ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಅನ್ಲಾಕ್ ಬಳಿಕ ಬಿಎಂಟಿಸಿ ಬಸ್ ಟಿಕೆಟ್ ದರವನ್ನು ಶೇ.20ರಷ್ಟು ಹೆಚ್ಚಿಸಲು ಸಾರಿಗೆ ಸಂಸ್ಥೆ ಚಿಂತನೆ ನಡೆಸಿದ್ದು, ಪ್ರಯಾಣಿಕರ ಮೇಲೆ ಮತ್ತೆ ಆರ್ಥಿಕ ಹೊರೆ ಹೇರಲು ಮುಂದಾಗಿದೆ.
ಇಂದಿನಿಂದ ರಾಜ್ಯಾದ್ಯಂತ ಕೆಎಸ್ಆರ್ಟಿಸ್ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಈ ನಡುವೆ ಲಾಕ್ಡೌನ್ ತೆರವಾದ ಕೂಡಲೇ ಬೆಂಗಳೂರಿನಲ್ಲಿ ಬಿಎಂಟಿಸಿ ಟಿಕೆಟ್ ದರವನ್ನು ಹೆಚ್ಚಿಸಲು ಚಿಂತನೆ ನಡೆಸಲಾಗಿದೆ. ಇದರಿಂದ ಲಾಕ್ಡೌನ್ ಬಳಿಕ ಬಿಎಂಟಿಸಿ ಬಸ್ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುವುದು ಬಹುತೇಕ ಖಚಿತ ಎನ್ನಲಾಗಿದೆ.
ಟಿಕೆಟ್ ದರ ಹೆಚ್ಚಿಸುವಂತೆ ಈಗಾಗಲೇ ಸರ್ಕಾರಕ್ಕೆ ಬಿಎಂಟಿಸಿ ನಿಗಮ ಪ್ರಸ್ತಾವನೆ ಸಲ್ಲಿಸಿದೆ. ಡೀಸೆಲ್ ಬೆಲೆ ಗಣನೀಯವಾಗಿ ಏರಿಕೆಯಾಗುತ್ತಿರುವುದರಿಂದ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಈ ಹಿಂದೆ ಬಜೆಟ್ ಸಂದರ್ಭದಲ್ಲಿ ಬಿಎಂಟಿಸಿ ಟಿಕೆಟ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಸರ್ಕಾರ ಆಗ ಹೆಚ್ಚಳದ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಕಳೆದ ವರ್ಷ ಜೂನ್ ನಲ್ಲಿ 65.85 ರೂಪಾಯಿ ಇದ್ದ ಡಿಸೇಲ್ ಬೆಲೆ ಈ ವರ್ಷ ಜೂನ್ ನಲ್ಲಿ 91.18 ರೂಪಾಯಿಗೆ ಏರಿಕೆಯಾಗಿದೆ. ಕೊರೊನಾದಿಂದಾಗಿ ಬಿಎಂಟಿಸಿ ಬಸ್ ಸಂಚಾರ ಸಂಪೂರ್ಣ ಸ್ತಬ್ಧವಾಗಿತ್ತು. ಹೀಗಾಗಿ, ಆರ್ಥಿಕ ನಷ್ಟದಿಂದಾಗಿ ಟಿಕೆಟ್ ದರ ಹೆಚ್ಚಳ ಕುರಿತು ಬಿಎಂಟಿಸಿ ನಿಗಮ ಸರ್ಕಾರಕ್ಕೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಿದೆ.