NEWSದೇಶ-ವಿದೇಶ

ದೇಶದಲ್ಲಿ ವಿಫಲ ಲಾಕ್‌ಡೌನ್‌: ಕೇಂದ್ರದ ವಿರುದ್ಧ ರಾಹುಲ್‌ ವಾಗ್ದಾಳಿ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಕೊರೊನಾ ಸೋಂಕು ದೇಶದಲ್ಲಿ ಹೆಚ್ಚಾಗುತ್ತಿದ್ದು ಇದರ  ನಿರ್ವಹಣೆ ಮಾಡುವಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ದೇಶದಲ್ಲಿ ಯಾವರೀತಿ ಲಾಕ್‌ಡೌನ್‌ ವಿಫಲವಾಗಿದೆ ಎಂಬುದನ್ನು ನಾಲ್ಕು ದೇಶಗಳ ಲಾಕ್‌ಡೌನ್ ಜತೆ ಭಾರತದ ಲಾಕ್‌ಡೌನ್ ಅನ್ನು ಹೋಲಿಕೆ ಮಾಡಿರುವ ಗ್ರಾಫ್  ಟ್ವಿಟ್‌ ಮಾಡುವ ಮೂಲಕ ವಿವರಿಸಿದ್ದಾರೆ.

ಭಾರತದಲ್ಲಿ ಲಾಕ್‌ಡೌನ್ ಸಮಯದಲ್ಲಿ ಸೋಂಕು ವೇಗವಾಗಿ ಹರಡುತ್ತಿದೆ. ಆದರೆ, ಅತೀ ಹೆಚ್ಚು ಕೊರೊನಾಘಾತಕ್ಕೆ ಗುರಿಯಾಗಿರುವ ಸ್ಪೇನ್, ಜರ್ಮನಿ, ಇಟಲಿ ಹಾಗೂ ಬ್ರಿಟನ್ ನಲ್ಲಿ ಲಾಕ್‌ಡೌನ್ ನಂತರ ಪ್ರಕರಣಗಳು ಇಳಿದಿವೆ. ಅಂದರೆ ದೇಶದ ಲಾಕ್‌ಡೌನ್‌ ಎಷ್ಟರ ಮಟ್ಟಿಗೆ ಸಫಲವಾಗಿದೆ ಎಂಬುದನ್ನು ಇದರಿಂದ ತಿಳಿಯಬಹುದು ಎಂದು ಸೋಂಕಿತರ ಸಂಖ್ಯೆ ಏರುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಮ್ಮ ದೇಶದಲ್ಲಿ ಕಳೆದ 24 ತಾಸಿನಲ್ಲಿ 9 ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 2.36 ಲಕ್ಷ ದಾಟಿದೆ. ಇನ್ನು ದೇಶದಲ್ಲಿ ಒಂದೇಸಿನ 278 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 6,641ಕ್ಕೆ ಏರಿಕೆಯಾಗಿದೆ. ಇದು ಹೀಗೆ ಮುಂದುವರಿದರೆ ದೇಶದಲ್ಲಿ ಮುಂದಿನ ದಿನಗಳು ಹೇಗಿರಲಿವೆ ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಕೊರೊನಾ ಸೋಂಕು ನಿಯಂತ್ರಣಕ್ಕೆ ಹೆಚ್ಚಿನ ಕಾಳಜಿ ವಹಿಸುವ ಮೂಲಕ ದೇಶದ ಜನರ ಜೀವ ಉಳಿಸಲು ಮುಂದಾಗಬೇಕು ಎಂದು ಸಲಹೆ ನೀಡಿದ್ದಾರೆ.

Leave a Reply