ನಾಳೆ (ಜೂ.10) ಈ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದ್ದು, ಇಡೀ ಜಗತ್ತು ಈ ಖಗ್ರಾಸ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿದೆ. ಆದರೆ ಇದನ್ನು ಎಲ್ಲರೂ ನೋಡುವುದಿಕ್ಕೆ ಸಾಧ್ಯವಿಲ್ಲ ಎಂದು ಅಮೆರಿಕದ ನಾಸಾ ಹೇಳಿದೆ.
ಕೆಲವು ದಿನಗಳ ಹಿಂದೆ ಸೂಪರ್ಮೂನ್ ಮತ್ತು ಚಂದ್ರಗ್ರಹಣ ವೀಕ್ಷಿಸಿದ್ದ ಜನರು ಜೂನ್ 10ರಂದು ಸೂರ್ಯಗ್ರಹಣವನ್ನು ವೀಕ್ಷಿಸಬಹುದು. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಹಾಗಿದ್ದರೆ ನಾಳೆಯ ಸೂರ್ಯಗ್ರಹಣ ಭಾರತದಲ್ಲೂ ಗೋಚರವಾಗುತ್ತದಾ? ಸೂರ್ಯಗ್ರಹಣದ ಸಂದರ್ಭದಲ್ಲಿ ಯಾವೆಲ್ಲ ಎಚ್ಚರಿಕೆಗಳನ್ನು ಅನುಸರಿಸಬೇಕು? ಬರಿಗಣ್ಣಿನಲ್ಲಿ ಸೂರ್ಯಗ್ರಹಣವನ್ನು ನೋಡಬಹುದಾ?
ನಾಸಾ ತಿಳಿಸಿರುವಂತೆ, ಪೂರ್ವ ಅಮೆರಿಕ, ಉತ್ತರ ಅಲಾಸ್ಕಾ, ಕೆನಡಾ ಮತ್ತು ಕೆರಬಿಯನ್ನ ಕೆಲ ಭಾಗ, ಯುರೋಪ್, ಏಷ್ಯಾ ಮತ್ತು ಆಫ್ರಿಕಾದ ಉತ್ತರ ಭಾಗದಲ್ಲಿ ಭಾಗಶಃ ಸೂರ್ಯ ಗ್ರಹಣ ಕಾಣುತ್ತದೆ. ಸೂರ್ಯ ಹುಟ್ಟುವ ಮುಂಚೆ, ಸಂದರ್ಭದಲ್ಲಿ ಹಾಗೂ ಆ ನಂತರದ ಕೆಲ ಸಮಯ ಗ್ರಹಣ ಸಂಭವಿಸುತ್ತದೆ. ಹಲವು ಪ್ರದೇಶಗಳಲ್ಲಿ ಈ ವಾರ್ಷಿಕ ಗ್ರಹಣವು ಮಧ್ಯಾಹ್ನ 1.42ಕ್ಕೆ ಆರಂಭವಾಗಿ ಸಂಜೆ 6.41ರ ತನಕ ಇರುತ್ತದೆ.
ನಾಳೆ ಶೇ. 97ರಷ್ಟು ಭಾಗ ಚಂದ್ರನು ಸೂರ್ಯನನ್ನು ಆವರಿಸಲಿದ್ದಾನೆ. ಎಲ್ಲೆಲ್ಲಿ ಸೂರ್ಯಗ್ರಹಣ ಗೋಚರವಾಗುತ್ತದೆಯೋ ಅಲ್ಲಿ ಸೂತಕದ ಅವಧಿ ಇರಲಿದೆ. ಈ ಬಾರಿ ವೃಷಭ ರಾಶಿ ಮತ್ತು ಮೃಗಶಿರಾ ನಕ್ಷತ್ರದಲ್ಲಿ ಸೂರ್ಯಗ್ರಹಣ ನಡೆಯುತ್ತಿದ್ದು, ವೃಷಭ ರಾಶಿಯವರಿಗೆ ಸೂರ್ಯಗ್ರಹಣದಿಂದ ಎಲ್ಲಾ ಅನುಕೂಲಗಳು ಆಗಲಿವೆ ಎಂದು ಹೇಳಲಾಗುತ್ತಿದೆ.
ಭಾರತದಲ್ಲೂ ಸೂರ್ಯಗ್ರಹಣ ಗೋಚರ?
