ಮುಂಬೈ: ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರ ಮುಂಬೈ ನಿವಾಸದ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದು, ಹಲವು ವಸ್ತುಗಳನ್ನು ನಾಶ ಮಾಡಿ ಪರಾರಿಯಾಗಿದ್ದಾರೆ.
ಮುಂಬೈನ ದಾದರ್ ನಲ್ಲಿರುವ ಅಂಬೇಡ್ಕರ್ ಅವರ ಐತಿಹಾಸಿಕ “ರಾಜ್ ಗೃಹ”ಕ್ಕೆ ಮಂಗಳವಾರ ಸಂಜೆ ನುಗ್ಗಿರುವ ಅಪರಿಚಿತ ಪಾಪಿಗಳು ಸಿಸಿ ಕ್ಯಾಮರಾ, ಗ್ಲಾಸ್ ಪ್ಯಾನ್ಸ್, ಹೂ ಕುಂಡಗಳನ್ನು ಒಡೆದು ಹಾಕಿ ಕುಕೃತ್ಯ ಮೆರೆದಿದ್ದಾರೆ.
ನಮ್ಮ ಕುಟುಂಬದವರು ಮನೆಯಲ್ಲಿ ಇದ್ದಾಗಲೇ ಬಂದ ಕಿಡಿಗೇಡಿಗಳು ಎರಡು ಕೊಠಡಿಗಳತ್ತ ಕಲ್ಲು ತೂರಿದ್ದಾರೆ. ಒಂದು ಕೊಠಡಿ ಮ್ಯೂಸಿಯಂ, ಫೋಟೋ ಗ್ಯಾಲರಿ ಹಾಗೂ ಬಾಬಾಸಾಹೇಬ್ ಅವರ ಪುಸ್ತಕ ಕೊಠಡಿ, ಅವರ ಕಚೇರಿ/ಸಭಾ ಕೊಠಡಿಗೆ ನುಗ್ಗಿ ದಾಂಧಲೆ ಮಾಡಿದ್ದಾರೆ ಎಂದು ಡಾ. ಅಂಬೇಡ್ಕರ್ ಅವರ ಮೊಮ್ಮಗ, ವಂಚಿತ್ ಬಹುಜನ್ ಅಘಾಡಿ ಅಧ್ಯಕ್ಷ, ಅಂಬೇಡ್ಕರ್ ಪುತ್ರ ಪ್ರಕಾಶ್ ಅಂಬೇಡ್ಕರ್ ಮಗ ಸುಜತ್ ತಿಳಿಸಿದ್ದಾರೆ.
ಯಾವುದೇ ಕಾರಣಕ್ಕೂ ರಾಜ್ ಗೃಹ ಪ್ರದೇಶಕ್ಕೆ ತೆರಳಬೇಡಿ, ಅಲ್ಲದೇ ಶಾಂತಿ ಕಾಪಾಡಿ ಎಂದು ದಲಿತಪರ ಸಂಘಟನೆಗಳ್ಲಿ ಡಾ.ಪ್ರಕಾಶ್ ಅಂಬೇಡ್ಕರ್ ಮನವಿ ಮಾಡಿದ್ದಾರೆ.
ದಾಂಧಲೆ ಸುದ್ದಿ ಹರಡುತ್ತಿದ್ದಂತೆಯೇ ಸ್ಥಳಕ್ಕೆ ದಲಿತ ಸಂಘಟನೆ ಪದಾಧಿಕಾರಿಗಳು ಧಾವಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ನಡುವೆ ಪಾಪಿಗಳ ಘಟನೆಯನ್ನು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಖಂಡಿಸಿದ್ದು, ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಈ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಪಾಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.