ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೆ 24 ಮಂದಿ ಕೊರೊನಾ ರೋಗಿಗಳು ಮೃತಪಟ್ಟಿರುವುದಕ್ಕೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗರಂ ಆಗಿದ್ದಾರೆ.
ದುರಂತ ಸಂಭವಿಸಿದ ಬಳಿಕ ಯಡಿಯೂರಪ್ಪ ಸುಧಾಕರ್ ಅವರನ್ನು ಕರೆದು ಮಾತನಾಡಿದ್ದಾರೆ. ಈ ವೇಳೆ, ಮೈಸೂರು ಜಿಲ್ಲಾಧಿಕಾರಿಯೇ ನೇರ ಕಾರಣ. ಎಂದು ರೋಹಿಣಿ ಸಿಂಧೂರಿ ವಿರುದ್ಧ ಆರೋಗ್ಯ ಸಚಿವ ಸುಧಾಕರ್ ಸಿಎಂಗೆ ಹೇಳಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಅಷ್ಟೇ ಅಲ್ಲದೇ ಸಿಎಂ ಸಹ ರೋಹಿಣಿ ಸಿಂಧೂರಿ ವಿರುದ್ಧ ಈ ವಿಚಾರದ ಬಗ್ಗೆ ಗರಂ ಆಗಿದ್ದು, ಇಂದೇ ಸಿಂಧೂರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸುಧಾಕರ್, ಚಾಮರಾಜನಗರದ ಘಟನೆ ನೋವಿನ ಸಂಗತಿಯಾಗಿದೆ. ಸಿಎಂ ಜತೆ ಚರ್ಚಿಸಿದ್ದೇನೆ. ತಕ್ಷಣ ಚಾಮರಾಜನಗರ, ಮಂಡ್ಯ, ಮೈಸೂರಿಗೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದಾರೆ.