NEWSಲೇಖನಗಳು

ನನ್ನ ಪ್ರೀತಿಯ ದೇಶ ಬಾಂಧವರೇ

ಕೇಂದ್ರ ಸರ್ಕಾರಕ್ಕೆ ವರ್ಷದ ಹರ್ಷ ಹಿನ್ನೆಲೆ ದೇಶದ ಜನರನ್ನು ಕುರಿತು ಪ್ರಧಾನಿ ನರೇಂದ್ರ ಮೋದಿ ಪತ್ರ

ವಿಜಯಪಥ ಸಮಗ್ರ ಸುದ್ದಿ

ಳೆದ ವರ್ಷದ ಇದೇ ದಿನ ಭಾರತದ ಪ್ರಜಾಸತ್ತೆಯ ಸುವರ್ಣ ಅಧ್ಯಾಯವೊಂದು ಆರಂಭವಾಯಿತು. ಹಲವು ದಶಕಗಳ ನಂತರ ದೇಶದ ಜನತೆ ಸಂಪೂರ್ಣ ಬಹುಮತದಿಂದ ಸರ್ಕಾರವೊಂದನ್ನು ಪುನರಾಯ್ಕೆ ಮಾಡಿದರು.

ಭಾರತದ 130 ಕೋಟಿ ಜನರಿಗೆ ಮತ್ತು ಪ್ರಜಾಸತ್ತಾತ್ಮಕ ಹುರುಪಿಗೆ ನಾನು ಮತ್ತೊಮ್ಮೆ ತಲೆಬಾಗಿ ವಂದಿಸುತ್ತೇನೆ.  ಸಾಮಾನ್ಯ ದಿನಗಳಲ್ಲಾಗಿದ್ದರೆ, ನಾನು ಇಂದು ನಿಮ್ಮ ಮಧ್ಯೆಯೇ ಇರುತ್ತಿದ್ದೆ. ಆದರೆ ಪ್ರಸ್ತುತ ಸನ್ನಿವೇಶಗಳು ಅದಕ್ಕೆ ಅವಕಾಶ ನೀಡುತ್ತಿಲ್ಲ. ಆದ್ದರಿಂದ ನಾನು ಈ ಪತ್ರದ ಮೂಲಕ ನಿಮ್ಮ ಆಶೀರ್ವಾದವನ್ನು ಬೇಡುತ್ತಿದ್ದೇನೆ.

ನಿಮ್ಮ ಪ್ರೀತಿ, ಸದಾಶಯ ಮತ್ತು ಸಕ್ರಿಯ ಸಹಕಾರವು ಹೊಸ ಶಕ್ತಿ ಮತ್ತು ಸ್ಫೂರ್ತಿಯನ್ನು ನೀಡಿದೆ. ಪ್ರಜಾಪ್ರಭುತ್ವದ ಸಾಮೂಹಿಕ ಶಕ್ತಿಯನ್ನು ನೀವು ಪ್ರದರ್ಶಿಸಿದ ರೀತಿ ಇಡೀ ಜಗತ್ತಿಗೆ ದಾರಿದೀಪವಾಗಿದೆ.

2014 ರಲ್ಲಿ, ದೇಶದ ಜನರು ಗಣನೀಯ ಪರಿವರ್ತನೆಗಾಗಿ ಮತ ಚಲಾಯಿಸಿದರು. ಕಳೆದ ಐದು ವರ್ಷಗಳಲ್ಲಿ, ಆಡಳಿತ ಯಂತ್ರವು ಯಥಾಸ್ಥಿತಿ ಹಾಗೂ ಭ್ರಷ್ಟಾಚಾರದ ಕೆಸರು ಮತ್ತು ದುರಾಡಳಿತದಿಂದ ಹೇಗೆ ಮುಕ್ತವಾಯಿತು ಎಂಬುದನ್ನು ಇಡೀ ರಾಷ್ಟ್ರ ನೋಡಿದೆ. ‘ಅಂತ್ಯೋದಯ’ ಹೆಸರಿಗೆ ತಕ್ಕಂತೆ ಲಕ್ಷಾಂತರ ಜನರ ಜೀವನವನ್ನು ಪರಿವರ್ತನೆ ಮಾಡಿದೆ.

2014 ರಿಂದ 2019 ರವರೆಗೆ ಭಾರತದ ಶ್ರೇಷ್ಠತೆ ಗಮನಾರ್ಹವಾಗಿ ಏರಿತು. ಬಡವರ ಘನತೆ ಹೆಚ್ಚಾಗಿದೆ. ರಾಷ್ಟ್ರವು ಆರ್ಥಿಕ ಸೇರ್ಪಡೆ, ಉಚಿತ ಅನಿಲ ಮತ್ತು ವಿದ್ಯುತ್ ಸಂಪರ್ಕ, ಸಮಗ್ರ ನೈರ್ಮಲ್ಯ ವ್ಯಾಪ್ತಿಯನ್ನು ಸಾಧಿಸಿತು ಮತ್ತು ‘ಎಲ್ಲರಿಗೂ ವಸತಿ’ ಖಾತರಿಪಡಿಸುವತ್ತ ಪ್ರಗತಿ ಸಾಧಿಸಿತು.

ಸರ್ಜಿಕಲ್ ಸ್ಟ್ರೈಕ್ ಮತ್ತು ವಾಯುದಾಳಿಯ ಮೂಲಕ ಭಾರತವು ತನ್ನ ಸಾಮರ್ಥ್ಯವನ್ನು ತೋರಿಸಿತು. ಅದೇ ಸಮಯದಲ್ಲಿ, ದಶಕಗಳ ಹಳೆಯ ಬೇಡಿಕೆಗಳಾದ ಒ ಆರ್ ಒ ಪಿ, ಒಂದು ದೇಶ ಒಂದು ತೆರಿಗೆ- ಜಿ ಎಸ್ ಟಿ, ರೈತರಿಗೆ ಉತ್ತಮ ಕನಿಷ್ಠ ಬೆಂಬಲ ಬೆಲೆಗಳನ್ನು ಈಡೇರಿಸಲಾಯಿತು.

2019 ರಲ್ಲಿ, ಭಾರತದ ಜನತೆ ಕೇವಲ ನಿರಂತರತೆಗಾಗಿ ಮಾತ್ರವಲ್ಲ, ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಕನಸಿನೊಂದಿಗೆ ಮತ ಚಲಾಯಿಸಿದರು. ಭಾರತವನ್ನು ಜಾಗತಿಕ ನಾಯಕನನ್ನಾಗಿ ಮಾಡುವ ಕನಸು. ಕಳೆದ ಒಂದು ವರ್ಷದಲ್ಲಿ ತೆಗೆದುಕೊಂಡ ನಿರ್ಧಾರಗಳು ಈ ಕನಸನ್ನು ಈಡೇರಿಸುವ ದಿಕ್ಕಿನಲ್ಲಿವೆ.

ಇಂದು, 130 ಕೋಟಿ ಜನರಿಗೆ ರಾಷ್ಟ್ರದ ಅಭಿವೃದ್ಧಿ ಪಥದಲ್ಲಿ ಭಾಗಿಯಾಗಿರುವ ಮತ್ತು ಒಂದಾಗಿರುವ ಭಾವನೆ ಇದೆ. ‘ಜನ ಶಕ್ತಿ’ಮತ್ತು ‘ರಾಷ್ಟ್ರಶಕ್ತಿ’ಯ ಬೆಳಕು ಇಡೀ ರಾಷ್ಟ್ರವನ್ನು ಬೆಳಗಿಸಿದೆ. ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್’ಎಂಬ ಮಂತ್ರದಿಂದ ನಡೆಸಲ್ಪಡುವ ಭಾರತವು ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದೆ ಸಾಗುತ್ತಿದೆ.

ನನ್ನ ದೇಶಬಾಂಧವರೇ,

ಕಳೆದ ಒಂದು ವರ್ಷದಲ್ಲಿ, ಕೆಲವು ನಿರ್ಧಾರಗಳ ಬಗ್ಗೆ ವ್ಯಾಪಕವಾಗಿ ಚರ್ಚೆ ನಡೆಯಿತು ಮತ್ತು ಈಗಲೂ ಇವು ಸಾರ್ವಜನಿಕವಾಗಿ ಚರ್ಚಿತವಾಗುತ್ತಿವೆ.

370 ನೇ ವಿಧಿಯು ರಾಷ್ಟ್ರೀಯ ಏಕತೆ ಮತ್ತು ಭಾವೈಕ್ಯತೆಯ ಮನೋಭಾವವನ್ನು ಹೆಚ್ಚಿಸಿತು. ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್ ಸರ್ವಾನುಮತದಿಂದ ನೀಡಿದ ರಾಮ ಮಂದಿರ ತೀರ್ಪು ಶತಮಾನಗಳಿಂದಲೂ ನಡೆಯುತ್ತಿದ್ದ ಚರ್ಚೆಗೆ ಸೌಹಾರ್ದಯುತವಾದ ಅಂತ್ಯವನ್ನು ಹಾಡಿತು. ಅನಾಗರಿಕ ಅಭ್ಯಾಸವಾದ ತ್ರಿವಳಿ ತಲಾಖ್ ಇತಿಹಾಸದ ಕಸದ ಬುಟ್ಟಿ ಸೇರಿತು. ಪೌರತ್ವ ಕಾಯ್ದೆಯ ತಿದ್ದುಪಡಿಯು ಭಾರತದ ಸಹಾನುಭೂತಿ ಮತ್ತು ಅಂತರ್ಗತ ಮನೋಭಾವದ ಅಭಿವ್ಯಕ್ತಿಯಾಗಿತ್ತು.

ರಾಷ್ಟ್ರದ ಅಭಿವೃದ್ಧಿ ಪಥದ ವೇಗವನ್ನು ಹೆಚ್ಚಿಸಿರುವ ಇನ್ನೂ ಅನೇಕ ನಿರ್ಧಾರಗಳಿವೆ.  ಸಶಸ್ತ್ರ ಪಡೆಗಳ ನಡುವೆ ಸಮನ್ವಯವನ್ನು ಸುಧಾರಿಸುವ ರಕ್ಷಣಾ ಪಡೆಗಳ ಮುಖ್ಯಸ್ಥರ ಹುದ್ದೆಯ ಸೃಷ್ಟಿಯು ಸುದೀರ್ಘ ಕಾಲದ ಬೇಡಿಕೆಯಾಗಿತ್ತು, ಹಾಗೆಯೇ, ಭಾರತವು ಮಿಷನ್ ಗಗನ್ ಯಾನಕ್ಕೆ ಸಿದ್ಧತೆಗಳನ್ನು ಹೆಚ್ಚಿಸಿದೆ.

ಬಡವರು, ರೈತರು, ಮಹಿಳೆಯರು ಮತ್ತು ಯುವಜನರನ್ನು ಸಶಕ್ತರನ್ನಾಗಿಸುವುದು ನಮ್ಮ ಆದ್ಯತೆಯಾಗಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಈಗ ಎಲ್ಲ ರೈತರನ್ನು ಒಳಗೊಂಡಿದೆ. ಕೇವಲ ಒಂದು ವರ್ಷದಲ್ಲಿ, 9 ಕೋಟಿ 50 ಲಕ್ಷ ರೈತರ ಖಾತೆಗಳಲ್ಲಿ 72,000 ಕೋಟಿ ರೂ.ಗಳನ್ನು ಜಮಾ ಮಾಡಲಾಗಿದೆ.

ಜಲ ಜೀವನ್ ಮಿಷನ್ 15 ಕೋಟಿಗೂ ಹೆಚ್ಚು ಗ್ರಾಮೀಣ ಕುಟುಂಬಗಳಿಗೆ ಕೊಳವೆ ಸಂಪರ್ಕದ ಮೂಲಕ ಕುಡಿಯಲು ಯೋಗ್ಯವಾದ ನೀರು ಪೂರೈಸುವುದನ್ನು ಖಚಿತಪಡಿಸುತ್ತದೆ.  ನಮ್ಮ 50 ಕೋಟಿ ಜಾನುವಾರುಗಳ ಉತ್ತಮ ಆರೋಗ್ಯಕ್ಕಾಗಿ ಉಚಿತ ಲಸಿಕೆ ಹಾಕುವ ಬೃಹತ್ ಅಭಿಯಾನವನ್ನು ನಡೆಸಲಾಗುತ್ತಿದೆ.

ನಮ್ಮ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ, ರೈತರು, ಕೃಷಿ ಕಾರ್ಮಿಕರು, ಸಣ್ಣ ವ್ಯಾಪಾರಸ್ಥರು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ 60 ವರ್ಷದ ನಂತರ ನಿಯಮಿತವಾಗಿ 3000 ರೂ. ಮಾಸಿಕ ಪಿಂಚಣಿಯ ಭರವಸೆ ನೀಡಲಾಗಿದೆ.

ಬ್ಯಾಂಕ್ ಸಾಲಗಳನ್ನು ಪಡೆಯುವ ಸೌಲಭ್ಯದ ಜೊತೆಗೆ, ಮೀನುಗಾರರಿಗಾಗಿ ಪ್ರತ್ಯೇಕ ಇಲಾಖೆಯನ್ನೂ ಸಹ ರಚಿಸಲಾಗಿದೆ. ಮೀನುಗಾರಿಕೆ ಕ್ಷೇತ್ರವನ್ನು ಬಲಪಡಿಸಲು ಇನ್ನೂ ಹಲವಾರು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಇದು ನೀಲಿ ಆರ್ಥಿಕತೆಯನ್ನು ಹೆಚ್ಚಿಸುತ್ತದೆ.

ಹಾಗೆಯೇ, ವ್ಯಾಪಾರಿಗಳ ಸಮಸ್ಯೆಗಳನ್ನು ಸಮಯೋಚಿತವಾಗಿ ಪರಿಹರಿಸಲು ವ್ಯಾಪರಿ ಕಲ್ಯಾಣ್ ಮಂಡಳಿಯನ್ನು ರಚಿಸಲು ನಿರ್ಧರಿಸಲಾಗಿದೆ. ಸ್ವಸಹಾಯ ಗುಂಪುಗಳೊಂದಿಗೆ ಇರುವ 7 ಕೋಟಿಗೂ ಹೆಚ್ಚು ಮಹಿಳೆಯರಿಗೆ ಹೆಚ್ಚಿನ ಪ್ರಮಾಣದ ಆರ್ಥಿಕ ನೆರವು ನೀಡಲಾಗುತ್ತಿದೆ. ಇತ್ತೀಚೆಗೆ ಸ್ವ-ಸಹಾಯ ಗುಂಪುಗಳಿಗೆ ಖಾತರಿ ಇಲ್ಲದ ಸಾಲಗಳನ್ನು ಹಿಂದಿನ 10 ಲಕ್ಷದಿಂದ 20 ಲಕ್ಷಕ್ಕೆ ದ್ವಿಗುಣಗೊಳಿಸಲಾಗಿದೆ.

ಬುಡಕಟ್ಟು ಮಕ್ಕಳ  ಶಿಕ್ಷಣವನ್ನು ಗಮನದಲ್ಲಿಟ್ಟುಕೊಂಡು 400 ಕ್ಕೂ ಹೆಚ್ಚು ಹೊಸ ಏಕಲವ್ಯ ಮಾದರಿ ವಸತಿ ಶಾಲೆಗಳ ನಿರ್ಮಾಣವನ್ನು ಪ್ರಾರಂಭಿಸಿದ್ದೇವೆ. ಕಳೆದ ವರ್ಷ ಹಲವಾರು ಜನಸ್ನೇಹಿ ಕಾನೂನುಗಳನ್ನು ಜಾರಿಗೆ ತರಲಾಗಿದೆ. ನಮ್ಮ ಸಂಸತ್ತು ಉತ್ಪಾದಕತೆಯ ದೃಷ್ಟಿಯಿಂದ ದಶಕಗಳಷ್ಟು ಹಳೆಯದಾದ ದಾಖಲೆಯನ್ನು ಮುರಿದಿದೆ. ಇದರ ಪರಿಣಾಮವಾಗಿ, ಗ್ರಾಹಕ ಸಂರಕ್ಷಣಾ ಕಾಯ್ದೆ, ಚಿಟ್ ಫಂಡ್ ಕಾನೂನಿಗೆ ತಿದ್ದುಪಡಿ, ಮಹಿಳೆಯರು, ಮಕ್ಕಳು ಮತ್ತು ದಿವ್ಯಾಂಗರಿಗೆ ಹೆಚ್ಚಿನ ರಕ್ಷಣೆ ನೀಡುವ ಕಾನೂನುಗಳಿಗೆ ಸಂಸತ್ತಿನಲ್ಲಿ ತ್ವರಿತ ಅಂಗೀಕಾರ ದೊರೆಯಿತು.

ಸರ್ಕಾರದ ನೀತಿಗಳು ಮತ್ತು ನಿರ್ಧಾರಗಳ ಪರಿಣಾಮವಾಗಿ ಹಳ್ಳಿ ಮತ್ತು ನಗರಗಳ ನಡುವಿನ ಅಂತರವು ತಗ್ಗುತ್ತಿದೆ. ಮೊದಲ ಬಾರಿಗೆ, ಅಂತರ್ಜಾಲವನ್ನು ಬಳಸುವ ಗ್ರಾಮೀಣ ಭಾರತೀಯರ ಸಂಖ್ಯೆಯು ನಗರ ಭಾರತೀಯರ ಸಂಖ್ಯೆಗಿಂತ ಶೇ.10 ರಷ್ಟು ಹೆಚ್ಚಾಗಿದೆ.

ಇಂತಹ ಐತಿಹಾಸಿಕ ಕ್ರಮಗಳು ಮತ್ತು ನಿರ್ಧಾರಗಳ ಪಟ್ಟಿಯನ್ನು ಈ ಪತ್ರದಲ್ಲಿ ವಿವರಿಸಿದರೆ ತುಂಬಾ ಉದ್ದವಾಗುತ್ತದೆ. ಆದರೆ ಈ ವರ್ಷದ ಪ್ರತಿದಿನವೂ, ನನ್ನ ಸರ್ಕಾರವು ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಅನುಷ್ಠಾನಗೊಳಿಸಲು ದಿನದ 24 ಗಂಟೆಯೂ ಸಂಪೂರ್ಣ ಹುರುಪಿನಿಂದ ಕೆಲಸ ಮಾಡಿದೆ ಎಂದು ನಾನು ಹೇಳಲೇಬೇಕು. ನಮ್ಮ ದೇಶವಾಸಿಗಳ ಭರವಸೆಗಳು ಮತ್ತು ಆಕಾಂಕ್ಷೆಗಳನ್ನು ಈಡೇರಿಸುವಲ್ಲಿ ನಾವು ವೇಗವಾಗಿ ಸಾಗುತ್ತಿರುವಾಗ, ಕೊರೊನಾವೈರಸ್ ಎಂಬ ಜಾಗತಿಕ ಸಾಂಕ್ರಾಮಿಕವು ನಮ್ಮ ದೇಶವನ್ನೂ ಆವರಿಸಿತು.

ಉತ್ತಮ ಆರ್ಥಿಕ ಸಂಪನ್ಮೂಲಗಳು ಮತ್ತು ಅತ್ಯಾಧುನಿಕ ಆರೋಗ್ಯ ವ್ಯವಸ್ಥೆಗಳನ್ನು ಹೊಂದಿರುವ ಶಕ್ತಿಶಾಲಿ ರಾಷ್ಟ್ರಗಳು ಒಂದೆಡೆಯಾದರೆ, ಮತ್ತೊಂದೆಡೆ ಅಪಾರ ಜನಸಂಖ್ಯೆ ಮತ್ತು ಸೀಮಿತ ಸಂಪನ್ಮೂಲಗಳಿರುವ ನಮ್ಮ ದೇಶವು ಸಮಸ್ಯೆಗಳಿಗೆ ಸಿಲುಕಿತು.

ಕೊರೊನಾ ಭಾರತಕ್ಕೆ ಅಪ್ಪಳಿಸಿದಾಗ ಭಾರತವು ಜಗತ್ತಿಗೆ ಸಮಸ್ಯೆಯಾಗಲಿದೆ ಎಂದು ಹಲವರು ಭಯಪಟ್ಟರು. ಆದರೆ ಇಂದು, ಸಂಪೂರ್ಣ ವಿಶ್ವಾಸ ಮತ್ತು ಚೇತರಿಕೆಯ ಮೂಲಕ ಜಗತ್ತು ನಮ್ಮನ್ನು ನೋಡುವ ವಿಧಾನವನ್ನೇ ನೀವು ಬದಲಾಯಿಸಿದ್ದೀರಿ. ಭಾರತೀಯರ ಸಾಮೂಹಿಕ ಶಕ್ತಿ ಮತ್ತು ಸಾಮರ್ಥ್ಯವು ವಿಶ್ವದ ಪ್ರಬಲ ಮತ್ತು ಸಮೃದ್ಧ ದೇಶಗಳಿಗೂ ಸಾಟಿಯಿಲ್ಲದ್ದು ಎಂದು ನೀವು ಸಾಬೀತುಪಡಿಸಿದ್ದೀರಿ. ಕೊರೊನಾ ಯೋಧರನ್ನು ಗೌರವಿಸುವುದಕ್ಕಾಗಿ ಚಪ್ಪಾಳೆ ತಟ್ಟಿ, ದೀಪವನ್ನು ಬೆಳಗಿಸಿದ್ದಿರಬಹುದು, ಜನತಾ ಕರ್ಫ್ಯೂ ಅಥವಾ ರಾಷ್ಟ್ರವ್ಯಾಪಿ ಲಾಕ್ಡೌನ್ ಸಮಯದಲ್ಲಿ ನಿಯಮಗಳನ್ನು ನಿಷ್ಠೆಯಿಂದ ಪಾಲಿಸಿದ್ದಿರಬಹುದು, ಪ್ರತಿ ಸಂದರ್ಭದಲ್ಲೂ ಏಕ ಭಾರತದಿಂದಲೇ ಶ್ರೇಷ್ಠಭಾರತ ಎಂದು ನಿರೂಪಿಸಿದ್ದೀರಿ.

