ಬೆಂಗಳೂರು: ಸತ್ಯಮೇವ ಜಯತೆ ನಮ್ಮ ಸ್ವಾತಂತ್ರ್ಯಕ್ಕೆ ದಾರಿದೀಪವಾಗಿದೆ. ಸ್ವಾತಂತ್ರ್ಯ ಹೋರಾಟದ ಒಳನೋಟವನ್ನು ನೋಡಿದರೆ ರೈತರು, ಕಾರ್ಮಿಕರ ಸತ್ಯಾಗ್ರಹ ಭದ್ರ ಬುನಾದಿ ಹಾಕಿಕೊಟ್ಟಿದೆ.ಆ ರೈತರು, ಕಾರ್ಮಿಕರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಿಎಂ ಬೊಮ್ಮಾಯಿ ಧ್ವಜಾರೋಹಣ ಮಾಡಿ, ತೆರೆದ ಜೀಪ್‌ನಲ್ಲಿ ಪರೇಡ್ ಪರಿವೀಕ್ಷಣೆ ಮಾಡಿದರು. ಗೌರವ ರಕ್ಷೆ ಸ್ವೀಕಾರ ಬಳಿಕ ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದರು.
ಸಮಸ್ತ ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಶುಭಾಶಯ. ಅಮೃತ ಮಹೋತ್ಸವದ ವೇಳೆ ಧ್ವಜಾರೋಹಣದ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ನನಗೆ ಈ ಅವಕಾಶ ಕೊಟ್ಟವರಿಗೆ ಚಿರಋಣಿಯಾಗಿದ್ದೇನೆ ಎಂದರು.
ಭಾರತ ಯಶಸ್ವಿ ಪ್ರಜಾಪ್ರಭುತ್ವ ದೇಶವಾಗಿದೆ. ಪ್ರಜಾಪ್ರಭುತ್ವ ಯಶಸ್ವಿಯಾದ ದೇಶದಲ್ಲಿ ಭಾರತ ದೊಡ್ಡದು. ಭಾರತ ಏಕತೆ, ಅಖಂಡತೆ, ಸಾರ್ವಭೌಮತ್ವ ಉಳಿಸಿಕೊಂಡು ಪ್ರಜಾಪ್ರಭುತ್ವ ಬಹಳ ಆಳವಾಗಿ ಬೇರೂರಿದೆ. ಡಾ.ಬಿ.ಆರ್.ಅಂಬೇಡ್ಕರ್‌ರ ದೂರ ದೃಷ್ಟಿ, ಸಮಾನತೆ ದೇಶದ ಕಲ್ಯಾಣಕ್ಕೆ ಸಂವಿಧಾನ ನಮಗೆ ಭಗವದ್ಗೀತೆಯಾಗಿದೆ ಎಂದು ಬೊಮ್ಮಾಯಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ನಮನ ಸಲ್ಲಿಸಿದರು.
ಇನ್ನು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ರಾಣಿ ಚೆನ್ನಮ್ಮ ನಮ್ಮೆಲ್ಲರ ಅಭಿಮಾನದ ಸಂಕೇತ. ಸಂಗೊಳ್ಳಿ ರಾಯಣ್ಣರ ಜನ್ಮದಿನವೂ ಇಂದೇ ಆಗಿದೆ. ರಾಯಣ್ಣರ ತ್ಯಾಗ, ಬಲಿದಾನ ಬಹಳ ಮಹತ್ವದ್ದಾಗಿದೆ. ರಾಯಣ್ಣ ಜನ್ಮದಿನ ಆಚರಣೆ ಮಾಡಲಾಗುತ್ತಿದೆ. ರಾಯಣ್ಣ ಜನ್ಮದಿನ ಆಚರಿಸುತ್ತಿರುವುದು ನಮಗೆ ಖುಷಿ ತಂದಿದೆ ಎಂದು ಬಸವರಾಜ ಬೊಮ್ಮಾಯಿ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದವರ ಸ್ಮರಿಸಿದರು.
