ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ, ಭಾರತೀಯ ಜನತಾ ಪಕ್ಷಕ್ಕೆ ಆಶೀರ್ವದಿಸಿದ ಕ್ಷೇತ್ರದ ಎಲ್ಲ ಮತದಾರ ಬಂಧುಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಆದರೆ, ಮಸ್ಕಿಯಲ್ಲಿ ಪಕ್ಷದ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಸೋಲು ಅನುಭವಿಸಿರುವುದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಜನಾದೇಶಕ್ಕೆ ತಲೆಬಾಗುತ್ತೇವೆ ಎಂದು ಕ್ಷೇತ್ರದಲ್ಲಿ ಸಕ್ರಿಯವಾಗಿ ಪ್ರಚಾರ ನಡೆಸಿದ್ದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.
ಇನ್ನು ಸಿಎಂ ಬಸವಕಲ್ಯಾಣ ಕ್ಷೇತ್ರದ ಜನರ ವಿಶ್ವಾಸ ಗಳಿಸಿ, ಗೆಲುವು ಸಾಧಿಸಿದ ನಮ್ಮ ಅಭ್ಯರ್ಥಿ ಶರಣು ಸಲಗರ ಅವರಿಗೆ ಮತ್ತು ಅಲ್ಲಿನ ಎಲ್ಲಾ ನಮ್ಮ ಕಾರ್ಯಕರ್ತರಿಗೆ ಅಭಿನಂದನೆಗಳು ಎಂದಷ್ಟೇ ಟ್ವೀಟ್ ಮಾಡಿದ್ದು, ಸೋಲಿನ ಬಗ್ಗೆ ಮೌನವಹಿಸಿರುವುದು ಸೋತ ಪಕ್ಷದ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಮತ್ತು ಕ್ಷೇತ್ರದ ಕಾರ್ಯಕರ್ತರಿಗೆ ನೋವಾಗಿದೆ ಎಂದು ಹೇಳಲಾಗುತ್ತಿದೆ.
ಈ ನಡುವೆ ಗೆದ್ದ ಶರಣು ಸಲಗರ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಗೆಲುವನ್ನು ಕ್ಷೇತ್ರದ ಜನತೆಗೆ ಅರ್ಪಿಸುತ್ತೇನೆ. ಜತೆಗೆ ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಪರಿಶ್ರಮ ಇಲ್ಲಿ ಸಾಕಷ್ಟಿದೆ. ಈ ಹಿನ್ನೆಲೆಯಲ್ಲೇ ನಾನು ಗೆಲುವು ಕಾಣಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.