ಇಂತಹದೊಂದು ದೊಡ್ಡ ಬಿಕ್ಕಟ್ಟಿನಲ್ಲಿ, ಯಾರೂ ಯಾವುದೇ ಅನಾನುಕೂಲತೆ ಅಥವಾ ಸಂಕಷ್ಟವನ್ನು ಅನುಭವಿಸಲಿಲ್ಲ ಎಂದು ಖಂಡಿತವಾಗಿಯೂ ಹೇಳಲಾಗುವುದಿಲ್ಲ. ನಮ್ಮ ಕಾರ್ಮಿಕರು, ವಲಸೆ ಕಾರ್ಮಿಕರು, ಸಣ್ಣ ಕೈಗಾರಿಕೆಗಳ ಕುಶಲಕರ್ಮಿಗಳು, ಬೀದಿ ಬದಿ ವ್ಯಾಪಾರಿಗಳು ಮತ್ತು ಇಂತಹ ಅನೇಕ ದೇಶಬಾಂಧವರು ಭಾರೀ ನೋವುಂಡಿದ್ದಾರೆ. ಅವರ ತೊಂದರೆಗಳನ್ನು ನಿವಾರಿಸಲು ನಾವು ಒಗ್ಗಟ್ಟಿನಿಂದ ಮತ್ತು ದೃಢ ನಿಶ್ಚಯದಿಂದ ಕೆಲಸ ಮಾಡುತ್ತಿದ್ದೇವೆ.

ಆದರೂ, ನಾವು ಎದುರಿಸುತ್ತಿರುವ ಅನಾನುಕೂಲತೆಗಳು ವಿಪತ್ತುಗಳಾಗಿ ಬದಲಾಗದಂತೆ ಕಾಳಜಿ ವಹಿಸಬೇಕು. ಆದ್ದರಿಂದ, ಪ್ರತಿಯೊಬ್ಬ ಭಾರತೀಯನೂ ಎಲ್ಲಾ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸುವುದು ಬಹಳ ಮುಖ್ಯ. ನಾವು ಇಲ್ಲಿಯವರೆಗೆ ತಾಳ್ಮೆಯನ್ನು ಪ್ರದರ್ಶಿಸಿದ್ದೇವೆ ಮತ್ತು ನಾವು ಅದನ್ನು ಮುಂದುವರಿಸಬೇಕು. ಭಾರತವು ಸುರಕ್ಷಿತವಾಗಿರಲು ಮತ್ತು ಇತರ ಹಲವು ದೇಶಗಳಿಗಿಂತ ಉತ್ತಮ ಸ್ಥಿತಿಯಲ್ಲಿರಲು ಇದು ಪ್ರಮುಖವಾಗಿದೆ. ಇದೊಂದು ಸುದೀರ್ಘ ಸಮರ. ಆದರೆ ನಾವು ವಿಜಯದ ಹಾದಿಯಲ್ಲಿ ಸಾಗುತ್ತಿದ್ದೇವೆ ಮತ್ತು ಗೆಲುವು ನಮ್ಮ ಸಾಮೂಹಿಕ ಸಂಕಲ್ಪವಾಗಿದೆ.

ಕಳೆದ ಕೆಲವು ದಿನಗಳಲ್ಲಿ, ಚಂಡಮಾರುತವೊಂದು ಪಶ್ಚಿಮ ಬಂಗಾಳ ಮತ್ತು ಒಡಿಶಾದ ಕೆಲವು ಭಾಗಗಳಲ್ಲಿ ಹಾನಿ ಮಾಡಿದೆ. ಇಲ್ಲಿಯೂ ಈ ರಾಜ್ಯಗಳ ಜನರ ಪುಟಿದೇಳುವ ಗುಣ ಗಮನಾರ್ಹವಾಗಿದೆ. ಅವರ ಧೈರ್ಯವು ಭಾರತದ ಜನರಿಗೆ ಉತ್ತೇಜನಕಾರಿಯಾದ್ದು.

ನಲ್ಮೆಯ ಸ್ನೇಹಿತರೇ

ಇಂತಹ ಸಂದರ್ಭದಲ್ಲಿ, ಭಾರತ ಸೇರಿದಂತೆ ವಿವಿಧ ದೇಶಗಳ ಆರ್ಥಿಕತೆಗಳು ಹೇಗೆ ಚೇತರಿಸಿಕೊಳ್ಳುತ್ತವೆ ಎಂಬ ಬಗ್ಗೆ ವ್ಯಾಪಕ ಚರ್ಚೆಯೂ ನಡೆಯುತ್ತಿದೆ. ಭಾರತವು ತನ್ನ ಕೊರೊನಾವೈರಸ್ ವಿರುದ್ಧದ ಹೋರಾಟದಲ್ಲಿ ಏಕತೆ ಮತ್ತು ದೃಢ ಸಂಕಲ್ಪದಿಂದ ಜಗತ್ತನ್ನು ಅಚ್ಚರಿಗೊಳಿಸಿದ ರೀತಿಯನ್ನು ಗಮನಿಸಿದರೆ, ಆರ್ಥಿಕ ಪುನಶ್ಚೇತನದಲ್ಲೂ ನಾವು ಒಂದು ಮಾದರಿಯಾಗುತ್ತೇವೆ ಎಂಬ ದೃಢವಾದ ನಂಬಿಕೆ ಇದೆ. 130 ಕೋಟಿ ಭಾರತೀಯರು ತಮ್ಮ ಶಕ್ತಿಯ ಮೂಲಕ ಆರ್ಥಿಕ ಕ್ಷೇತ್ರದಲ್ಲಿ ಜಗತ್ತನ್ನು ಅಚ್ಚರಿಗೊಳಿಸುವುದಷ್ಟೇ ಅಲ್ಲ, ಜಗತ್ತನ್ನು ಪ್ರೇರೇಪಿಸಲೂಬಹುದು.

