ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯ ಬಿಜೆಪಿಯೊಳಗಿನ ಒಳಜಗಳದಿಂದಾಗಿ ರಾಜ್ಯದ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದು ಅರಾಜಕತೆ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಘನತೆವೆತ್ತ ರಾಜ್ಯಪಾಲರು ತಕ್ಷಣ ಮಧ್ಯೆಪ್ರವೇಶಿಸಿ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಕಳೆದೆರಡು ದಿನಗಳಿಂದ ವಿಧಾನಸೌಧವೇ ಕೆ.ಕೆ. ಗೆಸ್ಟ್‌ಹೌಸ್ ಮತ್ತು ಬಿಜೆಪಿ ಕಚೇರಿಗೆ ಸ್ಥಳಾಂತರಗೊಂಡಂತೆ ಕಾಣುತ್ತಿದೆ. ಕಚೇರಿಯಲ್ಲಿ ಸಚಿವರಿಲ್ಲ, ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿಲ್ಲ. ಕೊರೊನಾ ಇನ್ನೂ ಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ, ಜನರ ಗೋಳನ್ನು ಕೇಳುವವರೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೆ ಹೆಚ್ಚಾಗುತ್ತಿರುವ ಕೋರೊನಾ ಸೋಂಕು/ಸಾವು, ಹಳ್ಳಿಗಳಿಗೂ ಹರಡುತ್ತಿರುವ ಸೋಂಕು, ಕೊರೊನಾ ಮೂರನೇ ಅಲೆ ಬೇಗನೇ ಬರುವ ತಜ್ಞರ ಭವಿಷ್ಯ, ಲಾಕ್‌ಡೌನ್‌ನಿಂದಾಗಿ ಹೆಚ್ಚುತ್ತಿರುವ ನಿರುದ್ಯೋಗ.. ಈ ಸವಾಲುಗಳನ್ನು ಎದುರಿಸಿ ಪರಿಹರಿಸಬೇಕಾದ ಸರ್ಕಾರವೇ ಐಸಿಯುನಲ್ಲಿದೆ ಎಂದು ಸರಣಿ ಟ್ವೀಟ್ ಮೂಲಕ ಕುಟುಕಿದ್ದಾರೆ.
ಸಚಿವರು, ಶಾಸಕರನ್ನು ವಿಶ್ವಾಸಕ್ಕೆ ಪಡೆದು ಒಗ್ಗಟ್ಟಿನಿಂದ ಪ್ರಸಕ್ತ ವೈದ್ಯಕೀಯ ತುರ್ತುಪರಿಸ್ಥಿತಿಯನ್ನು ಎದುರಿಸಿ ಜನತೆಯ ಹಿತಕಾಪಾಡಲು ಮುಂದಾಗಬೇಕಾಗಿದ್ದ ಸಿಎಂ ಶಾಸಕರು-ಸಚಿವರು ಮತ್ತು ಪಕ್ಷದ ಹೈಕಮಾಂಡ್ ನಾಯಕರ ಕೈಕಾಲು ಹಿಡಿದು ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಪರಸ್ಪರ ಕಚ್ಚಾಡುತ್ತಿರುವ ಬಿಜೆಪಿ ರಾಜ್ಯ ನಾಯಕರ ಕಿವಿಹಿಂಡಿ ಬುದ್ದಿ ಹೇಳಬೇಕಾದ ಹೈಕಮಾಂಡ್ ತೆರೆಮರೆಯಲ್ಲಿ ರಾಜ್ಯದ ನಾಯಕರನ್ನು ಪರಸ್ಪರ ಎತ್ತಿಕಟ್ಟಿ ಕಳ್ಳಾಟ ಆಡುತ್ತಿದೆ. ಬಿಜೆಪಿ ಹೈಕಮಾಂಡ್‌ಗೆ ಬೇಕಾಗಿರುವುದು ಸರ್ಕಾರದ ಸುಭದ್ರತೆಯೇ? ಮುಖ್ಯಮಂತ್ರಿಗಳ ಅಭದ್ರತೆಯೇ? ಬೇಗ ನಿರ್ಧಾರ ಮಾಡಿಬಿಡಿ ಎಂದು ಕೆಣಕಿದ್ದಾರೆ.
ಇನ್ನು ನಗೆಪಾಟಲಿಗೀಡಾಗಿರುವ ಬಿಜೆಪಿ ಭಿನ್ನಮತವನ್ನು ನಿಯಂತ್ರಿಸಲಿಕ್ಕಾಗದ ಮೋದಿ ಅವರು ತಾವೊಬ್ಬ ದುರ್ಬಲ ನಾಯಕನೆಂದು ಸಾಬೀತುಪಡಿಸಿದ್ದಾರೆ. 56 ಇಂಚಿನ ಎದೆಯವನು ಎಂದು ಕೊಚ್ಚಿಕೊಳ್ಳುತ್ತಿರುವ ಮೋದಿಯವರು ಈಗಿನ ತನ್ನ ಎದೆ ಸುತ್ತಳತೆ ಎಷ್ಟಿದೆ ಎನ್ನುವುದನ್ನಾದರೂ ಸ್ಪಷ್ಟಪಡಿಸಲಿ ಎಂದು ಕಾಲೆಳೆದಿದ್ದಾರೆ.