ಮೈಸೂರು: ಸಮಾಜದಲ್ಲಿ ಯಾವುದೇ ಜಾತಿ ವ್ಯವಸ್ಥೆ ಇರಬಾರದು. ಎಲ್ಲರೂ ಸಮಾನರು, ಎಲ್ಲರಿಗೂ ಸಮಾನ ಹಕ್ಕು ಸಿಗಬೇಕು, ಹಿಂದುಳಿದ ವರ್ಗ ಎಂದು ಯಾವುದೂ ಇರಬಾರದು, ಈ ನಿಟ್ಟಿನಲ್ಲಿ ಹಿಂದಿರುವ ಸಮಾಜವನ್ನು ಮೇಲಕ್ಕೆ ಎತ್ತಲು ಮೀಸಲಾತಿ ಬೇಕು ಎಂಬಿತ್ಯಾದಿ ಉತ್ತಮ ಚಿಂತನೆಗಳನ್ನು ಹೊತ್ತು ಭಾರತ ಶ್ರೇಷ್ಠ ಕೃತಿ ಸಂವಿಧಾನದ ನಿರ್ಮಾತೃ ಆಗಿರುವ, ಶೋಷಿತರ ಪರ ಧ್ವನಿಯಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ನಾವು ಎಷ್ಟು ಹೇಳಿದರೂ ಕಡಿಮೆಯೇ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ ಗೌಡ ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ 64ನೇ ಪರಿನಿರ್ವಾಣ ದಿನದ ಅಂಗವಾಗಿ ಇಂದು ಟೌನ್ ಹಾಲ್ ಆವಣದಲ್ಲಿ ಡಾ. ಅಂಬೇಡ್ಕರ್ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಇದಕ್ಕಾಗಿಯೇ ಹೇಳುವುದು, ಅಂಬೇಡ್ಕರ್ ಅವರನ್ನು ಯಾವುದೇ ಒಂದು ಜಾತಿಗೆ ಸೀಮಿತವನ್ನಾಗಿ ನೋಡಬಾರದು. ಅವರ ವ್ಯಕ್ತಿತ್ವವೇ ಅಂಥದ್ದು, ಮನುಕುಲಕ್ಕೆ ಅವರು ನೀಡಿದ ಕೊಡುಗೆ ಅಪಾರ. ಅವರ ವಿಚಾರಧಾರೆಗಳನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹ ಶಿಕ್ಷಣ ದೊರೆಯಬೇಕು. ಒಂದು ಕುಟುಂಬದ ಒಬ್ಬನಿಗೆ ಶಿಕ್ಷಣ ಸಿಕ್ಕರೆ ನಂತರ ಅವರ ಮನೆಯವರಿಗೂ ಸಿಗಲಿದೆ ಎಂಬ ಆಶಯ ಇವರದ್ದಾಗಿದೆ. ಕಾರಣ, ತಮ್ಮ ಬಾಲ್ಯದಲ್ಲಿ ಅನುಭವಿಸಿದ ಅಸ್ಪೃಶ್ಯತೆ. ಶಾಲೆಯಲ್ಲಿ ನಡೆದ ತಾರತಮ್ಯ ಇವರ ಮೇಲೆ ಅತೀವ ಪರಿಣಾಮವನ್ನು ಬೀರಿತು. ಇಂತಹ ನೋವು ಅವರನ್ನು ಮತ್ತಷ್ಟು ಗಟ್ಟಿ ಮಾಡಿತು. ಒಬ್ಬ ಉತ್ತಮ ಹೋರಾಟಗಾರರನ್ನಾಗಿ ರೂಪಿಸಿತು ಎಂದರು.
