ಪಿರಿಯಾಪಟ್ಟಣ: ನಮ್ಮ ಭೂಮಿ ನಮ್ಮದು ಎಂಬ ಘೋಷಣೆಯೊಂದಿಗೆ ಭೂ ದಾಖಲಾತಿಗಳಿಗಾಗಿ ಸಾಮಾಜಿಕ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ದಲಿತ ಚಳವಳಿ ನವನಿರ್ಮಾಣ ವೇದಿಕೆ ರಾಜ್ಯ ಸಂಚಾಲಕ ಹರಿಹರ ಆನಂದಸ್ವಾಮಿ ತಿಳಿಸಿದರು.
ತಾಲೂಕಿನ ಆವರ್ತಿ ಗ್ರಾಮದಲ್ಲಿರುವ ಸೂರ್ಯ ವಸತಿ ಗೃಹದ ಆವರಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
70 ರ ದಶಕದಲ್ಲಿ ಭೂಮಿ ಇಲ್ಲದ ನಿರ್ಗತಿಕರಿಗೆ ಸರ್ಕಾರದಿಂದ ಭೂಮಿ ಕೊಡಿಸಿದ ದಲಿತ ಸಂಘಟನೆ ಈಗ ಅದೇ ಭೂ ಹಿಡುವಳಿದಾರರಿಗೆ ಸಂಬಂಧಪಟ್ಟ ಅಧಿಕಾರಿಗಳಿಂದ ದಾಖಲೆಗಳನ್ನು ಕೊಡಿಸಿ ಕೊಡಲು ತೀವ್ರ ಹೊರಟ ನಡೆಸುವ ಅನಿವಾರ್ಯತೆ ಒದಗಿ ಬಂದಿದ್ದು, ಎಡ ಮತ್ತು ಬಲಗೈ ಸಮುದಾಯದ ವೈಷಮ್ಯದಿಂದ ಹೋರಾಟದ ಬಲಹೀನವಾಗಿ ಅತಂತ್ರ ಗೊಂಡಿರುವುದರಿಂದ ಸಣ್ಣಪುಟ್ಟ ಸಮುದಾಯಗಳು ಇನ್ನೂ ಹೀನ ಸ್ಥಿತಿಗೆ ತಲುಪಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ವಿಚಾರವಾದಿ ಪ್ರೊ ಎಚ್.ಗೋವಿಂದಯ್ಯ ಮಾತನಾಡಿ, ಸಂಘಟನೆ ಶಕ್ತಿಯುತವಾಗ ಬೇಕಾದರೆ ನಿಷ್ಠೆ ಮತ್ತು ಪ್ರಾಮಾಣಿಕತೆ ಸ್ವಚ್ಛ ಮನಸ್ಸಿನಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸಾಧ್ಯ, ಎಸ್.ಬಂಗಾರಪ್ಪರವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ದರಕಾಸ್ತು ಕಮಿಟಿ ರಚನೆ ಮಾಡುವ ಮೂಲಕ ಅರ್ಜಿಗಳನ್ನು ಆಹ್ವಾನಿಸಿ ಕೆಲವರಿಗೆ ಮಾತ್ರ ಭೂ ದಾಖಲಾತಿಗಳನ್ನು ಮಾಡಲಾಗಿದೆ ವಿನಃ 52 ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿವಿಧ ಕಾರಣಗಳನ್ನು ನೆಪಹೇಳಿ ಬಾಕಿ ಉಳಿಸಲಾಗಿದ್ದು ಅವುಗಳಿಗೆ ಮರುಜೀವ ನೀಡಬೇಕಾಗಿದೆ ಎಂದರು.
ಸೀಗೂರು ವಿಜಯಕುಮಾರ್ ಮಾತನಾಡಿ, ಪಿರಿಯಾಪಟ್ಟಣ ತಾಲೂಕಿನಲ್ಲಿ ಅನೇಕ ಹಿಂದುಳಿದ ವರ್ಗದ ಮತ್ತು ಸಮುದಾಯದ ಜನರಲ್ಲಿ ಹಲವಾರು ರೀತಿಯ ತೊಂದರೆಗಳು ಎದುರಾಗುತ್ತಿದ್ದು ಅವರಿಗೆ ಕನಿಷ್ಠ ಧ್ವನಿಯಾಗಿ ನಿಲ್ಲಲು ಸಂಘಟನೆ ಕಾರ್ಯಪ್ರವೃತ್ತವಾಗಬೇಕಿದೆ ಎಂದರು.
ಮುಖಂಡರಾದ ಬಂಗ್ವಾದಿ ನಾರಾಯಣಪ್ಪ, ತಾ.ಪಂ.ಮಾಜಿ ಸದಸ್ಯ ಟಿ.ಈರಯ್ಯ, ಪಿ.ಸಂಬಯ್ಯ, ಎಚ್.ಡಿ.ರಮೇಶ್, ಕೆ.ಬಿ. ಮೂರ್ತಿ, ಡಿ.ಚಿಕ್ಕವೀರಯ್ಯ, ನೆರಳಕುಪ್ಪೆ ನವೀನ್, ಕನಕ ನಗರ ಅಶೋಕ್, ಚಿಕ್ಕ ಕಮರವಳ್ಳಿ ಅಣ್ಣಯ್ಯ, ರಮೇಶ್, ರಾಜಣ್ಣ, ಆರ್.ಡಿ.ಚಂದ್ರು, ಹೊನ್ನೇನಹಳ್ಳಿ ಲೋಕೇಶ್ ಸೇರಿದಂತೆ ಮತ್ತಿತರರು ಇದ್ದರು.