ಬೆಂಗಳೂರು: ಶಿರಾ ಹಾಗೂ ಆರ್.ಆರ್.ನಗರ ಉಪ ಚುನಾವಣೆ ಮುಗಿದ ನಂತರ ವರಿಷ್ಠರೊಂದಿಗೆ ಚರ್ಚಿಸಿ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯೂಡಿಯೂರಪ್ಪ ಹೇಳಿದರು.
ನಿನ್ನೆ ತುಮಕೂರು ಜಿಲ್ಲೆ ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಹೊರಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ನ.10ರಂದು ಫಲಿತಾಂಶ ಪ್ರಕಟವಾಗಲಿದೆ. ಆ ನಂತರ ಸಂಪುಟ ವಿಸ್ತರಣೆ ಖಚಿತ ಎಂದು ತಿಳಿಸಿದರು.
ಉಪಚುನಾವಣೆ ಮುಗಿದ್ಮೇಲೆ ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ಹೇಳಿಕೆ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಬಿಎಸ್‌ವೈ, ಉಪ ಚುನಾವಣೆ ಮುಗಿದ್ಮೇಲೆ ಎಲ್ಲವೂ ಬದಲಾವಣೆ ಆಗುವುದು ನಿಶ್ಚಿತ. ಕಾಂಗ್ರೆಸ್ ಮತ್ತು ಜಾ.ದಳಕ್ಕೆ ದೊಡ್ಡ ಮುಖಭಂಗ ಆಗುತ್ತೆ ಎಂದು ತಿರುಗೇಟು ನೀಡಿದರು.
ಇನ್ನು ಉಪಚುನಾವಣೆಯಿಂದ ರಾಜ್ಯ ರಾಜಕೀಯದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾಗಲಿವೆ ಎಂಬ ವಿಪಕ್ಷ ನಾಯಕರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿ, ಹೌದು, ಬದಲಾವಣೆಗಳಾಗಲಿವೆ. ಎರಡೂ ಕ್ಷೇತ್ರದಲ್ಲಿಯೂ ಭಾರೀ ಮತಗಳ ಅಂತರದಿಂದ ನಾವು ಗೆಲವು ಸಾಧಿಸಲಿದ್ದೇವೆ. ಕಾಂಗ್ರೆಸ್ ಅದರಿಂದ ಅವಮಾನಕ್ಕೊಳಗಾಗಲಿದೆ ಎಂದರು.
ಇದುವರೆಗೂ ನಾನು ವಿರೋಧ ಪಕ್ಷಗಳ ಆರೋಪಕ್ಕೆ, ಟೀಕೆಗಳಿಗೆ ಒಂದು ಶಬ್ಧವನ್ನೂ ಮಾತಾಡಿಲ್ಲ. ದೊಡ್ಡ ಅಂತರದಲ್ಲಿ ಎರಡೂ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಇದುವರೆಗೂ ಯಾವುದೇ ಟೀಕೆ ಮಾಡಿಲ್ಲ, ಯಾರ ಹೆಸರೂ ಹೇಳಿಲ್ಲ. ಚುನಾವಣೆ ಮುಗಿದ ಮೇಲೆ ಅವರೇ ಉತ್ತರ ಕೊಡಲಿ ಎಂದು ಹೇಳಿದರು.
ನಾನು ಪ್ರಚಾರಕ್ಕೆ ಹೋಗಬೇಕು ಅಂತ ಇರಲಿಲ್ಲ . ಆದರೆ ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಚಾರಕ್ಕೆ ಹೋಗಿದ್ದಾರೆ. ಮುಖ್ಯಮಂತ್ರಿ ಆಗಿ ನಾನು ಹೋಗಲಿಲ್ಲ ಅಂದರೆ ತಪ್ಪಾಗುತ್ತೆ. ಅದಕ್ಕೆ ಎರಡೂ ಕಡೆ ಪ್ರಚಾರ ಮಾಡಲಿದ್ದೇನೆ ಎಂದರು.