ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಬಸವಕಲ್ಯಾಣದಲ್ಲಿ ಜೆಡಿಎಸ್ ಪಡೆದ ಮತಗಳು ನಮ್ಮ ಮತಗಳು ಎಂದಿದ್ದೀರಿ. ಇದು ಪ್ರಜ್ಞಾವಂತ ಮತದಾರನಿಗೆ ನೀವು ಮಾಡಿದ ಅವಮಾನ ಅಲ್ಲದೆ ಮತ್ತೇನು? ಅಲ್ಪಸಂಖ್ಯಾತರು ನಿಮ್ಮ ಜೀತದಾಳುಗಳೇ? ಜನಾದೇಶವನ್ನು ಒಪ್ಪಿಕೊಳ್ಳುವ ನಿಸ್ಪೃಹ ಮನಸ್ಸು ನಿಮಗೂ ಇರಬೇಕಲ್ಲವೇ? ಅಲ್ಪಸಂಖ್ಯಾತರು ಮತ್ತು ಜೆಡಿಎಸ್ ಬಗ್ಗೆ ಮಾತನಾಡಲು ನಿಮಗೆ ಯಾವ ನೈತಿಕತೆ ಇದೆ ಎಂದು ಸಿದ್ದರಾಮಯ್ಯನವರನ್ನು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯನವರೇ, ಬಸವ ಕಲ್ಯಾಣದಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ್ದಕ್ಕಾಗಿ ಕಾಂಗ್ರೆಸ್ ಸೋತಿದೆ ಎಂದು ಹೇಳಿದ್ದೀರಿ. ನಿಮಗೆ ಅಲ್ಪಸಂಖ್ಯಾತರ ಮೇಲೆ ಕೋಪವೋ? ಜೆಡಿಎಸ್ ಮೇಲೆ ಅಸಮಾಧಾನವೋ? ಅರ್ಥವಾಗುತ್ತಿಲ್ಲ.. ಅಷ್ಟಕ್ಕೂ ನೀವು ಯಾವ ಅಲ್ಪಸಂಖ್ಯಾತ ನಾಯಕರನ್ನೂ ಬೆಳೆಸಿದ ನಿದರ್ಶನ ಇಲ್ಲ ಎಂದು ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ಬಸವ ಕಲ್ಯಾಣದಲ್ಲಿ ಸೋತಿದ್ದೀರಿ ಸರಿ. ಮಸ್ಕಿಯಲ್ಲೂ ನಿಮ್ಮದೇ ಪಕ್ಷದ ಅಭ್ಯರ್ಥಿಯನ್ನು ಸೋಲಿಸಲು ಬಯಸಿದವರು ನೀವು. ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ನೀವು ಎಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೀರಿ ಎಂಬುದನ್ನು ಕಾಂಗ್ರೆಸ್ ಸ್ನೇಹಿತರೆ ಕಂಡಿದ್ದಾರೆ ಎಂದು ಹೇಳಿದ್ದಾರೆ.
ಮುಂದಿನ ಮುಖ್ಯಮಂತ್ರಿ ಹುದ್ದೆ ಕನಸು ಕಾಣುತ್ತಿರುವ ನೀವು ಕನಿಷ್ಠ ಪಕ್ಷ ಸ್ವಂತ ಪಕ್ಷಕ್ಕಾದರೂ ಮೋಸ ಮಾಡುವುದನ್ನು ಬಿಡಿ. ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಎಲ್ಲ ಸ್ವಾತಂತ್ರ್ಯವನ್ನು ಹೊಂದಿದೆ ಮತ್ತು ಬರುವ ದಿನಗಳಲ್ಲಿ ಮತ್ತಷ್ಟು ಸಮರ್ಥವಾಗಿ ಜನರ ವಿಶ್ವಾಸ ಗೆಲ್ಲಲಿದೆ ಎಂಬುದು ನಿಮಗೆ ಗೊತ್ತಿರಲಿ ಎಂದು ತಿಳಿಸಿದ್ದಾರೆ.