ಬೆಂಗಳೂರು: ಕೊರೊನಾ ಸೇನಾನಿಗಳಿಗೆ ಪುಷ್ಪಾಲಂಕಾರದ ಮೂಲಕ ವಿಶಿಷ್ಟವಾಗಿ ಗೌರವ ಸಮರ್ಪಣಾ ಕಾರ್ಯಕ್ರಮವನ್ನು ವಿಧಾನಸೌಧದ ಮುಂಭಾಗ ಗುರುವಾರ ಏರ್ಪಡಿಸಲಾಗಿತ್ತು.
ತೋಟಗಾರಿಕೆ ಇಲಾಖೆ ಸಹಭಾಗಿತ್ವದಲ್ಲಿ ಫ್ಲವರ್ ಕೌನ್ಸೆಲಿಂಗ್ ಆಫ್ ಇಂಡಿಯಾ ಆಯೋಜಿಸಿದ್ದ ಕಾರ್ಯಕ್ರಮವನ್ನು ತೋಟಗಾರಿಕಾ ಸಚಿವ ನಾರಾಯಣಗೌಡ ಉದ್ಘಾಟಿಸಿದರು. ಈ ವೇಳೆ 1.72 ಲಕ್ಷ ಹೂವುಗಳನ್ನು ಬಳಸಿ ಕೊರೊನಾ ಸೇನಾನಿಗಳಂತೆ ಅಲಂಕಾರ ಮಾಡಲಾಗಿದೆ. ಬೆಂಗಳೂರಿನ ವಿವಿಧೆಡೆ ಇಂದಿನಿಂದ ಮೂರು ದಿನಗಳ ಕಾಲ ಪುಷ್ಪಾಲಂಕಾರದ ಮೂಲಕ ಗೌರವ ಸಮರ್ಪಣೆ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಸಮಾರಂಭದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ, ನಿರ್ದೇಶಕ ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.