ಬೆಂಗಳೂರು: ಸಮರ್ಪಕವಾಗಿ ಮಾಸ್ಕ್ ಹಾಗೂ ಸ್ಯಾನಿಟೈಜರ್ ಸಿಗುತ್ತಿಲ್ಲ ಎಂದು ಬಿಎಂಟಿಸಿ ನೌಕರರು ಅಳಲು ತೋಡಿಕೊಳ್ಳುತ್ತಿದ್ದರೂ ಸಹ ಸ್ವಲ್ಪವೂ ಸ್ಪಂದಿಸದ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳ ಈ ನಿರ್ಲಕ್ಷ್ಯತನವನ್ನು ಆಮ್ ಆದ್ಮಿ ಪಕ್ಷ ಖಂಡಿಸುತ್ತದೆ ಎಂದು ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ತಿಳಿಸಿದ್ದಾರೆ.
ಕೊರೊನಾ ಸೋಂಕು ಬೆಂಗಳೂರಿನಲ್ಲಿ ವ್ಯಾಪಕವಾಗಿ ಹರಡುತ್ತಿರುವ ವೇಳೆಯಲ್ಲೇ ಈ ರೀತಿಯ ಬೇಜವಾಬ್ದಾರಿ ವರ್ತನೆ ತೋರುತ್ತಿರುವುದು ತರವಲ್ಲ. ಬೆಂಗಳೂರಿನಲ್ಲಿ ಬಿಎಂಟಿಸಿ ಕಂಡಕ್ಟರ್ ಒಬ್ಬರಿಗೆ ಸೋಂಕು ಇರುವುದು ದೃಢಪಟ್ಟರೂ ಸಹ ಸಾರಿಗೆ ಇಲಾಖೆಯ ಅಧಿಕಾರಿಗಳಾಗಲಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಾಗಲಿ ತುಟಿ ಬಿಚ್ಚದೆ ಕುಳಿತುಕೊಂಡಿದ್ದಾರೆ. ಸೂಕ್ತ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಕೇವಲ ಮಾಧ್ಯಮದ ಮುಂದೆ ಮಾತ್ರ ಪ್ರದರ್ಶನ ನೀಡುವ ಅಧಿಕಾರಿಗಳು, ಸಚಿವರ ಬೇಜವಾಬ್ದಾರಿ ವರ್ತನೆ ತರವಲ್ಲ ಎಂದು ಕಿಡಿಕಾರಿದ್ದಾರೆ.
ಈಗಾಗಲೇ ಸಾವಿರಾರು ಜನ ಬಿಎಂಟಿಸಿಯಲ್ಲಿ ಪ್ರಯಾಣಿಸಲು ಪ್ರಾರಂಭಿಸಿದ್ದಾರೆ ಇಂತಹ ಸಂದರ್ಭದಲ್ಲೇ ಯಾವುದೇ ರೀತಿಯ ಮುಂಜಾಗ್ರತೆವಹಿಸದೆ ಇದ್ದರೆ ಸೋಂಕು ಸಮುದಾಯಕ್ಕೆ ಹರಡಿದರೆ, ಇದರ ಹೊಣೆಯನ್ನು ಸಚಿವರು ಹಾಗೂ ಅಧಿಕಾರಿಗಳು ಹೊರುವರೇ??.
ಬಿಎಂಟಿಸಿ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಸೋಂಕು ಹರಡಿದರೆ ಅವರೆಲ್ಲರ ಚಿಕಿತ್ಸಾ ವೆಚ್ಚವನ್ನು ಅಧಿಕಾರಿಗಳು ಹಾಗೂ ಸಚಿವರ ಸಂಬಳದಿಂದ ಕಟ್ಟಿಕೊಡಬೇಕು ಹಾಗೂ ಪರಿಹಾರವನ್ನು ಸಹ ನೀಡಬೇಕು ಎಂದು ಪಕ್ಷ ಆಗ್ರಹಿಸಿದೆ ಎಂದರು.
ನೌಕರರಿಗೆ ಉತ್ತಮ ಗುಣಮಟ್ಟದ ಮಾಸ್ಕ್, ಸ್ಯಾನಿಟೈಜರ್, ಕೈಗವಸು, ಸುರಕ್ಷತಾ ಸಾಧನಗಳನ್ನು ನೀಡಬೇಕು ಹಾಗೂ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲೇಬೇಕು ಎಂದು ಒತ್ತಾಯಿಸಿದ್ದಾರೆ.