ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೊರೊನಾ ಸೋಂಕಿತರಿಗೆ ಸರಿಯಾದ ಔಷಧ ಮತ್ತು ಬೆಡ್ ವ್ಯವಸ್ಥೆ ಇಲ್ಲದೆ ದಿನಕ್ಕೆ ನೂರಾರು ಸೋಂಕಿತರು ರಾಜ್ಯದಲ್ಲಿ ಅಸುನೀಗುತ್ತಿದ್ದಾರೆ.
ಆದರೆ, ಈ ರೀತಿ ಕೋವಿಡ್ನಿಂದ ಮೃತಪಡುತ್ತಿದ್ದರೂ ಅದರ ಹೊಣೆಯನ್ನು ಹೊರಲು ಮಾತ್ರ ಸರ್ಕಾರದ ಯಾವುದೇ ಮಂತ್ರಿಮಹೋದಯರು ಹಾಗೂ ಅಧಿಕಾರಿಗಳು ಸಿದ್ಧರಿಲ್ಲ.
ಇದು ಹೀಗೆ ಮುಂದುವರಿದರೆ, ರಾಜ್ಯದ ಪ್ರತೀ ಹಳ್ಳಿಯ ರಸ್ತೆ ರಸ್ತೆಗಳಲ್ಲೂ ಮೃತದೇಹಗಳು ಅನಾಥವಾಗಿ ಬೀಳಲಿವೆ. ಹೀಗಾಗಿ ಈಗಲಾದರೂ ಸರ್ಕಾರ ಮತ್ತು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು.
ಶೀಘ್ರದಲ್ಲೇ ಕೊರೊನಾ ಸೋಂಕಿತರಿಗೆ ಸರಿಯಾದ ಬೆಡ್ ವ್ಯವಸ್ಥೆ ಮತ್ತು ಔಷಧಗಳನ್ನು ಒದಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜನರು ಈ ಸೋಂಕನ್ನು ಲೆಕ್ಕಿಸದೆ ಬೀದಿಗಿಳಿದು ಹೋರಾಟ ಮಾಡಲಿದ್ದಾರೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಹೆಚ್ಚಾಗುತ್ತಿದ್ದು, ಲೆಕ್ಕಕ್ಕೆ ಸಿಗದಷ್ಟು ಮಂದಿ ಮೃತಪಡುತ್ತಿದ್ದಾರೆ. ಆದರೆ, ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ತಮಗೆ ಸಿಕ್ಕ ಮಾಹಿತಿಯನ್ನು ಮಾತ್ರ ನೀಡುತ್ತಿದ್ದು, ಇನ್ನುಳಿದ ಸಾವಿನ ಲೆಕ್ಕವನ್ನು ಮರೆ ಮಾಚುವ ಕೆಲಸವನ್ನು ಮಾಡುತ್ತಿವೆ.
ಒಂದು ಕಡೆ ಹಸಿವು, ಇನ್ನೊಂದು ಕಡೆ ಈ ಮಹಾಮಾರಿಯಿಂದ ಬಳಲುತ್ತಿರುವ ನಾಡಿನ ಜನರಿಗೆ ಸರಿಯಾದ ಆಸರೆ ಒದಗಿಸಬೇಕಾದ್ದು ಸರ್ಕಾರದ ಕರ್ತವ್ಯ. ಹೀಗಾಗಿ ಸರ್ಕಾರ ಮತ್ತು ಸ್ಥಳೀಯ ಆಡಳಿತ ಬಿಗಿ ಕ್ರಮ ಜರುಗಿಸಿ ರಾಜ್ಯದ ಪ್ರತೀ ಜನರಿಗೂ ಅರೋಗ್ಯ ಸೌಲಭ್ಯ ನೀಡುವಲ್ಲಿ ತೋರುತ್ತಿರುವ ಉದಾಸೀನ ನಡೆಯಿಂದ ಹೊರಬರಬೇಕಿದೆ.