ವಿಜಯಪಥ ಸಮಗ್ರ ಸುದ್ದಿ
ತಿ.ನರಸೀಪುರ: ಮಾರಕ ವೈರಾಣು ರೋಗ ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ವಿಧಿಸಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ವ್ಯಾಪಾರ ನಡೆಸುತ್ತಿದ್ದ ಅಂಗಡಿ ಮುಂಗಟ್ಟುಗಳ ಮೇಲೆ ಭಾನುವಾರ ಬೆಳಗ್ಗೆ ದಾಳಿ ಮಾಡಿದ ಪುರಸಭೆ ಅಧಿಕಾರಿ ಮಾಂಸ ಮಾರಾಟ ಅಂಗಡಿಗಳು ಸೇರಿದಂತೆ ಹಲವು ದಿನಸಿ ಅಂಗಡಿಗಳ ಮಾಲೀಕರಿಗೆ ದಂಡ ವಿಧಿಸಿದರು.
ಹೆಚ್ಚುತ್ತಿರುವ ಕೊರೊನಾ ಎರಡನೇ ಅಲೆಯ ಸೊಂಕಿನ ನಿಯಂತ್ರಣಕ್ಕೆ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿರುವ ಮಧ್ಯೆ ಅಗತ್ಯ ವಸ್ತುಗಳ ಖರೀದಿಸಲು ನೀಡಿರುವ ವಿನಾಯಿತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಆರಂಭಿಸಿರುವ ಪುರಸಭೆ ಅಧಿಕಾರಿಗಳು ಅಧ್ಯಕ್ಷ ಎನ್.ಸೋಮು ಮತ್ತು ಮುಖ್ಯಾಧಿಕಾರಿ ಅಶೋಕ ಅವರ ನೇತೃತ್ವದಲ್ಲಿ ಚಿಕನ್ ಮತ್ತ ಮಟನ್ ಮಾರಾಟ ಹಾಗೂ ದಿನಸಿ ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸಿದರು.
ಮತ್ತೊಮ್ಮೆ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಕಂಡು ಬಂದಲ್ಲಿ ಅಂಗಡಿ ಲೈಸೆನ್ಸ್ ರದ್ದುಪಡಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಖ್ಯಾಧಿಕಾರಿ ಅಶೋಕ ಮಾತನಾಡಿ, ಲಿಂಕ್ ರಸ್ತೆಯಲ್ಲಿರುವ ಮಾಂಸ ಮಾರಾಟ ಅಂಗಡಿಗಳು ಸೇರಿದಂತೆ ಪ್ರಮುಖ ರಸ್ತೆಗಳಲ್ಲಿರುವ ನಿತ್ಯ ಬಳಕೆ ಅಗತ್ಯ ವಸ್ತುಗಳ ಮಾರಾಟದ ಅಂಗಡಿಗಳಲ್ಲಿ ಸರ್ಕಾರದ ಮಾರ್ಗಸೂಚಿ ಉಲ್ಲಂಘನೆಯಾಗುತ್ತಿರುವುದು ಕಂಡುಬಂದುದ್ದರಿಂದ ಕಾರ್ಯಾಚರಣೆ ನಡೆಸಿ 10 ಸಾವಿರ ರೂ.ಗಳ ದಂಡವನ್ನು ವಿಧಿಸಿದ್ದೇವೆ. ಅಂಗಡಿ ಮಾಲೀಕರು ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಕಠಿಣ ಕ್ರಮ ಅನಿವಾರ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಾಚರಣೆಯಲ್ಲಿ ಅಧ್ಯಕ್ಷ ಎನ್.ಸೋಮು, ಕಂದಾಯ ಅಧಿಕಾರಿ ಪುಟ್ಟಸ್ವಾಮಿ, ಅರೋಗ್ಯಧಿಕಾರಿ ಚೇತನ್ ಕುಮಾರ್, ಸಿಬ್ಬಂದಿಗಳಾದ ಮಹೇಂದ್ರ, ಬನ್ನಹಳ್ಳಿಹುಂಡಿ ಪುಟ್ಟಸ್ವಾಮಿ, ಕೃಷ್ಣಪ್ಪ, ನಿಂಗರಾಜು ಹಾಗೂ ಇತರರು ಭಾಗವಹಿಸಿದ್ದರು.