ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ಇತಿಹಾಸದಲ್ಲಿ ಬಿಜೆಪಿ ಪ್ರಥಮ ಬಾರಿಗೆ ಮೇಯರ್ ಪಟ್ಟವನ್ನು ಅಲಂಕರಿಸಿದೆ.
ಕಮಲ ಗದ್ದುಗೆ ಹಿಡಿಯಲು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರ ಪಾತ್ರ ಬಹಳ ದೊಡ್ಡದಿದೆ. ಪಕ್ಷಕ್ಕಾಗಿ ಅವರ ದುಡಿಮೆ, ಶ್ರಮ ನಿಜಕ್ಕೂ ಸಾರ್ಥಕವಾಗಿದೆ. ಈ ಅವಕಾಶವನ್ನು ಪಕ್ಷ ಸದುಪಯೋಗಪಡಿಸಿಕೊಂಡು ಮೈಸೂರಿನಲ್ಲಿ ಮತ್ತಷ್ಟು ಅಭಿವೃದ್ಧಿಯನ್ನು ಮಾಡಿ ತೋರಿಸಲಿ ಎಂದು ಹಾರೈಸುವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಜ್ಯಾಧ್ಯಕ್ಷರಿಂದ ಅಭಿನಂದನೆ: ಈ ಸಂಬಂಧ ಶ್ಲಾಘನೆಯ ಮಾತುಗಳನ್ನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್, ಮೈಸೂರಿನಲ್ಲಿ ಬಿಜೆಪಿ ಪಾಲಿಗೆ ಹೊಸ ಇತಿಹಾಸ ಸೃಷ್ಟಿ ಮಾಡಿದೆ. ಪಕ್ಷಕ್ಕಾಗಿ ಸೇವೆ ಹೀಗೆಯೇ ಮುಂದುವರಿಯಲಿ ಎಂದಿದ್ದಾರೆ.
ಸಂಸದ ಪ್ರತಾಪ್ ಸಿಂಹ ಮಾತನಾಡಿ, ಇದೇ ಪ್ರಥಮ ಬಾರಿಗೆ ಬಿಜೆಪಿಗೆ ಮೇಯರ್ ಪಟ್ಟ ಒಲಿದಿರುವುದು ಸಂತಸ ತಂದಿದೆ. ಕೊನೆಗೂ ಬಹುವರ್ಷಗಳ ಕನಸು ಈಡೇರಿದಂತಾಗಿದೆ. ಇದಕ್ಕೆ ನಮ್ಮ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ಕಾರ್ಯತಂತ್ರ ಅಡಗಿದೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಶಾಸಕ ಎಲ್.ನಾಗೇಂದ್ರ ಮಾತನಾಡಿ, ಮೈಸೂರಿನ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಉಸ್ತುವಾರಿ ಸಚಿವರು, 1600ಕ್ಕೂ ಹೆಚ್ಚು ಪ್ರಾಣಿ ಸಂಕುಲಗಳನ್ನು ಹೊಂದಿರುವ ಜಯಚಾಮರಾಜೇಂದ್ರ ಮೃಗಾಲಯಕ್ಕೆ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ 135 ವರ್ಷಗಳ ಇತಿಹಾಸದಲ್ಲಿ ಅತಿ ಹೆಚ್ಚಿನ ದೇಣಿಗೆ ಸಂಗ್ರಹಿಸಿ ದಾಖಲೆ ನಿರ್ಮಿಸಿದ್ದರು.
ಇದೀಗ ಇದೇ ಪ್ರಥಮ ಬಾರಿಗೆ ಅಂಥದ್ದೇ ಒಂದು ದಾಖಲೆಯನ್ನು ಮೈಸೂರು ಪಾಲಿಕೆ ಇತಿಹಾಸದಲ್ಲಿ ಮೇಯರ್ ಹುದ್ದೆ ಬಿಜೆಪಿಗೆ ಒಲಿಯುವಂತೆ ಮಾಡಿದ್ದಾರೆ ಎಂದು ಹೇಳಿದರು.
4ನೇ ಪ್ರಯತ್ನದಲ್ಲಿ ಯಶ ಕಂಡ ಸುನಂದಾ ಪಾಲನೇತ್ರ: ಕಳೆದ ಎರಡೂವರೆ ವರ್ಷಗಳಿಂದ ಮೈಸೂರು ಮಹಾನಗರ ಪಾಲಿಕೆಯಲ್ಲಿ ಇದ್ದ ಕಾಂಗ್ರೆಸ್-ಜಾ.ದಳ ಮೈತ್ರಿ ಮುರಿದು ಬಿದ್ದಿದ್ದು, ನಗರಪಾಲಿಕೆಯ 37 ವರ್ಷದ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿದೆ.
23ನೇ ಮಹಾಪೌರರಾಗಿ 59ನೇ ವಾರ್ಡಿನ ಸದಸ್ಯರಾದ ಬಿಜೆಪಿಯ ಸುನಂದಾ ಪಾಲನೇತ್ರ ಆಯ್ಕೆಯಾಗುವ ಮೂಲಕ ನಗರಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಕಮಲವನ್ನು ಅರಳಿಸಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ನಡೆದಿದ್ದ ಚುನಾವಣೆಯಲ್ಲಿ ಪರಾಜಿತರಾಗಿ ಕಣ್ಣೀರು ಹಾಕಿ, ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದ ಸುನಂದಾ ಪಾಲನೇತ್ರ ಅವರು ಕೊನೆಗೂ 4ನೇ ಪ್ರಯತ್ನದಲ್ಲಿ ಯಶಸ್ವಿಯಾಗಿ ಬಹುವರ್ಷಗಳ ಕನಸನ್ನು ನನಸು ಮಾಡಿಕೊಂಡರು.