ಬನ್ನೂರು (ಮೈಸೂರು ಜಿಲ್ಲೆ): ಬನ್ನೂರಿನಲ್ಲಿ ಎರಡು ಚಿರತೆಗಳು ಪ್ರತ್ಯಕ್ಷವಾಗಿ ಒಂದು ನಾಯಿಯನ್ನು ಹೊತ್ತೊಯ್ದದ ಘಟನೆ ಜರುಗಿದ್ದು ಜನರಲ್ಲಿ ಆತಂಕ ಉಂಟಾಗಿದೆ.
ಪಟ್ಟಣ ರತ್ನಮಹಲ್ ಥಿಯೇಟರ್ ಹಿಂಬಾಗದಲ್ಲಿ ಶುಕ್ರವಾರ ರಾತ್ರಿ ನಾಯಿಯನ್ನು ಕಚ್ಚಿಕೊಂಡು ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದಕ್ಕೂ ಮೊದಲು ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಚಿರತೆಗಳನ್ನು ನೋಡಿದ ರೈತರು ಗಾಬರಿಗೊಂಡಿದ್ದರು. ನಂತರ ಬನ್ನೂರಿನ ಪಟ್ಟಣಕ್ಕೂ ಅವು ಬಂದಿವೆ ಎಂದು ಪೊಲೀಸರು ಜನರಲ್ಲಿ ಅರಿವು ಮೂಡಿಸಿದರು.
ನಂತರ ಈ ವಿಷಯವನ್ನು ಬನ್ನೂರು ಠಾಣೆ ಪೊಲೀಸರು ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಈ ನಡುವೆ ಅಕ್ಕಪಕ್ಕದ ಗ್ರಾಮಗಳಲ್ಲೂ ಚಿರತೆ ಬಂದಿರುವ ಬಗ್ಗೆ ಲೌಡ್ ಸ್ಪೀಕರ್ ಹಾಕಿಕೊಂಡು ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡುತ್ತಿದ್ದಾರೆ.
ಚಿರತೆಗಳು ಬನ್ನೂರಿನ ಒಳಗಡೆ ಬಂದಿರುವುದನ್ನು ಸಿಸಿ ಕ್ಯಾಮೆರಾದ ಮೂಲಕ ನೋಡಿ ಗಾಬರಿಗೊಂಡಿರುವ ಜನತೆ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯ ಪ್ರವೃತ್ತರಾಗಿದ್ದಾರೆ.