ಕಿರುತೆರೆ ಕಲಾವಿದರಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ
ಮನೆಯೊಳಗೆ ಧಾರಾವಾಹಿ ಚಿತ್ರೀಕರಣಕ್ಕೆ ಅನುಮತಿ ನೀಡಿದ ಸಿಎಂ ಬಿಎಸ್‌ವೈ
ಬೆಂಗಳೂರು: ಧಾರಾವಾಹಿ ಕಲಾವಿಧರಿಗೆ ಸಿಹಿ ಸುದ್ದಿ ನೀಡಿರುವ ಯಡಿಯೂರಪ್ಪ ಅವರು ಕಡಿಮೆ ಕಲಾವಿದರು, ತಂತ್ರಜ್ಞರು ಇರುವಂತೆ ನೋಡಿಕೊಂಡು ಸೀರಿಯಲ್‌ಗಳನ್ನು ಮನೆಯ ಒಳಗೆ ಚಿತ್ರೀಕರಣ ಮಾಡುವುದಕ್ಕೆ ಷರತ್ತುಬದ್ದ ಅನುಮತಿ ನೀಡಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಟೆಲೆವಿಜನ್ ಅಸೋಸಿಯೇಷನ್ ಜತೆ ಸಭೆ ನಡೆಸಿದ ಸಿಎಂ ಬಿಎಸ್‌ವೈ ಕಿರುತೆರೆ ಎದುರಿಸುತ್ತಿರುವ ಸಂಕಷ್ಟ ಕುರಿತ ಸಮಸ್ಯ ಆಲಿಸಿದರು. ಆರ್ಥಿಕ ಸಂಕಷ್ಟವನ್ನು ತಡೆಯಲು ಚಿತ್ರೀಕರಣ ನಡೆಸಲು ಅನುಮತಿ ನೀಡುವಂತೆ ಅಸೋಸಿಯೇಷನ್ ಮನವಿ ಮಾಡಿತು. ಮನವಿಗೆ ಸ್ಪಂಧಿಸಿದ ಸರ್ಕಾರ ಕೊರೊನಾ ಮಾರ್ಗಸೂಚಿ ಪಾಲನೆಯ ಷರತ್ತಿನೊಳಗೆ ಚಿತ್ರೀಕರಣಕ್ಕೆ ಅನುಮತಿ ನೀಡಲಾಯಿತು.
ಕಿರುತೆರೆ ಚಿತ್ರ ನಿರ್ಮಾಣ, ಟಿವಿ ಸೀರಿಯಲ್ ಕಲಾವಿದರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ನನ್ನನ್ನು ಭೇಟಿ ಮಾಡಿದ್ದರು. ಅವರೊಂದಿಗೆ ಸಿಎಂ ಭೇಟಿ ಮಾಡಿ ಸೀರಿಯಲ್ ಆರಂಭ ಕುರಿತು ಚರ್ಚೆ ನಡೆಸಲಾಗಿದೆ. ಮನೆಯೊಳಗೆ ಹತ್ತರಿಂದ ಹನ್ನೆರಡು ಜನಕ್ಕೆ ಸೀಮಿತಗೊಳಿಸಿ ಚಿತ್ರೀಕರಣ ನಡೆಸಲು ಅವಕಾಶ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಕ್ಯಾಮರಾಮನ್, ಲೈಟ್ ಬಾಯ್ ಬಿಟ್ಟರೆ ಟ್ರಾಲಿ ಇತ್ಯಾದಿಗಳ ಬಳಕೆಗೆ ಅವಕಾಶವಿಲ್ಲ. ರಸ್ತೆಯಲ್ಲಿ ಸಾರ್ವಜನಿಕವಾಗಿ ಚಿತ್ರೀಕರಣ ನಿಷೇಧ. ಆದರೆ ಇನ್ ಡೋರ್ ನಲ್ಲಿ ಕಿರುಚಿತ್ರ, ಸೀರಿಯಲ್‌ಗಳನ್ನು ನಿರ್ಮಿಸಲು ಕೊರೊನಾ ನಿಯಮ ಪಾಲಿಸಬೇಕು ಎಂದರು.
ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಜತೆ ಚರ್ಚೆ ನಡೆಸಲಾಗಿದೆ, ಮನೆಯೊಳಗಡೆ ಚಿತ್ರೀಕರಣಕ್ಕೆ ಸರ್ಕಾರದ ಅಭ್ಯಂತರವಿಲ್ಲ. ಆದರೆ ಯಾವುದೇ ರೀತಿಯಲ್ಲೂ ರಿಯಾಲಿಟಿ ಶೋ, ಸಿನಿಮಾ ಚಿತ್ರಗಳ ಚಿತ್ರೀಕರಣ ನಡೆಸುವಂತಿಲ್ಲ ಅದಕ್ಕೆಲ್ಲ ಜನ ಸೇರಲಿದ್ದಾರೆ ಕೇಂದ್ರ ಸರ್ಕಾರವೂ ಅದಕ್ಕೆ ಅನುಮತಿ ನೀಡುವುದಿಲ್ಲ. ಹೀಗಾಗಿ ಕೇವಲ ಮನೆಯ ಒಳಗಡೆ ಚಿತ್ರೀಕರಣ ನಡೆಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದರು.
ಕೋರೋನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಲಾಕ್ ಡೌನ್‌ನಿಂದಾಗಿ ಕಿರುತೆರೆಯ 6೦೦೦ ಕಾರ್ಮಿಕರ ಜೀವನ ದುಸ್ತರವಾಗಿದೆ. ಲಾಕ್‌ಡೌನ್ ನಿಂದಾಗಿ 110 ಕ್ಕೂ ಹೆಚ್ಚು ಸೀರಿಯಲ್‌ಗಳ ನಿರ್ಮಾಣ ಸ್ಥಗಿತವಾಗಿತ್ತು.
ಕಿರುತೆರೆ ಚಿತ್ರ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕೆಂದು ಸಿಎಂ ಅವರಲ್ಲಿ ಮನವಿ ಮಾಡಿದ್ದೇವೆ. ಅವರು ಒಳಾಂಗಣ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದು, ಸೀರಿಯಲ್‌ಗಳ ಸ್ಕ್ರಿಪ್ಟ್ ಗಳನ್ನು ಅಗತ್ಯಕ್ಕೆ ತಕ್ಕಂತೆ ಮಾರ್ಪಡ್ ಮಾಡಿಕೊಳ್ಳಲಾಗುವುದು ಎಂದು ಕಿರುತೆರೆ ಚಿತ್ರ ನಿರ್ಮಾಣ ಸಂಘದ ಅಧ್ಯಕ್ಷ ಶಶಿಕುಮಾರ್ ತಿಳಿಸಿದ್ದಾರೆ.