ್ಬಂದಿ ನಿತಿನ್ ಅವರ ಕುಟುಂಬ ವರ್ಗದವರಿಗೆ ಅಪಘಾತ ಪರಿಹಾರ ವಿಮೆಯ ಚೆಕ್‌ಅನ್ನು SBI ವಿತರಿಸಸಿದೆ. ನಿತೀನ್ ಅವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಆ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುವ ಮೂಲಕ ಸಾಂತ್ವನವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.