ವಿಜಯಪಥ ಸಮಗ್ರ ಸುದ್ದಿ
ಬೆಳಗಾವಿ: ಭಾರಿ ಕುತೂಹಲ ಕೆರಳಿಸಿದ್ದ ಬೆಳಗಾವಿಯ ಲೋಕಸಭಾ ಉಪ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳ ಅಂಗಡಿ ಅವರು 2903 ಮತಗಳ ಅಂತರದಿಂದ ಗೆಲುವಿನ ನಗೆ ಬೀರುವ ಮೂಲಕ ಕೊನೆ ಕ್ಷಣದಲ್ಲಿ ಜಯಬೇರಿ ಬಾರಿಸಿದ್ದಾರೆ.
ಕೊನೆಯ ಸುತ್ತಿನ ಮತ ಎಣಿಕೆ ವೇಳೆಗೆ 4,35,202 ಮತಗಳನ್ನು ಪಡೆದು ವಿಜಯಶಾಲಿಯಾದರೆ, ಪ್ರತಿಸ್ಪರ್ಥಿ ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ 4,32,299 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
ಮತ ಎಣಿಕೆಯ ಕ್ಷಣ ಕ್ಷಣಕ್ಕೂ ಭಾರಿ ಕುತೂಹಲದಲ್ಲೇ ಸಾಗಿದ್ದು ಒಂದು ಮೈಲಿಗಲ್ಲಾಗಿದೆ. ಮತ ಎಣಿಕೆ ಕೊನೆಯ ಹಂತ ತಲುಪಿದ್ದು, ಗೆಲ್ಲುವವರು ಯಾರು ಎಂಬ ಕುತೂಹಲ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರಲ್ಲೂ ಹೆಚ್ಚಿಸಿತ್ತು.
ಇನ್ನು ಆರಂಭದಿಂದ 40 ಸುತ್ತುಗಳವರೆಗೂ ಮನ್ನಡೆ ಕಾಯ್ದುಕೊಂಡು ಬಂದಿದ್ದ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರು 41ನೇ ಸುತ್ತಿನ ಬಳಿಕ ಹಿನ್ನಡೆ ಅನುಭವಿಸಿದ್ದರು.
41ನೇ ಮತ ಎಣಿಕೆ ಸುತ್ತಿನಿಂದ 80ನೇ ಸುತ್ತಿನವರೆಗೂ ಮುನ್ನಡೆ ಕಾಯ್ದುಕೊಂಡು ಬಂದಿದ್ದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರು 81ನೇ ಸುತ್ತಿನ ನಂತರ ಹಿನ್ನಡೆ ಅನುಭವಿಸಿದರು.
ಈ ನಡುವೆ ಭಾರಿ ಕುತೂಹಲ ಕೆರಳಿಸಿದ್ದು, ಹಾವು ಏಣಿ ಆಟ ನಡೆಯುತ್ತಲೇ ಇತ್ತು. ಈ ನಡುವೆ ಕಳೆದ 81ನೇ ಸುತ್ತಿನಿಂದ ಮುನ್ನಡೆ ಸಾಧಿಸಿದ ಮಂಗಳಾ ಅಂಗಡಿ ಅವರು, 85ನೇ ಸುತ್ತಿಗೆ 4123 ಮತಗಳ ಅಂತರ ಕಾಯ್ದುಕೊಳ್ಳುವ ಮೂಲಕ ವಿಜಯದತ್ತ ದಾಪುಗಾಲಿರಿಸಿದರು.
ಒಟ್ಟು 88 ಸುತ್ತುಗಳ ಮತ ಎಣಿಕೆಯಲ್ಲಿ ಇನ್ನು ಕೇವಲ 3 ಸುತ್ತುಗಳು ಮಾತ್ರ ಬಾಕಿ ಇದ್ದು, ಈ ನಡುವೆ ಬಿಜೆಪಿಯ ನಾಯಕರ ಎದೆ ಬಡಿತವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿತು. ಆದರೆ 86ನೇ ಸುತ್ತಿನಲ್ಲಿ 2941 ಮತಗಳ ಮುನ್ನಡೆ ಕಾಯ್ದುಕೊಂಡಿದ್ದರು.
ಮತ್ತೆ 87ನೇ ಸುತ್ತಿನಲ್ಲಿ ಕಡಿಮೆ ಅಂತರ ಮುನ್ನಡೆ ಕಾಯ್ದುಕೊಂಡಿದ್ದು, ಬಿಜೆಪಿ ನಾಯಕರಲ್ಲಿ ಎದೆ ಬಡಿತವನ್ನು ಹೆಚ್ಚಿಸಿದ್ದು, ಈ ನಡುವೆ ಕಾಂಗ್ರೆಸ್ ನಾಯಕರಲ್ಲೂ ಇನ್ನಷ್ಟು ಹೆಚ್ಚಿಸಿತು. ಇದನ್ನು ಭಾರಿ ಕುತೂಹಲದಿಂದ ನೋಡುತ್ತಿದ್ದ ಎರಡೂ ಪಕ್ಷಗಳ ಕಾರ್ಯಕರ್ತರ ಹೃದಯ ಬಡಿತ ಜೋರಾಗಿತ್ತು.
ಕೊನೆಯ ಸುತ್ತಿನಲ್ಲಿ 2903 ಮತಗಳ ಮುನ್ನಡೆಯನ್ನು ಮಂಗಳ ಅಂಗಡಿ ಅವರು ಕಾಯ್ದುಕೊಂಡಿದ್ದರು. ಈ ನಡುವೆ ಯಾರಿಗೆ ಬೆಳಗಾವಿಯ ಮುಕುಟ ಮಣಿ ಒಲಿಯಲಿದೆ ಎಂಬ ಕುತೂಹಲಕಾರಿ ರಣ ರೋಚಕ ಹಂತವನ್ನು ತಲುಪಿತು. ಕೊನೆಗೆ ಬಿಜೆಪಿ ಮಂಗಳ ಅಂಗಡಿಗೆ ಮತದಾರ ಜೈ ಎಂದಿದ್ದು, ಬೆಳಗ್ಗಿನಿಂದ ನಡೆದ ರಣ ರೋಚಕ ಹಣಹಣಿ ಮತ್ತು ಕುತೂಹಲಕ್ಕೆ ತೆರೆ ಬಿದ್ದಿದೆ.