ಬೆಂಗಳೂರು: ಮಹಾಮಾರಿ ಕೋವಿಡ್ ಸೋಂಕಿನಿಂದ ಮೃತಪಟ್ಟ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಕುಟುಂಬದವರಿಗೆ ರಾಜ್ಯ ಸರ್ಕಾರ ಚೆಕ್ ಹಸ್ತಾಂತರಿಸಿದೆ.
ಇಂದು ವಿಧಾನಸೌಧದ ಆವರಣದಲ್ಲಿ ನಡೆದ ರಸ್ತೆ ಸಾರಿಗೆ ಸಂಸ್ಥೆಯಿಂದ ನಮ್ಮ ಕಾರ್ಗೋ ಸೇವೆ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೃತಪಟ್ಟ ಸಾರಿಗೆ ನೌಕರರ ಏಳು ಕುಟುಂಬದವರಿಗೆ ಸಾಂಕೇತಿಕವಾಗಿ ಚೆಕ್ ವಿತರಿಸಿದರು.
ಬಳಿಕ ಮಾತನಾಡಿದ ಅವರು, ಸಾರಿಗೆ ಇಲಾಖೆ ಆದಾಯ ಹೆಚ್ಚಿಸಿ ಗ್ರಾಹಕರಿಗೆ ಮತ್ತಷ್ಟು ಹೆಚ್ಚಿನ ಸೌಲಭ್ಯ ನೀಡುವ ನೂತನ ಕಾರ್ಗೋ ಸೇವೆಗೆ ಇಂದಿನಿಂದ ಚಾಲನೆ ನೀಡಲಾಗಿದೆ. ಈ ಸೇವೆ ದಕ್ಷಿಣ ಭಾರತದ ರಾಜ್ಯಗಳಿಗೆ ದೊರಕಲಿದೆ ಎಂದ ಅವರು, ರು.ನಿಗಮ ಪ್ರತಿದಿನ 38 ಲಕ್ಷ ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ಒದಗಿಸುತ್ತಿದೆ ಎಂದು ಹೇಳಿದರು.
ಕೊರೊನಾದಿಂದ ಸಾರಿಗೆ ಸಂಸ್ಥೆಗಳು ನಷ್ಟ ಅನುಭವಿಸಿದ್ದಾವೆ. ಇದರ ಮಧ್ಯೆ ಸಾರಿಗೆ ಇಲಾಖೆ ಕಾರ್ಗೋ ಸೇವೆ ಒದಗಿಸುತ್ತಿದೆ. ಈ ಸೇವೆಯಿಂದ ಸಾರಿಗೆ ಸಂಸ್ಥೆಗೆ ಲಾಭವಾಗಲಿದೆ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದರು.
ಸಾರಿಗೆ ಸಿಬ್ಬಂದಿ ಜೀವಪಣಕ್ಕಿಟ್ಟು ಕೆಲಸ ಮಾಡಿದ್ದಾರೆ. ಕೊರೊನಾಗೆ ಬಲಿಯಾದ ಸಿಬ್ಬಂದಿಗೆ 30 ಲಕ್ಷ ರೂ. ಪರಿಹಾರ ವಿತರಿಸಿದ್ದೇವೆ ಎಂದು ತಿಳಿಸಿದರು.
ಹಳೆ ಬಸ್ ಮಾರಿದರೆ ಒಂದರಿಂದ 1.5 ಲಕ್ಷ ರೂ. ಬರುತ್ತಿತ್ತು ಅದರ ಬದಲು ಅವುಗಳನ್ನು ಸಂಚಾರಿ ರಕ್ತನಿಧಿ ಕೇಂದ್ರಗಳಾಗಿ ಮಾಡುತ್ತಿದ್ದೇವೆ. ಜತೆಗೆ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಿಗಾಗಿ ಸ್ನಾನಗೃಹವನ್ನು ಮಾಡುತ್ತೇವೆ ಎಂದು ಹೇಳಿದರು.
ಸಚಿವರಾದ ಉಮೇಶ್ ಕತ್ತಿ, ಡಾ.ಕೆ.ಸುಧಾಕರ್, ಕೆಎಸ್ಸಾರ್ಟಿಸಿ ಎಂಡಿ ಶಿವಯೋಗಿ ಕಳಸದ, ಬಿಎಂಟಿಸಿ ಎಂಡಿ ಶಿಖಾ ಮತ್ತಿತರರು ಇದ್ದರು.