ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಬಸವಳಿದಿರುವ ಭಾರತೀಯ ಅರ್ಥವ್ಯವಸ್ಥೆಯ ಪುನಶ್ಚೇತನಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಸಂಜೀವಿನಿಯಂತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.
ಬಜೆಟ್ ಕುರಿತು ಮಾತನಾಡಿದ ಅವರು, ಕೊರೊನಾ ಸಾಂಕ್ರಾಮಿಕದಿಂದ ಸ್ಥಗಿತಗೊಂಡ ಅರ್ಥವ್ಯವಸ್ಥೆ ಮತ್ತೆ ಮೇಲೆರಲು ವೇಗವರ್ಧಕವಾಗಿದೆ. ಕೋವಿಡ್ ಸಂಕಷ್ಟದ ನಡುವೆ ಮಂಡನೆಯಾಗಿರುವ ಈ ಬಜೆಟ್ ಉತ್ತಮವಾಗಿದೆ ಎಂದು ತಿಳಿಸಿದರು.
ಕೋವಿಡ್ ಲಸಿಕೆ ಅಭಿಯಾನಕ್ಕೆ 35,000 ಕೋಟಿ ರೂ, ಕೃಷಿ ಬಲವರ್ಧನೆ, ಅನ್ನದಾತ ರೈತರ ಅಭಿವೃದ್ಧಿಗೆ ಪ್ರಾಮುಖ್ಯತೆ, ಕೌಶಲ್ಯ ಹಾಗೂ ಮೂಲಸೌಕರ್ಯಾಭಿವೃದ್ಧಿ, ಕೈಗಾರಿಕಾ ಬೆಳವಣಿಗೆಗೆ ಬಜೆಟ್‍ನಲ್ಲಿ ವಿಶೇಷಗಮನ ನೀಡಲಾಗಿರುವುದು ಸ್ವಾಗತಾರ್ಹ. ದೇಶದ ಬೆಳವಣಿಗೆಗೆ ನೆರವಾಗುವ ಬಜೆಟ್ ಇದಾಗಿದ್ದು, ಅರ್ಥವ್ಯವಸ್ಥೆ ಪುನರ್ವರ್ಧನೆಗೆ ಸಹಕಾರಿಯಾಗಲಿದೆ ಎಂದರು.
ಸ್ವಾವಲಂಬಿ ಭಾರತ ನಿರ್ಮಾಣದ ನಿಟ್ಟಿನಲ್ಲಿ ಬಜೆಟ್ ನಲ್ಲಿ 13 ವಲಯಗಳಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಿರುವುದು, ಸ್ವಚ್ಛ ಅಭಿಯಾನಕ್ಕೆ 1.41 ಲಕ್ಷ ಕೋಟಿ ರೂ. ಅನುದಾನ ಒದಗಿಸಿರುವುದನ್ನು ಸ್ವಾಗತಿಸುತ್ತೇನೆ. ಪ್ರಸಕ್ತ ಬಜೆಟ್ ಅರ್ಥವ್ಯವಸ್ಥೆಯ ಪುನಶ್ಚೇತನದೊಂದಿಗೆ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಶಕ್ತಿ ತುಂಬುವ ಸಾಮರ್ಥ್ಯ ಪ್ರದರ್ಶಿಸಿದೆ ಎಂದು ಹೇಳಿದರು.
ಆತ್ಮ ಬರ್ಬಾದ್ ಬಜೆಟ್ ಎಂದ ಸಿದ್ದರಾಮಯ್ಯ
ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಬಜೆಟ್ ಕುರಿತು ವ್ಯಂಗ್ಯ ವಾಡಿದ್ದು, ಇದು ಯಾವುದೇ ಚೇತರಿಕೆ , ಅಭಿವೃದ್ಧಿಗೆ ಪೂರಕವಲ್ಲದ ಬಜೆಟ್ . ಇದೊಂದು ಆತ್ಮ ಬರ್ಬಾದ್ ಬಜೆಟ್ ಎಂದು ಟೀಕಿಸಿದ್ದಾರೆ.
ಕಲಾಪದ ಬಳಿಕ ಕಲಾಪದ ಬಳಿಕ ಪ್ರತಿಕ್ರಿಯಿಸಿದ ಅವರು, ಈ ಮೊದಲು ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆ ಇಲ್ಲ ಎಂದಿದ್ದೆ. ನಾನು ಹೇಳಿದ ಮಾತು ಸತ್ಯವಾಗಿದೆ. ಅದರಂತೆಯೇ ಬಜೆಟ್ ಮಂಡಿಸಿದ್ದಾರೆ. ಆತ್ಮನಿರ್ಭರದ ಮೂರು ಪ್ಯಾಕೇಜ್ ಘೋಷಿಸಿದ್ದಾರೆ. ಆದರೆ, ಅವರು ಆತ್ಮ ಬರ್ಬಾದ್ ಬಜೆಟ್ ಕೊಟ್ಟಿದ್ದಾರೆ ಎಂದರು.\
ಇನ್ನು ಆರ್ಥಿಕತಜ್ಞರು ಕೊಟ್ಟ ಸಲಹೆ ಗಾಳಿಗೆ ತೂರಿದ್ದಾರೆ. ಈ ಬಾರಿ ಕೃಷಿ ಸೆಸ್ ಅಂತ ಹೊಸದಾಗಿ ಮಾಡಿದ್ದಾರೆ. ದೇಶಕ್ಕೆ ಬರುವ ಆಮದು ಡ್ಯೂಟಿ ಕಡಿಮೆ ಮಾಡಿದ್ದಾರೆ. ಕೃಷಿ ಸೆಸ್ ಎಲ್ಲರ ಮೇಲೆ ಹೇರಿದ್ದಾರೆ. ಕೃಷಿ ಉತ್ತೇಜನಕ್ಕೆ ಅಂತ ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಕುಟುಕಿದರು.
ವಿದ್ಯುತ್ ಕ್ಷೇತ್ರ ಖಾಸಗಿಕರಣ ಮಾಡಿದ್ದಾರೆ. ವಿಮಾ ಕ್ಷೇತ್ರದಲ್ಲೂ ಖಾಸಗಿಕರಣಕ್ಕೆ ಕೊಟ್ಟಿದ್ದಾರೆ. ಖಾಸಗಿಯವರು ಕಡಿಮೆ ದರಕ್ಕೆ ವಿದ್ಯುತ್ ಕೊಡ್ತಾರಾ? ಇದರಿಂದ ದರಗಳು ಹೆಚ್ಚಾಗುತ್ತದೆ. ಸಾಮಾನ್ಯ ಜನರ ವಿದ್ಯುತ್ ಬಳಕೆ ದರವೂ ಹೆಚ್ಚುತ್ತದೆ ಎಂದರು.
ಕೋವಿಡ್ ನಿಂದ ಆರ್ಥಿಕ ಸ್ಥಿತಿ ಅದೋಗತಿಗೆ ಹೋಗಿತ್ತು. ಅದನ್ನ ಚೇತರಿಕೆ ಮಾಡುತ್ತಾರೆಂದು ಕೊಂಡಿದ್ದೇವು, ಆದರೆ, ಆ ರೀತಿಯ ಯಾವ ನಿರೀಕ್ಷೆಯೂ ಈಡೇರಿಸಿಲ್ಲ. ಸಣ್ಣ, ಮಧ್ಯಮ ಕೈಗಾರಿಕಾ ಪುನಶ್ಚೇತನವೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.