ಭಾರತ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ವಿಶ್ವದ ಗಮನವನ್ನು ಸೆಳೆದಿದೆ. ಗ್ರಾಮಗಳಿಂದ ಬಾಹ್ಯಾಕಾಶದವರೆಗೂ ಪ್ರಧಾನಿ ಮೋದಿ ಹಲವು ಯೋಜನೆ ಕೊಟ್ಟಿದ್ದಾರೆ. ಇಂದಿನಿಂದಲೇ ನವ ಕರ್ನಾಟಕ ನಿರ್ಮಾಣ ಆರಂಭವಾಗಲಿದೆ ಎಂದು ಹೇಳಿಕೆ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ, ಹೊಸ ಚಿಂತನೆ, ಹೊಸ ದಾರಿ, ಹೊಸ ದಿಕ್ಸೂಚಿ ಎಂದು ಘೋಷಣೆ ಮಾಡಿದರು.
ರೈತರ ಬದುಕಿನಲ್ಲಿ ಕ್ರಾಂತಿ ತರುವ ಕಾಲ ಬಂದಿದೆ. ರೈತನನ್ನು ಕೇಂದ್ರ ಬಿಂದುವಾಗಿ ಅಭಿವೃದ್ಧಿ ಮಾಡಬೇಕು. ರೈತ ಕೇಂದ್ರಿತ ಅಭಿವೃದ್ಧಿ ಚಿಂತನೆ ಮಾಡುತ್ತಿದ್ದೇವೆ. ರೈತನ ಶ್ರಮ, ಕೂಲಿಕಾರನ ಬೆವರಿನಲ್ಲಿ ದೇವರಿದ್ದಾನೆ. ಇದಕ್ಕೆ ನಾವು ಬೆಲೆ ಕೊಡಬೇಕು. ಕೃಷಿ ಕ್ಷೇತ್ರದಲ್ಲಿ ಶೇ.1ರಷ್ಟು ಬೆಳವಣಿಗೆಯಾದರೆ, ಕೈಗಾರಿಕಾ ಕ್ಷೇತ್ರದಲ್ಲಿ ಶೇ.4ರಷ್ಟು ಬೆಳವಣಿಗೆಯಾಗುತ್ತದೆ. ಸೇವಾ ವಲಯದಲ್ಲಿ ಶೇ.10ರಷ್ಟು ಬೆಳವಣಿಗೆಯಾಗುತ್ತದೆ ಎಂದು ತಿಳಿಸಿದರು.
ಇನ್ನು 7500 ಮಹಿಳಾ ಸ್ವ ಸಹಾಯ ಸಂಘಗಳಿಗೆ ನೆರವು ನೀಡಿ ಗ್ರಾಮೀಣ ಭಾಗದಲ್ಲಿ ಸಣ್ಣ ಉದ್ಯಮಗಳನ್ನು ನಡೆಸುವುದಕ್ಕೆ ಪ್ರೋತ್ಸಾಹ ಧನ ನೀಡಲಾಗುವುದು. ಇದರಿಂದ ಗ್ರಾಮೀಣ ಮಹಿಳೆಯರು ಸ್ವಾವಲಂಬಿ ಬದುಕು ಸಾಗಿಸುವ ಜತೆಗೆ ರಾಜ್ಯ ಅರ್ಥ ವ್ಯವಸ್ಥೆಯೂ ಸದೃಢಗೊಳ್ಳಲಿದೆ ಎಂದು ತಿಳಿಸಿದರು.
ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪನವರು ಕ್ರಮಿಸಿದ ಅಭಿವೃದ್ಧಿ ಪಥದಲ್ಲಿಯೇ ಮುಂದುವರಿಯುವ ಸಂಕಲ್ಪ ಮಾಡಿದ್ದೇನೆ. ಇವತ್ತಿನಿಂದಲೇ ನವ ಕರ್ನಾಟಕ ನಿರ್ಮಾಣ ಕಾರ್ಯ ಆರಂಭ ಎಂದು ಘೋಷಣೆ ಮಾಡುತ್ತೇನೆ. ಹೊಸತಂತ್ರಜ್ಞಾನ, ಮಾನವಸಂಪನ್ಮೂಲ, ಕೃಷಿ, ಉತ್ಪಾದನಾ ಕೇಂದ್ರದಲ್ಲಿ ವೈಜ್ಞಾನಿಕ ಅಭಿವೃದ್ಧಿ ಸಾಗಿಸಲು ಪಣ ತೊಟ್ಟಿದ್ದೇನೆ ಎಂದರು.
