ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕಲ್ಲುಕ್ವಾರಿ ಹಾಗೂ ಗಣಿಗಾರಿಕೆ ಪ್ರದೇಶದಲ್ಲಿ ಕಾನೂನುಬಾಹಿರವಾಗಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿದ್ದರೆ ಮೂರು ದಿನದೊಳಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಂತಿರುಗಿಸಬೇಕೆಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು 3ದಿನದಲ್ಲಿ ಹಿಂತಿರುಗಿಸದಿದ್ದರೆ ಕಾನೂನು ಕ್ರಮ ಖಚಿತ. ನಮ್ಮ ಇಲಾಖೆ ಅಧಿಕಾರಿಗಳು ಎಲ್ಲ ಕಡೆ ತಪಾಸಣೆ ನಡೆಸಲಿದ್ದಾರೆ. ಹಾಗೊಂದು ವೇಳೆ ಯಾರಾದರೂ ಸಂಗ್ರಹಿಸಿ ಇಟ್ಟುಕೊಂಡಿರುವುದು ಕಂಡುಬಂದರೆ ಮಾಲೀಕರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕಳೆದ ಒದು ತಿಂಗಳು (ಜನವರಿ 21) ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದಲ್ಲಿ ಜಿಲೆಟಿನ್‌ನಿಂದಾದ ಭಾರೀ ಸ್ಫೋಟ ಸಂಭವಸಿದ್ದ ದುರ್ಘಟನೆಯಿಂದ 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು.
ಇನ್ನು ಈ ಘಟನೆ ಮಾಸುವ ಮುನ್ನವೇ ಅಂದರೆ ಫೆಬ್ರವರಿ 22ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇನಾಗವಲ್ಲಿ ಬಳಿ ಸಂಭವಿಸಿದ್ದ ಜಿಲೆಟಿನ್ ಸ್ಫೋಟದಲ್ಲಿ ಆರು ಮಂದಿ ಮೃತಪಟ್ಟಿದ್ದರು.
ಹಿರೇನಾಗವಲ್ಲಿ ಗ್ರಾಮದ ಬಳಿ ಜಿಲೆಟಿನ್ ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಅವಘಡ ಸಂಭವಿಸಿತ್ತು. ಸ್ಥಳದಲ್ಲೇ ಆರು ಮಂದಿ ಮೃತಪಟ್ಟಿದ್ದರು. ಸ್ಫೋಟದ ತೀವ್ರತೆಯಲ್ಲಿ ಕಾರ್ಮಿಕರ ಶವಗಳು ಗುರುತು ಸಿಗಲಾರದಷ್ಟು ಛಿದ್ರವಾಗಿ ಹೋಗಿದ್ದವು. ಇನ್ನು ಈ ದುರಂತದಿಂದ ಮೂವರ ಸ್ಥಿತಿ ಗಂಭೀರವಾಗಿತ್ತು.
ಇದರಿಂದ ಎಚ್ಚೆತ್ತು ಕೊಂಡಿರುವ ಸರ್ಕಾರ ಈ ಬಗ್ಗೆ ತೀವ್ರ ನಿಗಾವಹಿಸುತ್ತಿದ್ದು, ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿದ್ದರೆ ವಾಪಸ್ ನೀಡುವಂತೆ ಗಣಿ ಮಾಲೀಕರಿಗೆ ಎಚ್ಚರಿಕೆಯ ಸಂದೇಶ ನೀಡಿದೆ.