ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಕಳೆದ ಏಪ್ರಿಲ್ 27ರಿಂದ ಜೂನ್ 14ರವರೆಗೆ ಜಾರಿಯಲ್ಲಿರುವ ಲಾಕ್ಡೌನ್, ಜೂನ್ 14ರ ಬಳಿಕವೂ ಮುಂದುವಿಯುತ್ತಾ? ಅಥವಾ ತೆರವುಗೊಳ್ಳುತ್ತಾ? ಎಂಬ ಕುತೂಹಲಕ್ಕೆ ಇಂದೇ (ಗುರುವಾರ) ತೆರೆ ಬೀಳುವ ಸಾಧ್ಯತೆಯಿದೆ.
ಈಗಾಗಲೇ ಹಂತಹಂತವಾಗಿ ಲಾಕ್ಡೌನ್ ತೆರವುಗೊಳಿಸುವ ಮುನ್ಸೂಚನೆ ನೀಡಿರುವ ಸರ್ಕಾರ ಅನ್ಲಾಕ್ ಘೋಷಿಸುವ ಸಾಧ್ಯತೆ ಹೆಚ್ಚಾಗಿದ್ದು, ರಾಜ್ಯದಲ್ಲಿ 4ರಿಂದ 5 ಹಂತದಲ್ಲಿ ಅನ್ಲಾಕ್ ಘೋಷಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.
ಇಂದು ರಾಜ್ಯದ ಎಲ್ಲ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಜತೆ ಮಹತ್ವದ ಸಭೆ ನಡೆಸಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಯಾ ಜಿಲ್ಲೆಗಳ ಕೊರೊನಾ ಸೋಂಕಿತರು, ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದು ಅನ್ಲಾಕ್ ಜಾರಿಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಈಗಾಗಲೇ ಸಬ್ ರಿಜಿಸ್ಟ್ರಾರ್ ಕಚೇರಿ, ಕೈಗಾರಿಕೆಗಳಿಗೆ ಲಾಕ್ಡೌನ್ನಿಂದ ವಿನಾಯಿತಿ ನೀಡಿದ್ದು, ಹೀಗಾಗಿ ಮತ್ತೆ ಬೆಂಗಳೂರಿನಲ್ಲಿ ಜನದಟ್ಟಣೆ ಹೆಚ್ಚಾಗುತ್ತಿದೆ. ಒಂದೂವರೆ ತಿಂಗಳಿನಿಂದ ಬೆಂಗಳೂರು ತೊರೆದಿದ್ದ ಜನರು ಇದೀಗ ಮತ್ತೆ ರಾಜಧಾನಿಗೆ ಮರಳುತ್ತಿದ್ದಾರೆ.
ಬೆಂಗಳೂರಿನಲ್ಲಿ ಕೊರೊನಾ ಪಾಸಿಟಿವಿಟಿ ದರ ಕಡಿಮೆಯಾಗಿರುವುದರಿಂದ ಹಂತಹಂತವಾಗಿ ಲಾಕ್ಡೌನ್ ಸಡಿಲಿಕೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಲಾಕ್ಡೌನ್ ಬಳಿಕ ಕೊರೋನಾ ಕೇಸುಗಳು ನಿಯಂತ್ರಣಕ್ಕೆ ಬಂದಿದ್ದರಿಂದ ನಿಟ್ಟುಸಿರು ಬಿಟ್ಟಿದ್ದ ಬಿಬಿಎಂಪಿ ಅಧಿಕಾರಿಗಳಿಗೆ ಅನ್ಲಾಕ್ ಬಳಿಕ ಬೆಂಗಳೂರಿನಲ್ಲಿ ಕೋವಿಡ್ ಕೇಸುಗಳು ಹೆಚ್ಚಾಗುವ ಭೀತಿ ಎದುರಾಗಿದೆ. ಹೀಗಾಗಿ, ಸಿಎಂ ಯಡಿಯೂರಪ್ಪನವರ ಮುಂದೆ ಬಿಬಿಎಂಪಿ ಕೆಲವು ಬೇಡಿಕೆಗಳನ್ನು ಇಟ್ಟಿದೆ.
ಬೆಂಗಳೂರಿನಲ್ಲಿ ಒಂದುವೇಳೆ ಅನ್ಲಾಕ್ ಘೋಷಣೆ ಮಾಡುವುದಿದ್ದರೆ ಕೆಲವು ಚಟುವಟಿಕೆಗಳ ಮೇಲಿನ ನಿರ್ಬಂಧವನ್ನು ಮುಂದುವರಿಸಿ ಎಂದು ಬಿಬಿಎಂಪಿ ಸಿಎಂಗೆ ವರದಿ ನೀಡಿದೆ. ಅನ್ಲಾಕ್ ನಂತರ ಕೆಲವೇ ಕೆಲವು ವಾಣಿಜ್ಯ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಬೇಕು. ಥಿಯೇಟರ್ ಓಪನ್ ಮಾಡಬಾರದು, ಶೇ.50, ಶೇ.75 ಎಂಬ ಯಾವ ವಿನಾಯಿತಿಯೂ ನೀಡದೆ ಕಂಪ್ಲೀಟ್ ಆಗಿ ಥಿಯೇಟರ್ ಬಂದ್ ಮಾಡಬೇಕು.
