ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದು, ಅರಬ್ಬಿ ಸಮುದ್ರದ ಮೇಲ್ಮೈನಲ್ಲಿ ಸುಳಿಗಾಳಿ ಪರಿಣಾಮ ರಾಜ್ಯಾದ್ಯಂತ ವರುಣ ಅಬ್ಬರಿಸುತ್ತಿದ್ದಾನೆ.
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆಯಾಗುತ್ತಿದ್ದು, ಹಲವು ಜಿಲ್ಲೆಗಳಲ್ಲಿ ವರುಣನ ಅವಾಂತರ ಸೃಷ್ಟಿಯಾಗಿದೆ. ರಾಜ್ಯದಲ್ಲಿ ನಿನ್ನೆ ಸುರಿದ ಮಳೆಗೆ ನಾಲ್ವರು ಬಲಿಯಾಗಿದ್ದಾರೆ.
ದಾವಣಗೆರೆಯಲ್ಲಿ ಮಳೆಯಿಂದಾಗಿ ಕರೆಂಟ್ ಶಾಕ್‍ಗೆ ಯುವಕ ಬಲಿಯಾಗಿದ್ದಾನೆ. ಯಲ್ಲಮ್ಮನಗರದ ಕುಂದುವಾಡ ರಸ್ತೆಯ ಬಳಿ ಘಟನೆ ಸಂಭವಿಸಿವೆ. ಭರತ್ ಕಾಲೋನಿ ಯುವಕ ಮನೋಜ್ ಮೂತ್ರ ವಿಸರ್ಜನೆಗೆ ಅಂತ ಹೋಗಿದ್ದ ಸಂದರ್ಭದಲ್ಲಿ ವಿದ್ಯುತ್ ಕಂಬ ಗ್ರೌಂಡ್ ಆಗಿದೆ. ಪರಿಣಾಮ ಶಾಕ್ ಹೊಡೆದು ಸ್ಥಳದಲ್ಲೇ ಅಸುನೀಗಿದ್ದಾನೆ.
ಬೆಳಗಾವಿ ಜಿಲ್ಲೆಯಲ್ಲಿ ಮಳೆಗೆ ಇಬ್ಬರು ಸಹೋದರರು ಬಲಿಯಾಗಿದ್ದಾರೆ. ತಗಡಿನ ಶೆಡ್ ಕುಸಿದ ಪರಿಣಾಮ ವಿದ್ಯುತ್ ಶಾಕ್ ಹೊಡೆದಿದೆ. ದುರ್ಘಟನೆಯಲ್ಲಿ ಇಬ್ಬರು ಸಹೋದರರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.
ಬೆಳಗಾವಿ ತಾಲೂಕಿನ ದೇಸೂರ ಗ್ರಾಮದಲ್ಲಿ ಘಟನೆ ನಡೆದಿದ್ದು, ಬಸವರಾಜ್ ವಡ್ಡರ್, ವೆಂಕಟೇಶ ವಡ್ಡರ್ ಮೃತಪಟ್ಟವರು. ಇನ್ನು ಬೆಂಗಳೂರಿನಲ್ಲಿ ಸಿಡಿಲು ಬಡಿದು 46 ವರ್ಷದ ತಿಪ್ಪೆಸ್ವಾಮಿ ಎಂಬುವರು ಕೊನೆಯುಸಿರೆಳೆದಿದ್ದಾರೆ.
ರಾಯಚೂರು ತಾಲೂಕಿನ ವಿವಿಧೆಡೆ ಸುರಿದ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಇಡಪನೂರು ಗ್ರಾಮದ ಹಳ್ಳದ ಸೇತುವೆ ಭಾಗಶಃ ಹಾಳಾಗಿವೆ. ಹಳ್ಳ ತುಂಬಿ ಹರಿಯುತ್ತಿದ್ದು ಇಡಪನೂರು – ಪಂಚಮುಖಿ ಮಾರ್ಗ ಬಂದ್ ಆಗಿದೆ.
ಹಾಳಾದ ಸೇತುವೆ ಮೇಲೆಯೇ ಜನರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ತಗ್ಗು ಗುಂಡಿಗಳೇ ಇರುವ ಸೇತುವೆ ಮೇಲೆ ಬೈಕ್ ಸವಾರರು ಹರಸಾಹಸ ಪಡ್ತಿದ್ದಾರೆ. ಇನ್ನು ಥಿಯೇಟರ್ ಒಂದಕ್ಕೆ ಮಳೆ ನೀರು ನುಗ್ಗಿ ಜಲಪಾತದಂತೆ ಹರಿಯುತ್ತಿತ್ತು. ಇಡೀ ಥಿಯೇಟರ್ ಮಳೆ ನೀರಿನಿಂದ ಜಲಾವೃತವಾಗಿತ್ತು.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಮಳೆ ಅವಾಂತರವನ್ನೇ ಸೃಷ್ಟಿಸಿದೆ. ಭಾರೀ ಮಳೆಯಿಂದಾಗಿ ನೀರು ಬಸ್ ನಿಲ್ದಾಣಕ್ಕೆ ನುಗ್ಗಿ ಪ್ರಯಾಣಿಕರು ಪರದಾಡುವಂತಾಯ್ತು. ಸತತ 2 ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತವಾದವು.