ನಾವು ಸ್ವಾವಲಂಬಿಗಳಾಗುವುದು ಇಂದಿನ ಅವಶ್ಯಕತೆಯಾಗಿದೆ. ನಾವು ನಮ್ಮದೇ ಸಾಮರ್ಥ್ಯಗಳನ್ನು ಆಧರಿಸಿ, ನಮ್ಮದೇ ಆದ ರೀತಿಯಲ್ಲಿ ಮುಂದುವರಿಯಬೇಕು ಮತ್ತು ಅದನ್ನು ಸಾಧಿಸಲು ಇರುವ ಒಂದೇ ಮಾರ್ಗವೆಂದರೆ – ಆತ್ಮನಿರ್ಭರ ಭಾರತ್ ಅಥವಾ ಸ್ವಾವಲಂಬಿ ಭಾರತ.

ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಇತ್ತೀಚೆಗೆ ನೀಡಲಾದ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಈ ದಿಕ್ಕಿನಲ್ಲಿ ಇಟ್ಟಿರುವ ಪ್ರಮುಖ ಹೆಜ್ಜೆಯಾಗಿದೆ. ಈ ಉಪಕ್ರಮವು ಪ್ರತಿಯೊಬ್ಬ ಭಾರತೀಯನಿಗೂ, ನಮ್ಮ ರೈತರು, ಕಾರ್ಮಿಕರು, ಸಣ್ಣ ಉದ್ಯಮಿಗಳು ಅಥವಾ ಸ್ಟಾರ್ಟ್ ಅಪ್ಗಳಿಗೆ ಸಂಬಂಧಿಸಿದ ಯುವಕರು ಹೀಗೆ ಎಲ್ಲರಿಗೂ ಅವ ಕಾಶಗಳ ಹೊಸ ಯುಗಕ್ಕೆ ನಾಂದಿ ಹಾಡಲಿದೆ,

ನಮ್ಮ ಕಾರ್ಮಿಕರ ಬೆವರು, ಕಠಿಣ ಪರಿಶ್ರಮ ಮತ್ತು ಪ್ರತಿಭೆಯೊಂದಿಗೆ ಭಾರತದ ಮಣ್ಣಿನ ಸುಗಂಧವು ಉತ್ಪನ್ನಗಳನ್ನು ತಯಾರಿಸುತ್ತದೆ. ಅದು ಆಮದಿನ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಸ್ವಾವಲಂಬನೆಯತ್ತ ಸಾಗುತ್ತದೆ.

ಕಳೆದ ಆರು ವರ್ಷಗಳ ಈ ಪ್ರಯಾಣದಲ್ಲಿ, ನೀವು ನನಗೆ ನಿರಂತರವಾಗಿ ಪ್ರೀತಿ ಮತ್ತು ಆಶೀರ್ವಾದವನ್ನು ನೀಡಿದ್ದೀರಿ.

