ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ತಾಲೂಕಿನ ತೆಲಗಿನಕುಪ್ಪೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತು ಒಂದೂವರೆ ತಿಂಗಳು ಕಳೆದರೂ ಸಹ ಸಂಬಂಧಪಟ್ಟವರು ನಿರ್ವಹಣೆ ಮಾಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಬೇಸಿಗೆ ಮುಗಿದು ಮಳೆಗಾಲ ಪ್ರಾರಂಭವಾಗುತ್ತಿರುವ ಈ ಸಂದರ್ಭದಲ್ಲಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಿದೆ. ಇದರ ನಡುವೆ ಇದ್ದ ಶುದ್ಧ ಕುಡಿಯುವ ನೀರಿನ ಘಟಕಗಳು ಅಧಿಕಾರಿಗಳು ಮತ್ತು ಗ್ರಾ.ಪಂ.ಸಿಬ್ಬಂದಿ ನಿರ್ಲಕ್ಷ್ಯದಿಂದ ಕೆಟ್ಟು ನಿಂತಿವೆ.
ಇದರ ನಡುವೆ ಗ್ರಾಮಸ್ಥರಿಗೆ ಕುಡಿಯುವ ನೀರಿಗೆ ಅನಾನುಕೂಲ ಉಂಟಾಗಿರುತ್ತದೆ ಹಾಗೂ ಮನೆಗಳಿಗೆ ನೀರಿನ ಸರಬರಾಜನ್ನು ಸಹ 3 ದಿನಗಳಿಗೊಮ್ಮೆ ಇಷ್ಟ ಬಂದ ಸಮಯದಲ್ಲಿ ಬಿಡುತ್ತಿದ್ದಾರೆ. ಗ್ರಾಮದಲ್ಲಿ ಬಹುತೇಕರು ರೈತರಾಗಿರುವ ಕಾರಣ ನೀಡು ಬಿಡುವ ಸಂದರ್ಭದಲ್ಲಿ ಜಮೀನಿನ ಕೆಲಸಕ್ಕೆ ಹೋಗಿರುತ್ತಾರೆ.
ಇದರಿಂದ ನಾವು ನೀರನ್ನು ಸಹ ತುಂಬಿಕೊಳ್ಳಲು ಆಗುತ್ತಿಲ್ಲ ಹಾಗೂ ಈ ಬೇಸಿಗೆಯ ಸಂದರ್ಭದಲ್ಲಿ ಕೆರೆಗಳೆಲ್ಲ ಬತ್ತಿದ್ದು ಗ್ರಾಮದಲ್ಲಿ ಜಾನುವಾರುಗಳಿಗೆ ನೀರು ಕುಡಿಯಲು ತೊಟ್ಟಿಗಳನ್ನು ಕಟ್ಟಿಸಿದ್ದರೂ ಸಹ ವಾಟರ್ ಮನ್ ನೀರನ್ನು ಸರಿಯಾಗಿ ಬಿಡದೆ ಜಾನುವಾರುಗಳಿಗೂ ಸಹ ಕುಡಿಯಲು ನೀರಿಲ್ಲದೆ ತೊಂದರೆಯಾಗಿರುತ್ತದೆ.
ಚುನಾಯಿತ ಪ್ರತಿನಿಧಿಗಳು ಕಂಡೂ ಕಂಡರಿಯದಂತೆ ತಿರುಗಾಡುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಮೇಲಧಿಕಾರಿಗಳು ಶೀಘ್ರದಲ್ಲಿ ಕ್ರಮ ವಹಿಸಿ ನಮಗೆ ಹಾಗೂ ಜಾನುವಾರುಗಳಿಗೆ ನೀರಿನ ಸೌಲಭ್ಯವನ್ನು ಶೀಘ್ರದಲ್ಲಿ ಕಲ್ಪಿಸಿಕೊಡಬೇಕೆಂದು ಗ್ರಾಮದ ಶಿವಣ್ಣ ನಟರಾಜ್ ರಾಜುಗೌಡ ರಮೇಶ್ ಇತರರು ಒತ್ತಾಯಿಸಿದ್ದಾರೆ.