ಸಾಮಾಜಿಕ ಸಮಾನತೆ ಮೂಡಬೇಕೆಂಬ ಛಲವನ್ನು ಹುಟ್ಟುಹಾಕಿತು. ಇದರಿಂದ ಭವ್ಯ ಭಾರತದ ಕನಸನ್ನು ಕಾಣಲು ಸಾಧ್ಯವಾಗಿದ್ದಲ್ಲದೆ, ಸಮಾಜದ ಅಂಕುಡೊಂಕಿನ ವ್ಯವಸ್ಥೆಯನ್ನು ಬದಲಾಯಿಸಬೇಕೆಂಬ ಹಠವನ್ನು ಹುಟ್ಟುಹಾಕಿತು. ಇದರ ಪರಿಣಾಮವೇ ಅದ್ಭುತವಾಗಿ ರಚನೆಗೊಂಡ ಸಂವಿಧಾನ ಎಂದು ಹೇಳಿದರು.
ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ವಿಶ್ವವೇ ಮೆಚ್ಚಿಕೊಂಡಿದೆ. ಹಲವು ದೇಶಗಳು ಇದರ ಅಧ್ಯಯನ ಮಾಡಿಕೊಂಡು ಹೋಗಿವೆ. ಕೆಲವು ಕಡೆ ಕೆಲವು ಅಂಶಗಳನ್ನು ಸೇರಿಸಿಕೊಂಡಿವೆ. ಇಂಥ ದೂರದೃಷ್ಟಿತ್ವ, ಶ್ರೇಷ್ಠ ಚಿಂತನೆ ಅಂಬೇಡ್ಕರ್ ಅವರಲ್ಲಿತ್ತು. ಇಂತಹ ಒಬ್ಬ ಮಹಾನ್ ನಾಯಕರು ನಮ್ಮ ಮಧ್ಯೆ ಇದ್ದರು ಎಂದು ಹೇಳಿಕೊಳ್ಳುವುದೇ ಒಂದು ಹೆಮ್ಮೆಯ ಸಂಗತಿ ಎಂದರು.
ಪ್ರಜಾಪ್ರಭುತ್ವದ ಬಗ್ಗೆ ಅಂಬೇಡ್ಕರ್ ಅವರು ಸಾಕಷ್ಟು ಕನಸನ್ನು ಹೊಂದಿದ್ದರು. ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವಗಳೊಂದಿಗೆ ಎಲ್ಲರೂ ಬಾಳಬೇಕು. ಪ್ರತಿಯೊಬ್ಬರನ್ನೂ ಸಮಾನರಂತೆ ಕಾಣಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹ ಅಧಿಕಾರ ಸಿಗಬೇಕು ಎಂಬ ಅವರ ಕನಸ್ಸು ಇನ್ನೂ ಕುಟುಂತ ಸಾಗಿದೆ. ಹೀಗಾಗಿ ಅವರ ಕನಸನ್ನು ನನಸು ಮಾಡಲು ನಾವು ಮುನ್ನುಗೋಣ ಎಂದು ಕರೆ ನೀಡಿದರು.
ಇಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ದಿನವಾಗಿದೆ. ಇಂಥ ಸಂದರ್ಭದಲ್ಲಿ ಅವರ ತತ್ವ, ಆದರ್ಶವನ್ನು ನಾವು ಅಳವಡಿಸಿಕೊಳ್ಳಬೇಕು. ಅವರ ಕನಸಿನ ಮಾರ್ಗದಲ್ಲಿ ನಾವು ನಡೆಯುತ್ತೇವೆ ಎಂಬ ಸದಾಶಯವನ್ನು ವ್ಯಕ್ತಪಡಿ, ಎಲ್ಲರೂ ಈ ನಿಟ್ಟಿನಲ್ಲಿ ಹೆಜ್ಜೆ ಹಾಕೋಣ ಎಂದರು.
ಶಾಸಕರಾದ ಜಿ.ಟಿ. ದೇವೇಗೌಡ, ಎಲ್. ನಾಗೇಂದ್ರ, ಮುಡಾ ಅಧ್ಯಕ್ಷ ಎಚ್. ವಿ. ರಾಜೀವ್ ಹಾಗೂ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.