ಇನ್ನು ಯಾವುದೇ ಕಾರಣಕ್ಕೂ ಮಾಲ್ ಓಪನ್ ಗೆ ಪರ್ಮಿಷನ್ ಕೊಡಬಾರದು. ಜುಲೈ ಅಂತ್ಯದವರೆಗೂ ಮಾಲ್ ಗಳು ಕ್ಲೋಸ್ ಆಗಬೇಕು. ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಕೇವಲ ಪಾರ್ಸೆಲ್ ಗೆ ಮಾತ್ರ ಅವಕಾಶ ನೀಡಬೇಕು. ಬಾರ್‌ಗಳು ಬೆಳಗ್ಗೆ 10 ಗಂಟೆಯಿಂದ ಸಂಜೆ 6ವರೆಗೂ ಮಾತ್ರ ಓಪನ್ ಇರಬೇಕು, ಅದೂ ಕೇವಲ ಪಾರ್ಸೆಲ್ ಮಾತ್ರ ಇರಬೇಕು. ಜೂನ್ ಅಂತ್ಯದವರೆಗೂ ಡ್ಯಾನ್ಸ್ ಬಾರ್, ಪಬ್ ಗಳು ಬಂದ್ ಇರಬೇಕು ಎಂದು ಬಿಬಿಎಂಪಿ ಮನವಿ ಮಾಡಿದೆ.
ಅಗತ್ಯ ವಸ್ತುಗಳ ಖರೀದಿ ಸಮಯ ಬದಲಾಯಿಸುವುದುವನ್ನು ಬೆಳಗ್ಗೆ 6ರಿಂದ ಸಂಜೆ 4 ಗಂಟೆವರೆಗೆ ವಿಸ್ತರಿಸಬೇಕು. ಜಿಮ್, ಪಾರ್ಕ್, ಈಜುಕೊಳ, ಒಳಾಂಗಣ ಕ್ರೀಡೆಗಳು ಈಗಿನಂತೆಯೇ ಬಂದ್ ಇರಬೇಕು. ಜೂನ್ ಅಂತ್ಯದವರೆಗೂ ಜಿಮ್, ಪಾರ್ಕ್, ಸ್ವಿಮ್ಮಿಂಗ್ ಪೂಲ್ ಗಳು ಕ್ಲೋಸ್ ಆಗಿರಬೇಕು.
ಮದುವೆಗೆ 40 ಜನ, ಅಂತ್ಯಕ್ರಿಯೆಗೆ ಐದು ಜನರ ಬದಲು 10 ಜನರಿಗೆ ಅವಕಾಶ ಕಲ್ಪಿಸಬಹುದು. ಸಭೆ, ಸಮಾರಂಭ, ಪ್ರತಿಭಟನೆಗಳ ನಿರ್ಬಂಧ ಜುಲೈ ಕೊನೆಯವರೆಗೆ ಮುಂದುವರಿಸುವುದು. ಕೆ.ಆರ್ ಮಾರ್ಕೆಟ್, ರಸೆಲ್ ಮಾರ್ಕೆಟ್ , ಮಲ್ಲೇಶ್ವಂ ನಂತಹ ಮಾರ್ಕೆಟ್ ಗಳ ಓಪನ್ ಗೆ ಅನುಮತಿ ಕೊಡಬಾರದು.
ಅಂಗಡಿ ಮುಂಗಟ್ಟುಗಳಿಗೆ ಸಮಯ ನಿಗದಿ ಮಾಡಿ, ತಳ್ಳುಗಾಡಿ ವ್ಯಾಪಾರಕ್ಕೆ ಅನುಮತಿ ಕೊಡಿ. ಜೂನ್ ಅಂತ್ಯದ ವರೆಗೆ ನೈಟ್ ಕರ್ಫ್ಯೂ ಕಡ್ಡಾಯ ಮಾಡಿ. ಆಟೋ, ಓಲಾ, ಉಬರ್, ಬಿಎಂಟಿಸಿ, ಕೆಎಸ್ ಆರ್ ಟಿಸಿ ಬಸ್ ಸಂಚಾರಕ್ಕೆ ಅವಕಾಶ ನೀಡಬಹುದು. ಬಸ್‌ನಲ್ಲಿ 50% ರಷ್ಟು ಮಾತ್ರ ಪ್ರಯಾಣಿಕರು ಸಂಚಾರ ಮಾಡಲು ಅವಕಾಶ ನೀಡಿ.
ಚಿನ್ನದಂಗಡಿ, ಬಟ್ಟೆ ಅಂಗಡಿ, ವಾಣಿಜ್ಯ ಚಟುವಟಿಕೆಗಳಿಗೆ ಮತ್ತಷ್ಟು ದಿನ ಬ್ರೇಕ್ ಹಾಕುವಂತೆ ಮನವಿ ಮಾಡಲಾಗಿದೆ. ಹಾಗೇ, ಸಣ್ಣ ಕೈಗಾರಿಕೆ ಹೊರತು ಪಡಿಸಿ ಉಳಿದೆಲ್ಲಾ ಉದ್ದಿಮೆಗಳ ಮೇಲೆ ನಿರ್ಬಂಧ ಹೇರುವಂತೆ ಬಿಬಿಎಂಪಿ ಮನವಿ ಮಾಡಲಾಗಿದೆ.
ಒಟ್ಟಾರೆ, ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ವಿಸ್ತರಣೆಯಾಗುವ ಸಾಧ್ಯತೆ ಕಡಿಮೆಯಿದ್ದು, ಹಂತಹಂತವಾಗಿ ಅನ್ಲಾಕ್ ಮಾಡುವುದು ಸೂಕ್ತ ಎಂದು ಈಗಾಗಲೇ ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಇಂದೇ ಸಿಎಂ ಯಡಿಯೂರಪ್ಪ ನಿರ್ಧಾರ ತೆಗೆದುಕೊಳ್ಳುವರು ಎಂದು ಹೇಳಲಾಗುತ್ತಿದೆ.