MSRTC ನೌಕರರ ಮುಷ್ಕರ: ಅಮಾನತುಗೊಂಡ ನೌಕರರಿಗೆ ವಜಾಸ್ತ್ರ ಪ್ರಯೋಗ
ಮುಂಬೈ: ಮುಷ್ಕರ ನಿರತ ನೌಕರರು ಕೆಲಸಕ್ಕೆ ಮರಳುತ್ತಿಲ್ಲ ಎಂದು ಈಗಾಗಲೇ ಅಮಾನತು ಮಾಡಿರುವ 6 ಸಾವಿರಕ್ಕೂ ಹೆಚ್ಚು ನೌಕರರನ್ನು ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮ (ಎಂಎಸ್‌ಆರ್‌ಟಿಸಿ) ವಜಾಗೊಳಿಸುವ ಸಂಬಂಧ ಕಾರಣ ಕೇಳೆ ನೋಟಿಸ್ ಜಾರಿ ಮಾಡಿದೆ.
ಇದು ಮುಷ್ಕರ ನಿರತ ನೌಕರರಿಗೆ ನುಂಗಲಾರದ ತುಪ್ಪವಾಗುತ್ತಿದ್ದರೆ, ಮತ್ತೊಂದೆಡೆ ಮುಷ್ಕರ ನಿರತ ನೌಕರರಲ್ಲಿ ಎರಡು ಬಣಗಳಾಗಿ ಒಡೆದು ಹೋಗಿದ್ದು, ಈಗಾಗಲೇ ಒಂದು ಬಣದ ನೌಕರರ ಕೆಲಸಕ್ಕೆ ಮರಳುತ್ತಿದ್ದಾರೆ.
ಇದರಿಂದ ಈಗ ಅಮಾನತುಗೊಂಡಿರುವ ಕಾಯಂ ನೌಕರರು ಅಡಕತ್ತರಿಯಲ್ಲಿ ಸಿಲುಕಿದಂತಾಗುತ್ತಿದ್ದು, ಇತ್ತ ಮುಷ್ಕರ ನಿತರ ನೌಕರರನ್ನು ಬೆಂಬಲಿಸಬೇಕೋ ಅಥವಾ ಕಾರಣ ಕೇಳಿ ಕೊಟ್ಟಿರುವ ನೋಟಿಸ್‌ಗೆ ಸಮಾಜಾಯಿಷಿ ನೀಡಿ ಕೆಲಸಕ್ಕೆ ಮರಳಬೇಕೋ ಎಂಬ ಗೊಂದಲದಲ್ಲಿದ್ದಾರೆ.
ಅಮಾನತುಗೊಂಡ ನೌಕರರು ಸಮಜಾಯಿಷಿ ನೀಡಲು 14 ದಿನಗಳ ಕಾಲಾವಕಾಶವನ್ನು ನಿಗಮ ಈ ಹಿಂದೆ ನೀಡಿತ್ತು. ಈ ವೇಳೆ ಕೆಲ ನೌಕರರು ಸಮಜಾಯಿಷಿ ನೀಡಿದ್ದು, ಇನ್ನು ಕೆಲವು ನೌಕರರು ಈ ಸೂಚನೆಯನ್ನು ನಿರ್ಲಕ್ಷಿಸಿದ್ದಾರೆ.
ಹೀಗಾಗಿ ಅವರ ವಿರುದ್ಧ ಮುಂದಿನ ಕ್ರಮ ಜರುಗಿಸಲು ನಿಗಮವು ಎಲ್ಲ ನೌಕರರಿಗೆ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ. ಅಲ್ಲದೆ ಈಗಾಗಲೇ ಹೇಳಿಕೆ ನೀಡದ ಹಾಗೂ ನಿರ್ಲಕ್ಷ್ಯ ವಹಿಸಿರುವ ನೌಕರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಡಿಪೋ ಮಟ್ಟದ ಅಧಿಕಾರಿಗಳು ಅವರ ಮೇಲಿನ ಅಧಿಕಾರಿಗಳ ಕಚೇರಿ ಹೊರಡಿಸಿರುವ ಆದೇಶದಂತೆ ಇದೀಗ ಅಮಾನತು ಮಾಡಿರುವವರನ್ನು ವಜಾಗೊಳಿಸಿ ನೋಟಿಸ್ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಇದು ಮುಷ್ಕರ ನಿರತ ಕಾರ್ಮಿಕರಿಗೆ ದೊಡ್ಡ ಹೊಡೆತವಾಗಿದೆ.
ಆದರೂ ಪಟ್ಟು ಬಿಡದ ನೌಕರರು ಸರ್ಕಾರದೊಂದಿಗೆ ನಿಗಮವನ್ನು ವಿಲೀನ ಮಾಡಲೇಬೇಕು ಎಂದು ನಡೆಸುತ್ತಿರುವ ಹೋರಾಟ 32ನೇ ದಿನ ಪೂರೈಸಿದ್ದು, ಸೋಮವಾರದಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಈ ನಡುವೆ ರಾಜ್ಯ ಸರಕಾರ ಹಾಗೂ ನಿಗಮ ಶೇ.41ರಷ್ಟು ವೇತನ ಹೆಚ್ಚಳ ಮಾಡಿರುವುದಕ್ಕೆ ಕೆಲವೆಡೆ ನೌಕರರು ಮುಷ್ಕರಕ್ಕೆ ತಿಲಾಂಜಲಿಬಿಟ್ಟು ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಆದರೆ ವಿಲೀನದ ಬೇಡಿಕೆಗೆ ಶೇ.90ರಷ್ಟು ನೌಕರರು ಅಚಲವಾಗಿ ನಿಂತಿದ್ದಾರೆ.