ಇನ್ನು ವಿಶ್ವ ವಿಖ್ಯಾತ ಮೈಸೂರು ದಸರಾ ಸಂಭ್ರಮಕ್ಕೂ ಮಳೆ ಅಡ್ಡಿಯಾಗಿದೆ. ನಿನ್ನೆ ಸಂಜೆ ಅರಮನೆ ಮುಂಭಾಗ ಹಮ್ಮಿಕೊಂಡಿದ್ದ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಮಳೆ ಅಡ್ಡಿಯಾಯ್ತು. ವಿವಿಐಪಿ ಆಸನಗಳು, ವೇದಿಕೆ ಎಲ್ಲವೂ ಮಳೆ ನೀರಿನಲ್ಲಿ ತೋಯ್ದು ತೊಪ್ಪೆ ಆಗಿತ್ತು.
ಇನ್ನು ಮೈಸೂರಲ್ಲಿ ರಾತ್ರಿಯಾಗ್ತಿದ್ದಂತೆ ವಿದ್ಯುತ್ ದೀಪಾಲಂಕಾರ ನೋಡೋದೇ ಚಂದ. ಆದರೆ ಮಳೆಯಿಂದಾಗಿ ವಿದ್ಯುತ್ ದೀಪಾಲಂಕಾರ ಸ್ಥಗಿತಗೊಳಿಸಲಾಗಿದೆ. ರಾಮಸ್ವಾಮಿ ವೃತ್ತದಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿತ್ತು. ಈ ಹಿನ್ನೆಲೆಯಲ್ಲೂ ಎಚ್ಚೆತ್ತುಕೊಂಡ ಚೆಸ್ಕಾಂ ಲೈಟಿಂಗ್ಸ್ ಆಫ್ ಮಾಡ್ತು.
ಕೋಟೆನಾಡು ಚಿತ್ರದುರ್ಗದಲ್ಲಿ ಮಳೆ ಅಬ್ಬರಕ್ಕೆ ಹೊಸದುರ್ಗ ತಾಲೂಕಿನ ಮಾಚೇನಹಳ್ಳಿ ಗ್ರಾಮ ಸರ್ಕಾರಿ ಶಾಲೆ ಜಲಾವೃತವಾಗಿತ್ತು. ಶಾಲೆಯೊಳಗಿನ ಪುಸ್ತಕ, ದಾಖಲೆಗಳು, ಪೀಠೋಪಕರಣ, ಆಟದ ಸಾಮಗ್ರಿಗಳು ನೀರುಪಾಲಾದ್ದವು.
ಗ್ರಾಮಸ್ಥರು, ಮಕ್ಕಳು ಶಾಲೆಗೆ ಧಾವಿಸಿ ಶಾಲಾ ಸಾಮಗ್ರಿಗಳನ್ನು ರಕ್ಷಿಸಿದ್ರು. ಇನ್ನು ಹಾಲುರಾಮೇಶ್ವರದಲ್ಲಿ ಗುಡುಗು-ಸಿಡಿಲು ಸಹಿತ 1 ಗಂಟೆಗೂ ಹೆಚ್ಚು ಕಾಲ ಜೋರು ಮಳೆಯಾಯ್ತು. ಇತ್ತ ಬಾಗಲಕೋಟೆ ಜಿಲ್ಲೆಯಲ್ಲೂ ಧಾರಾಕಾರ ಮಳೆಯಾಗಿದೆ.
ಇಳಕಲ್ ತಾಲೂಕಿನ ಬೇಕಮಲದಿನ್ನಿ ಗ್ರಾಮದ ಹಳ್ಳ ತುಂಬಿ ಹರಿದ ಪರಿಣಾಮ ಹುನಗುಂದ-ಕರಡಿ ರಸ್ತೆ ಮಾರ್ಗ ಬಂದ್ ಆಗಿತ್ತು. ಹಳ್ಳದ ನೀರಿನಲ್ಲಿ ಬಸ್ ಸಿಲುಕಿ ಪ್ರಯಾಣಿಕರು ಪರದಾಡುವಂತಾಯ್ತು. ಟ್ರ್ಯಾಕ್ಟರ್ ಮೂಲಕ ಬಸ್ ಹೊರಗೆಳೆಯಲು ಹರಸಾಹಸಪಡುವಂತಾಯಿತು.