ಪಿರಿಯಾಪಟ್ಟಣ: ನಾನು ಶಾಸಕನಾದ ನಂತರ ಮದ ಬಂದ ಆನೆತರ ಮನೆಯಲ್ಲಿ ಬಿದ್ದಿಲ್ಲ, ಅಭಿವೃದ್ಧಿ ವಿಷಯದಲ್ಲಿ ಯಾವುದೇ ತಾರತಮ್ಯ ಮಾಡದೆ ಎಲ್ಲಾ ಗ್ರಾಮಗಳಿಗೂ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕ ಕೆ.ಮಹದೇವ್ ತಿಳಿಸಿದ್ದಾರೆ.
ತಾಲೂಕಿನ ಚನ್ನೇನಹಳ್ಳಿ, ಚೌಡೇನಹಳ್ಳಿ, ಬೆಳತೂತು, ಮಲ್ಲಿನಾಥಪುರ ಗ್ರಾಮಗಳಲ್ಲಿ ಶನಿವಾರ ಗ್ರಾಮ ಪರಿಮಿತಿ ರಸ್ತೆಗಳಿಗೆ ಗುದ್ದಲಿಪೂಜೆ ನೆರವೇರಿಸಿ ಚನ್ನೇನಹಳ್ಳಿ ಗ್ರಾಮದಲ್ಲಿ ಮಾತನಾಡಿದರು.
ತಾಲೂಕಿನ ಬಹುತೇಕ ಗ್ರಾಮಗಳು 50 ವರ್ಷಗಳಿಂದ ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುತ್ ಸೇರಿ ಇನ್ನಿತರ ಮೂಲಭೂತ ಸೌಲಭ್ಯ ಕಾಣದೆ ನನೆಗುದ್ದಿಗೆ ಬಿದ್ದಿವೆ. ನಾನು ಶಾಸಕನಾದ ನಂತರ ಹಿಂದಿನವರ ರೀತಿಯಲ್ಲಿ ಗ್ರಾಮಗಳಲ್ಲಿ ದ್ವೇಷವನ್ನು ಬಿತ್ತಿ ನನ್ನ ಜನರನ್ನು ಪೊಲೀಸ್- ಕೋರ್ಟ್ ಮೆಟ್ಟಿಲೇರಿಸುವ ಕೆಲಸ ಮಾಡುತ್ತಿಲ್ಲ. ಈ ಕಾರಣಕ್ಕೆ ತಾಲೂಕಿನ ಪೊಲೀಸ್ ಠಾಣೆಗಳಲ್ಲಿ ಸಿವಿಲ್ ಕೇಸ್ ಹೊರತುಪಡಿಸಿ ಯಾವುದೇ ಕ್ರಿಮಿನಲ್ ಪ್ರಕರಣಗಳು ದಾಖಲಾಗುತ್ತಿಲ್ಲ ಎಂದರು.
ನಾನು ಶಾಸಕನಾಗಲು ಅನೇಕ ಗ್ರಾಮಗಳ ಜನರು ಸಹಕಾರ ನೀಡಿದ್ದಾರೆ. ಹಿಂದಿನವರು ಇಲ್ಲಿನ ಜನರು ನನ್ನ ಪರವಾಗಿದ್ದಾರೆ ಎಂಬ ಕಾರಣಕ್ಕೆ ಆ ಗ್ರಾಮಗಳಿಗೆ ಯಾವುದೇ ಮೂಲಭೂತ ಸೌಲಭ್ಯಗಳನ್ನು ನೀಡದೆ ದ್ವೇಷದ ರಾಜಕಾರಣ ಮಾಡುತ್ತಿದ್ದರು ಹಾಗೂ ಅನೇಕ ಗುತ್ತಿಗೆದಾರರಿಗೆ ಅವರು ಮಾಡುತ್ತಿದ್ದ ಕಾಮಗಾರಿಗಳನ್ನು ತಡೆಯುವುದು ಹಾಗೂ ಅವರಿಗೆ ಬಿಲ್ ಮಾಡದಂತೆ ಮಾಡುತ್ತಿದ್ದರು ಎಂದು ಮಾಜಿ ಶಾಸಕ ಕೆ.ವೆಂಕಟೇಶ್ ಹೆಸರೇಳದೆ ಕುಟುಕಿದರು.
ಈಗ ದರಿದ್ರ ಸರ್ಕಾರ ಬಂದಿದೆ
ಮೈತ್ರಿ ಸರ್ಕಾರ ಇದ್ದಾಗ ಹೆಚ್ಚು ಅನುದಾನ ಬರುತ್ತಿತ್ತು, ಈಗ ದರಿದ್ರ ಸರ್ಕಾರ ಬಂದಿದೆ. ಇಂಥ ಸಮಯದಲ್ಲಿ ಒಮ್ಮೆಲೇ ತಾಲೂಕಿನ ಎಲ್ಲಾ ಗ್ರಾಮಗಳ ಅಭಿವೃದ್ಧಿ ಕಷ್ಟಸಾಧ್ಯ, ನಾನು ಶಾಸಕನಾಗಲು ಸಾಕಷ್ಟು ಜನರ ಶ್ರಮವಿದೆ. ಆದರೂ ಇವರ ಅಗತ್ಯತೆಗಳಿಗೆ ಅನುಗುಣವಾಗಿ ಕೆಲಸ ಮಾಡಲು 5 ವರ್ಷ ಸಾಕಾಗುವುದಿಲ್ಲ ಸಾಧ್ಯವಾದಷ್ಟು ಈ ಜನರ ಎಲ್ಲಾ ಕೆಲಸವನ್ನು ಮಾಡಿ ಮುಗಿಸಲು ಪ್ರಯತ್ನಿಸುತ್ತೇನೆ ಯಾರೂ ಬೇಸರ ಮಾಡಿಕೊಳ್ಳಬೇಡಿ ಎಂದರು.
ತಾಪಂ ಇಒ ಸಿ.ಆರ್.ಕೃಷ್ಣಕುಮಾರ್, ಎಇಇ ಮಂಜುನಾಥ್, ಬಿಇಒ ವೈ.ಕೆ.ತಿಮ್ಮೇಗೌಡ, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಸೋಮಯ್ಯ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಶಿರಸ್ತೇದಾರ್ ಸಣ್ಣಸ್ವಾಮಿ, ಕೃಷಿ ಇಲಾಖೆ ಸಹಾಯಕ ಮಹೇಶ್, ಸಮಾಜ ಕಲ್ಯಾಣ ಅಧಿಕಾರಿ ಸಿದ್ದೇಗೌಡ ಚಿಟ್ಟೇನಹಳ್ಳಿ ಗ್ರಾಪ ಪಂಚಾಯಿತಿ ಅಧ್ಯಕ್ಷ ಮಹದೇವ್, ಉಪಾಧ್ಯಕ್ಷೆ ಸುಧಾರಾಣಿ, ಸದಸ್ಯರಾದ ಪ್ರಕಾಶ್, ಕುಮಾರ್, ಮುಖಂಡರಾದ ಸಿ.ಎನ್.ರವಿ, ಸಚ್ಚಿದಾನಂದ, ರಂಗಸ್ವಾಮಿ, ರಘುನಾಥ್, ಶಿವಶಂಕರ್ ಮತ್ತಿತರರು ಇದ್ದರು.