ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿರುವ ಆಮ್ ಆದ್ಮಿ ಪಾರ್ಟಿಯು ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಕಚೇರಿ, ಬೆಳ್ಳಂದೂರು ವಾರ್ಡ್ ಕಚೇರಿ ಹಾಗೂ ತಾವರೆಕೆರೆ ಜಿಲ್ಲಾ ಪಂಚಾಯಿತಿ ಕಚೇರಿಯನ್ನು ಭಾನುವಾರ ತೆರೆದಿದೆ.
ಮೂರು ಕಚೇರಿಗಳ ಉದ್ಘಾಟನೆ ಮಾಡಿ ಮಾತನಾಡಿದ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿಯವರು, “ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾದರೂ ನಿಜವಾದ ಸ್ವಾತಂತ್ರ್ಯ ನಮಗಿನ್ನೂ ಸಿಕ್ಕಿಲ್ಲ. ಭ್ರಷ್ಟ ವ್ಯವಸ್ಥೆ ಹಾಗೂ ಭ್ರಷ್ಟ ರಾಜಕಾರಣಿಗಳು ಅಂತ್ಯವಾದಾಗ ಮಾತ್ರ ನಿಜವಾದ ಸ್ವಾತಂತ್ರ್ಯ ಸಿಕ್ಕಂತಾಗುತ್ತದೆ ಎಂದರು.
ಇನ್ನು ಪ್ರತಿಯೊಂದು ಮಗುವಿಗೂ ಉತ್ತಮ ಶಿಕ್ಷಣ, ಪ್ರತಿಯೊಬ್ಬ ನಾಗರಿಕನಿಗೂ ಉತ್ತಮ ಆರೋಗ್ಯ ಸೇವೆ ಮತ್ತು ಎಲ್ಲರಿಗೂ ಗೌರವಪೂರ್ವಕ ಬದುಕು ದೊರೆತಾಗ ಮಾತ್ರ ಸ್ವಾತಂತ್ರ್ಯ ಸಿಕ್ಕಿರುವುದು ಸಾರ್ಥಕವಾಗುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಜಿ ಶಾಸಕರು ಹಾಗೂ ಹಿರಿಯ ಮುಖಂಡರಾದ ಎಚ್.ಡಿ.ಬಸವರಾಜು ಮಾತನಾಡಿ, ದೇಶದಲ್ಲಿ ಮೂರರಿಂದ 22 ವರ್ಷ ವಯಸ್ಸಿನವರು 50 ಕೋಟಿ ಜನರಿದ್ದಾರೆ. ಅವರಲ್ಲಿ ಶೇ. 30% ಮಕ್ಕಳು ಶಿಕ್ಷಣದಿಂದ ದೂರ ಉಳಿದಿದ್ದಾರೆ. ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್‌ರವರೇ ಈ ವಿಚಾರವನ್ನು ಲೋಕಸಭೆಯಲ್ಲಿ ಒಪ್ಪಿಕೊಂಡಿದ್ದಾರೆ.
ಇದೊಂದು ಗಂಭೀರ ಸಮಸ್ಯೆಯಾಗಿದ್ದು, ಮಕ್ಕಳನ್ನು ಶಿಕ್ಷಣದತ್ತ ಆಕರ್ಷಿಸಲು ಸರ್ಕಾರ ಯೋಜನೆಯನ್ನು ರೂಪಿಸಬೇಕಾದ ತುರ್ತು ಅಗತ್ಯವಿದೆ. ಶಿಕ್ಷಣವಿಲ್ಲದಿದ್ದರೆ ಸ್ವಾತಂತ್ರ್ಯದ ಸದುಪಯೋಗ ಸಾಧ್ಯವಿಲ್ಲ ಎಂದು ಹೇಳಿದರು.
ಬೆಂಗಳೂರು ನಗರದ ಎಎಪಿ ಅಧ್ಯಕ್ಷ ಮೋಹನ್ ದಾಸರಿಯವರು, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆಡಳಿತ ವೈಖರಿ, ಪಕ್ಷದ ಜನಪರ ಸಿದ್ಧಾಂತ ಹಾಗೂ ಕಾರ್ಯಕರ್ತರ ಶ್ರಮದಿಂದಾಗಿ ಪಕ್ಷ ಬೆಳೆಯುತ್ತಿದೆ.
ಕೆ.ಆರ್.ಪುರ, ಬೆಳ್ಳಂದೂರು ಹಾಗೂ ತಾವರೆಕೆರೆಯಲ್ಲಿ ಇಂದು ಲೋಕಾರ್ಪಣೆಗೊಂಡ ಕಚೇರಿಗಳು ಪಕ್ಷದ ಸಂಘಟನೆಯಲ್ಲಿ ಮಹತ್ವದ ಪಾತ್ರ ವಹಿಸುವ ದೃಢ ವಿಶ್ವಾಸವಿದೆ. ಪಕ್ಷ ಹಾಗೂ ಕಾರ್ಯಕರ್ತರ ನಡುವಿನ ಸೇತುವೆಯಂತೆ ಕಚೇರಿಗಳು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ, ರಾಜ್ಯ ಸಹ ಸಂಚಾಲಕಿ ಶಾಂತಲಾ ದಾಮ್ಲೆ, ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಡಾ. ಕೇಶವ್ ಕುಮಾರ್, ಯಶವಂತಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಡಾ. ಸತೀಶ್ ಕುಮಾರ್, ಯಶವಂತಪುರ ಕ್ಷೇತ್ರ ಉಪಾಧ್ಯಕ್ಷ ಶಶಿಧರ್ ಸಿ. ಆರಾಧ್ಯ, ಮಹದೇವಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಶೋಕ್ ಮೃತ್ಯುಂಜಯ.
ಮುಖಂಡರಾದ ಜೋತಿಶ್ ಕುಮಾರ್, ಬಿ.ಟಿ.ನಾಗಣ್ಣ, ಲಕ್ಷ್ಮೀಕಾಂತ್ ರಾವ್, ಸುರೇಶ್ ರಾಥೋಡ್, ಎಸ್.ವಿ.ಫಣಿರಾಜ್, ದಿವ್ಯಶ್ರೀ ಕೆ.ಎಸ್., ಬೆಳ್ಳಂದೂರು ಜಗದೀಶ್, ವೀಣಾ ಎನ್, ಬೆಳ್ಳಂದೂರು ಸತೀಶ್, ಜೆ.ಸಿ.ಪ್ರಕಾಶ, ಎ.ವಿ.ಶಾಮ ರಾವ್, ಪ್ರೀತಮ್ ಡಿ.ಎಚ್, ಶಿವರಾಮನ್, ಸಯ್ಯದ್ ಜಮೀರ್ ಅಹ್ಮದ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.