ಬೆಂಗಳೂರು: ದೇಶದೆಲ್ಲೆಡೆ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂಬ ಕೂಗು ಜೋರಾಗುತ್ತಿದೆ. ಅದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ಚೀನಾ ಉತ್ಪನ್ನಗಳನ್ನು ಬಳಸದಂತೆ ಜನರಿಗೆ ಕರೆ ನೀಡುತ್ತಿವೆ ಇದು ಒಳ್ಳೆಯ ಬೆಳವಣಿಗೆಯೇ. ಆದರೆ ನಮ್ಮ ಮೈತ್ರಿಸರ್ಕಾರದಲ್ಲಿ ರೂಪಿಸಲಾಗಿದ್ದ ಚೀನಾದೊಂದಿಗೆ ಸ್ಪರ್ಧೆ ಯೋಜನೆ ಏನಾಯಿತು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಕೊರೊನಾ ಸೋಂಕು ಒಂದೆಡೆಯಾದರೆ ಮತ್ತೊಂದೆಡೆ ಲಡಾಖ್‌ನ ಗಾಲ್ವಾನ್ ನದಿ ಕಣಿವೆಯಲ್ಲಿ ಗಡಿ ಸಂಬಂಧ ಉಂಟಾಗಿರುವ ಸಂಘರ್ಷಕ್ಕೆ 20 ಮಂಧಿ ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ಇದರಿಂದ ದೇಶದ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ, ಇಂತಹ ಸಂದರ್ಭದಲ್ಲಿ, ನಾನು ಮುಖ್ಯಮಂತ್ರಿಯಾಗಿದ್ದಾಗ 2018ರಲ್ಲಿ ಚೀನಾದೊಂದಿಗೆ ಸ್ಪರ್ಧೆ ಎಂಬ ಯೋಜನೆಯನ್ನು ರೂಪಿಸಿದ್ದೆ ಅದನ್ನು ಇಂದು ಜಾರಿಗೆ ತರುವಲ್ಲಿ ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ಹಿಂದೆ ಬೀಳುತ್ತಿರುವುದು ಏಕೆ ಎಂದು ತಿಳಿಯುತ್ತಿಲ್ಲ ಎಂದಿದ್ದಾರೆ.
ಅಂದು ನಾವು ಯೋಜನೆಯನ್ನು ರೂಪಿಸಿದ್ದೆ ಸ್ಥಳೀಯರಿಗೆ ಉದ್ಯೋಗ ಒದಗಿಸುವುದು, ಚೀನಾಕ್ಕೆ ಸಿಕ್ಕಿರುವ ಮಾರುಕಟ್ಟೆಯನ್ನು ಕಸಿದು ನಮ್ಮವರಿಗೆ ಕೊಡುವ ಜತೆಗೆ ಆ ಮೂಲಕ ಚೀನಾ ಉತ್ಪನ್ನಗಳನ್ನು ಯಶಸ್ವಿಯಾಗಿ ಹೊರ ಹಾಕುವ ಉದ್ದೇಶದಿಂದ. ಆದರೆ, ಮೈತ್ರಿ ಸರ್ಕಾರದ ಈ ಯೋಜನೆಯನ್ನು ಇಂದಿನ ಸರ್ಕಾರ ಏನು ಮಾಡಿದೆ? ಮುಂದುವರಿಸಿಕೊಂಡು ಹೋಗಿಲ್ಲ ಏಕೆ ಎಂದು ಕೇಳಿದ್ದಾರೆ.
ಆ ವೇಳೆ ಯೋಜನೆ ಜಾರಿಗೆ ತರಲು ನನ್ನ ನೇತೃತ್ವದ ಮೈತ್ರಿ ಸರ್ಕಾರದ ಸಂಪುಟ ಸಭೆಯಲ್ಲಿ ತೀರ್ಮಾನಿಸಿ, ಇದಕ್ಕಾಗಿ ಕಲಬುರ್ಗಿ, ಚಿತ್ರದುರ್ಗ, ಹಾಸನ, ಕೊಪ್ಪಳ, ಮೈಸೂರು, ಬಳ್ಳಾರಿ, ತುಮಕೂರು, ಬೀದರ್ ಜಿಲ್ಲೆಗಳಲ್ಲಿ 9 ಕ್ಲಸ್ಟರ್‌ಗಳನ್ನು ಸ್ಥಾಪಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಚೀನಾದ ಉತ್ಪನ್ನಗಳಿಗೆ ಬ್ರೇಕ್ ಹಾಕಿ ದೇಶೀಯ ಉತ್ಪನ್ನ ಮತ್ತು ಕೈಗಾರಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ರೂಪಿಸಲಾಗಿರುವ ಚೀನಾದೊಂದಿಗೆ ಸ್ಪರ್ಧೆ ಯೋಜನೆಗೆ 2 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಡುವ ಬಗ್ಗೆ ಕೂಡ ತೀರ್ಮಾನಿಸಲಾಗಿತ್ತು. ಆದರೆ ಸದುದ್ದೇಶದ ಯೋಜನೆ ಈ ಸರ್ಕಾರದಲ್ಲಿ ಮೂಲೆ ಗುಂಪಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಗಡಿಯಲ್ಲಿ ನಮ್ಮ ಯೋಧರ ಬಲಿದಾನವಾದ ನಂತರ ಕೆಲವರಿಗೆ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಬಗ್ಗೆ ಜ್ಞಾನೋದಯವಾಗಿದೆ. ಆದರೆ, ನನ್ನ ಅಧಿಕಾರವಧಿಯಲ್ಲೇ ಈ ಬಗ್ಗೆ ಗಂಭೀರವಾಗಿ ಯೋಚಿಸಲಾಗಿತ್ತು. ಚೀನಾ ವಸ್ತುಗಳನ್ನು ಬಹಿಷ್ಕರಿಸುವುದು ಘೋಷಣೆ ಮಾಡಿದಷ್ಟು ಸುಲಭವಲ್ಲ. ಅದಕ್ಕೆ ರಚನಾತ್ಮಕ ಯೋಜನೆಗಳು ಬೇಕು. ಮೈತ್ರಿ ಸರ್ಕಾರದ ಯೋಜನೆಗಳು ಅದಕ್ಕೆ ಮಾದರಿ ಎಂದು ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.