ನಾಳೆಯ ಸೂರ್ಯಗ್ರಹಣ ಭಾರತದಲ್ಲಿ ಗೋಚರವಾಗುವುದಿಲ್ಲ. ಆದರೆ, ಈಶಾನ್ಯ ರಾಜ್ಯದವರಿಗೆ, ಜಮ್ಮು ಮತ್ತು ಕಾಶ್ಮೀರದ ಭಾಗದಲ್ಲಿ ಮಾತ್ರ ಗೋಚರವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಅರುಣಾಚಲ ಪ್ರದೇಶ, ಲಡಾಖ್, ಜಮ್ಮು ಕಾಶ್ಮೀರದ ಭಾಗದಲ್ಲಿ ಸೂರ್ಯಾಸ್ತಕ್ಕೂ ಮುನ್ನ ಸೂರ್ಯಗ್ರಹಣ ಗೋಚರವಾಗಲಿದೆ ಎನ್ನಲಾಗಿದೆ. ಆದರೆ, ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಸೂರ್ಯಗ್ರಹಣ ಗೋಚರವಾಗುವುದಿಲ್ಲ.
ನಾಳೆ ಮಧ್ಯಾಹ್ನ 1.42ಕ್ಕೆ ಆರಂಭವಾಗುವ ಸೂರ್ಯಗ್ರಹಣ ಸಂಜೆ 6.41ರವರೆಗೂ ಇರಲಿದೆ. ಈ ಅವಧಿಯೊಳಗೆ ನಡೆಯುವ ಸೂರ್ಯಗ್ರಹಣ ಕೇವಲ 3 ನಿಮಿಷ 51 ಸೆಕೆಂಡ್ಗಳ ಕಾಲ ಮಾತ್ರ ಗೋಚರವಾಗಲಿದೆ. ವರ್ಷದ ಮೊದಲ ಈ ವಿಶೇಷವಾದ ಸೂರ್ಯಗ್ರಹಣವನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾದು ಕುಳಿತಿದೆ. ನಾಸಾ ನೀಡಿರುವ ಮಾಹಿತಿ ಪ್ರಕಾರ, ರಷ್ಯಾ, ಕೆನಡಾ ಮತ್ತು ಗ್ರೀನ್ಲ್ಯಾಂಡ್ನಲ್ಲಿ ಸಂಪೂರ್ಣವಾಗಿ ಸೂರ್ಯಗ್ರಹಣದ ದರ್ಶನವಾಗಲಿದೆ.
ಈ ಹಿಂದೆ 1873ರಲ್ಲಿ ಶನಿ ಜಯಂತಿಯಂದು ಸೂರ್ಯಗ್ರಹಣ ಸಂಭವಿಸಿತ್ತು. ಅದಾದ 148 ವರ್ಷಗಳ ನಂತರ ಶನಿ ಜಯಂತಿ ದಿನದಂದು ನಾಳೆ ಸೂರ್ಯಗ್ರಹಣ ಸಂಭವಿಸಲಿದೆ. ಇನ್ನು ಮುಂದಿನ ಸೂರ್ಯಗ್ರಹಣ ಡಿಸೆಂಬರ್ 4ರಂದು ನಡೆಯಲಿದೆ.
ಸೂರ್ಯನನ್ನು ನೇರವಾಗಿ ನೋಡಬೇಡಿ. ಸುರಕ್ಷಿತ, ಮಾನ್ಯತೆ ಪಡೆದ, ಪ್ರೊಟೆಕ್ಟಿವ್ ಸೂರ್ಯ ಗ್ರಹಣದ ಗ್ಲಾಸ್ಗಳನ್ನು ಬಳಸಿ, ಪಿನ್ಹೋಲ್ ಕ್ಯಾಮೆರಾ ಅಥವಾ ಬಾಕ್ಸ್ ಪ್ರೊಜೆಕ್ಟರ್ ಸೃಷ್ಟಿಸಿ ಸೂರ್ಯ ಗ್ರಹಣ ನೋಡಬಹುದು.
ಬೈನಾಕ್ಯುಲರ್ಸ್, ಟೆಲಿಸ್ಕೋಪ್ ಅಥವಾ ಕ್ಯಾಮೆರಾ ಮೂಲಕವಾಗಿ ಸೂರ್ಯ ಗ್ರಹಣವನ್ನು ಸೆರೆ ಹಿಡಿಯಲು ಬಯಸಿದರೆ ಸುರಕ್ಷಿತ- ಮಾನ್ಯತೆ ಪಡೆದ, ಪ್ರೊಟೆಕ್ಟಿವ್ ಸೋಲಾರ್ ಫಿಲ್ಟರ್ ಅನ್ನು ನಿಮ್ಮ ಲೆನ್ಸ್ಗೆ ಬಳಸಬೇಕು.