ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮಹಾತ್ಮ ಗಾಂಧೀಜಿ ದೇಶವನ್ನು ರಾಜಕೀಯ ದಾಸ್ಯದಿಂದ ಮುಕ್ತಿ ಗೊಳಿಸಿದವರು. ಅವರು ಪ್ರತಿಪಾದಿಸಿದ ಸಿದ್ಧಾಂತ ಪಾಲಿಸುವುದೇ ನಮ್ಮ ಜೀವನದ ಗುರಿಯಾಗಬೇಕು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕರೆ ನೀಡಿದರು.
ಹುತಾತ್ಮರ ದಿನದ ಅಂಗವಾಗಿ, ದೇಶಕ್ಕಾಗಿ ಪ್ರಾಣವನ್ನರ್ಪಿಸಿದ ಪ್ರತಿಯೊಬ್ಬರ ತ್ಯಾಗ, ಬಲಿದಾನಗಳ ಸಂಸ್ಮರಣೆಗಳೊಂದಿಗೆ, ಇಂದು ಅವರೆಲ್ಲರ ಗೌರವಾರ್ಥ ಎರಡು ನಿಮಿಷಗಳ ಮೌನಾಚರಣೆ ನಡೆಸಿ, ವಿಧಾನಸೌಧದ ಆವರಣದಲ್ಲಿರುವ ಆದರಣೀಯ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಪ್ರತಿಮೆ ಬಳಿ ಬಾಪೂಜಿರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಮಾತನಾಡಿದರು.
ಗಾಂಧೀಜಿ ಸ್ವಾವಲಂಬನೆ ಜೀವನ ತೋರಿಸಿಕೊಟ್ಟವರು. ಅವರು ಪ್ರತಿಪಾದಿಸಿದ ತತ್ವ-ಸಿದ್ಧಾಂತಗಳ ಪಾಲನೆ ಮಾಡಬೇಕು. ಇದು ದೇಶದ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಅಭಿಪ್ರಾಯಪಟ್ಟರು.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕಂದಾಯ ಸಚಿವ ಆರ್. ಅಶೋಕ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಳಿಕ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ವರ್ಚುವಲ್ ಮೂಲಕ ಸರ್ದಾರ್ ವಲ್ಲಭಭಾಯಿ ಪಟೇಲ್ ನಿಲಯ ಸ್ಥಾಪನೆಗೆ ಮುಖ್ಯಮಂತ್ರಿ ಶಂಕುಸ್ಥಾಪನೆ ನೆರವೇರಿಸಿದರು.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಚಿವ ಸುರೇಶ್ ಕುಮಾರ್ ವಿಧಾನಪರಿಷತ್ ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ, ತೇಜಸ್ವಿ ರಮೇಶ್ ಮತ್ತಿತರರು ಇದ್ದರು