ನಿಮ್ಮ ಆಶೀರ್ವಾದದ ಬಲವೇ ಕಳೆದ ಒಂದು ವರ್ಷದಲ್ಲಿ ರಾಷ್ಟ್ರವು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ವೇಗವಾಗಿ ಪ್ರಗತಿ ಸಾಧಿಸಲು ಕಾರಣವಾಗಿದೆ. ಆದರೂ ನಾನು ಮಾಡಬೇಕಾದದ್ದು ಬಹಳಷ್ಟು ಇದೆ ಎಂದು ನನಗೆ ಗೊತ್ತಿದೆ. ನಮ್ಮ ದೇಶ ಹಲವು ಸವಾಲುಗಳು ಮತ್ತು ಸಮಸ್ಯೆಗಳನ್ನು ಎದುರಿಸುತ್ತಿದೆ. ನಾನು ಹಗಲು ರಾತ್ರಿ ಕೆಲಸ ಮಾಡುತ್ತಿದ್ದೇನೆ. ನನ್ನಲ್ಲಿ ನ್ಯೂನತೆಗಳು ಇರಬಹುದು ಆದರೆ ನಮ್ಮ ದೇಶದಲ್ಲಿ ಅಂತಹ ನ್ಯೂನತೆಗಳಿಲ್ಲ. ಆದ್ದರಿಂದ, ನಾನು ನಿಮ್ಮನ್ನು ನಂಬುತ್ತೇನೆ, ನಿಮ್ಮ ಶಕ್ತಿ ಮತ್ತು ಸಾಮರ್ಥ್ಯಗಳ ಮೇಲೆ ನನಗೆ ನನ್ನ ಮೇಲಿರುವುದಕ್ಕಿಂತಲೂ ಹೆಚ್ಚು ನಂಬಿಕೆ ಇದೆ.

ನನ್ನ ಸಂಕಲ್ಪಕ್ಕೆ ಶಕ್ತಿಯ ಮೂಲವೇ ನೀವು, ನಿಮ್ಮ ಬೆಂಬಲ, ಆಶೀರ್ವಾದ ಮತ್ತು ಪ್ರೀತಿ. ಜಾಗತಿಕ ಸಾಂಕ್ರಾಮಿಕ ರೋಗದಿಂದಾಗಿ ಇದು ಖಂಡಿತವಾಗಿಯೂ ಬಿಕ್ಕಟ್ಟಿನ ಕಾಲ. ಆದರೆ ಭಾರತೀಯರಾದ ನಮಗೆ ಇದು ದೃಢಸಂಕಲ್ಪದ ಸಮಯ. 130 ಕೋಟಿ ಜನರ ಇಂದಿನ ಮತ್ತು ಮುಂದಿನ ಬದುಕನ್ನು ಯಾವುದೋ ಒಂದು ವಿಪತ್ತು ನಿರ್ಧರಿಸಲಾರದು ಎಂಬುದನ್ನು ನಾವು ಸದಾ ನೆನಪಿನಲ್ಲಿಡಬೇಕು.

 

 

Leave a Reply

error: Content is protected !!
LATEST
ಸೆ.12ರಂದು 5 ಭಾಷೆಗಳಲ್ಲಿ ಬೆಳ್ಳಿತೆರೆ ಮೇಲೆ ARM- ಚಿತ್ರದ ಟ್ರೈಲರ್‌ಗೆ ಭಾರೀ ಮೆಚ್ಚುಗೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಬೇಕೇಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರು: ಕಲುಷಿತ ನೀರು ಸೇವಿಸಿ 12ಮಂದಿಗೆ ವಾಂತಿ, ‌ಭೇದಿ, ಓರ್ವ ಮೃತ ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಆತ್ಯಹತ್ಯೆ KSRTC ನೌಕರರ ಕಿತ್ತು ತಿನ್ನುವ ಭ್ರಷ್ಟರು: ಹೋಟೆಲ್‌ಗೆ ತಿನ್ನಲು ಹೋಗಿ ನೌಕರನಿಗೆ ಫೋನ್‌ ಪೇ ಮಾಡಲು ಹೇಳಿದ ಎಟಿಐ ಗಂಗಾಧ... KSRTC ಮಂಡ್ಯ: ಓವರ್‌ಟೇಕ್‌ ನೆಪದಲ್ಲಿ ತಾನೇ ಬಸ್‌ಗೆ ಬೈಕ್‌ ಡಿಕ್ಕಿ ಹೊಡೆಸಿ ಅಪಘಾತದ ಹೈಡ್ರಾಮ ಮಾಡಿದ ಬೈಕ್‌ ಸವಾರ ಯೋಗ... KSRTC: ಆ‌ರ್‌ಟಿಒ ಚಾಲನಾ ಪರವಾನಗಿ ಅಮಾನತುಗೊಳಿಸಿದ ಚಾಲಕರಿಗೆ ಡ್ಯೂಟಿ ಕೊಟ್ಟರೆ ಕ್ರಮ- ಡಿಸಿ ಸೂಚನೆ ಆರೋಗ್ಯ ಶಿಬಿರ ಸಾಮಾಜಿಕ ಜವಾಬ್ದಾರಿ: ನ್ಯಾಯ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ ಚಾರ್ಜ್‌ಶೀಟ್ ಗೌಪ್ಯ ದಾಖಲಾತಿ ಏನಲ್ಲ: ಗೃಹ ಸಚಿವ ಪರಮೇಶ್ವರ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ : ಬಿವೈವಿ