ಪ್ರವಾಹ ಸಂತಸ್ತರಿಗೆ ತಕ್ಷಣದ ಪರಿಹಾರ 10,000 ರೂ. ಅಲ್ಪ ಹಾನಿಯಾದ ಮನೆಗಳಿಗೆ 50 ಸಾವಿರ, ಭಾಗಶಃ ಹಾನಿಯಾದ ಮನೆಗಳಿಗೆ 3ಲಕ್ಷ ರೂ. ಪೂರ್ಣ ಹಾನಿ ಪ್ರಕೆಣಗಳಿಗೆ 5 ಲಕ್ಷ ರೂ. ಪರಿಹಾರ ನೀಡಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದು, ತಾಲೂಕು, ಸಬ್‍ರಿಜಿಸ್ಟ್ರರ್ ಆಫೀಸ್ ಗೆ ಜನ ಓಡಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.
ಸರ್ಕಾರ ಬಂದ ಕೂಡಲೇ ಪ್ರವಾಹ ಬಂತು. ಅದಕ್ಕೆ ಪರಿಹಾರ ಕೊಡುವ ಕೆಲಸ ಮಾಡಿದ್ದೇವೆ. ರೈತರ ಮಕ್ಕಳಿಗೆ ಸ್ಕಾಲರ್ ಶಿಪ್ ಕೊಟ್ಟಿದ್ದೇವೆ. ಕರ್ನಾಟಕ ಕೈಗಾರಿಕ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದೆ. ಹಲವು ಕಾರ್ಖನೆಗಳು ಬಂದು ಬುನಾದಿ ಹಾಕಿದವು. ಕರಾವಳಿಯ ಬ್ಯಾಂಕಿಂಗ್ ವ್ಯವಸ್ಥೆ ದೇಶಕ್ಕೆ ಮಾದರಿಯಾಗಿದೆ. ಕೈಗಾರಿಕೆಗೆ ಹೊಸ ನೀತಿ ಮಾಡಿದ್ದೇವೆ. ಅಲ್ಲದೇ ಕರ್ನಾಟಕ ಪೊಲೀಸ್ ಇಡೀ ದೇಶದಲ್ಲೇ ನಂಬರ್ 1 ಆಗಿದೆ. ಕಾನೂನು ಸುವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಯಶಸ್ವಿಯಾಗಿಸಿದೆ ಎಂದು ವಿವರಿಸಿದರು.
ಅಮೃತ ಗ್ರಾಮ ಪಂಚಾಯ್ತಿ ಯೋಜನೆ ಘೋಷಿಸಿದ್ದು, 750 ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗೊಳಿಸಲಿದ್ದು, ಆಯ್ದ 75 ನಗರಗಳಲ್ಲಿ 75 ಕೋಟಿ ವೆಚ್ಚದಲ್ಲಿ ಅಮೃತ ನಿರ್ಮಲ ನಗರ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತದೆ. ಮಹಿಳೆಯರಿಗೆ ಪ್ರೋತ್ಸಹ ನೀಡಲು ಅಮೃತ ಪ್ರೋತ್ಸಾಹ ಕಿರು ಉದ್ಯಮವನ್ನು ಆರಂಭಿಸಲಾಗುತ್ತದೆ ಎಂದು ತಿಳಿಸಿದರು.
ಕೊರೊನಾ ವಾರಿಯರ್ಸ್ಗೆ ಆಹ್ವಾನ
ಕೊರೊನಾ ಹಿನ್ನೆಲೆ ಸಿಮೀತ ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಕೊರೊನಾ ವಾರಿಯರ್ಸ್ಗೆ ಆಹ್ವಾನಿಸಲಾಗಿದೆ. ಮಾಣಿಕ್ ಷಾ ಮೈದಾನಕ್ಕೆ ಆಶಾ ಕಾರ್ಯಕರ್ತೆಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿ, ನರ್ಸ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಮಹಾಮಾರಿ ಕೊರೊನಾದಿಂದ ಗುಣಮುಖರಾದವರಿಗೆ ಕೂಡ ವಿಶೇಷ ಆಹ್ವಾನ ನೀಡಲಾಗಿದ್ದು, ಪ್ರತಿ ಗುಂಪಿಗೂ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿತ್ತು.