ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಹೋಂ ಮಿನಿಸ್ಟರ್ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೇಟ್ ನೀಡಿದೆ. ಈ ಮೂಲಕ ಬೆಳ್ಳಿಪರದೆಯ ಮೇಲೆ ಮಿಂಚಲು ರೆಡಿಯಾಗಿದೆ.
ಸುಜಯ್ ಕೆ. ಶ್ರೀಹರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಈ ಸಿನಿಮಾ ಎರಡು ವರ್ಷಗಳ ಹಿಂದೆಯೇ ಸೆಟ್ಟೇರಿತ್ತು ಆದರೆ ಕೊರೊನಾ ಸೋಂಕಿನಿಂದ ಉಂಟಾದ ಲಾಕ್‌ಡೌನ್‌ನಿಂದ ತೆರೆಯಮೇಲೆ ಬರುವುದಕ್ಕೆ ಸಾಧ್ಯವಾಗಲಿಲ್ಲ. ಇನ್ನು ಉಪೇಂದ್ರ ಅವರಿಗೆ ನಾಯಕಿಯಾಗಿ ವೇದಿಕಾ ಕುಮಾರ್ ನಟಿಸುವ ಮೂಲಕ ತೆರೆಯನ್ನು ಹಂಚಿಕೊಂಡಿದ್ದಾರೆ.
ಇದು ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು, ಇದರ ಟೈಟಲ್ ನೋಡಿದರೆ ಐ ಮೀನ್ ಮಿನಿಸ್ಟರ್ ಎಂದರೆ ರಾಜಕಾರಣಕ್ಕೆ ಸಂಬಂಧಿಸಿದ ಕಥೆಯ ಚಿತ್ರವಿರಬಹುದೇ ಎನ್ನುವ ಕುತೂಹಲ ಸಿನಿಪ್ರಿಯರಲ್ಲಿ ಹೆಚ್ಚಾಗುವಂತೆ ಮಾಡಿದೆ. ಜತೆಗೆ ಇದೊಂದು ಕೌಟುಂಬಿಕ ಮತ್ತು ಥ್ರಿಲ್ಲರ್ ಕಥೆಯ ಸಿನಿಮಾ ಆಗಿದೆ ಎಂದು ಹೇಳಲಾಗಿದೆ.
ಅದ್ಧೂರಿ ತಾರಾಬಳಗವಿರುವ ಈ ಚಿತ್ರದ ಚಿತ್ರೀಕರಣ ರಾಜ್ಯದ ರಾಜಧಾನಿ ಬೆಂಗಳೂರು, ಮಲೇಷಿಯಾದಲ್ಲಿ ನಡೆದಿದೆ. ಇನ್ನು ಚಿತ್ರಮಂದಿರಗಳ ಬಾಗಿಲು ತೆರೆಯಲು ಸರ್ಕಾರ ಅನುಮತಿ ನೀಡಿದ ತಕ್ಷಣ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದ್ದು, ಶೀಘ್ರದಲ್ಲೇ ನಿಮ್ಮನ್ನು ರಂಜಿಸಲಿದೆ.
ಶ್ರೇಯಸ್ ಚಿತ್ರ ಹಾಗೂ ವಾಟರ್ ಕಲರ್ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ಪೂರ್ಣಚಂದ್ರ ನಾಯ್ಡು ಹಾಗೂ ಶ್ರೀಕಾಂತ್ ವಿ. ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಕುಂಜಮಣಿ ಛಾಯಾಗ್ರಹಣ ಜಿಬ್ರಾನ್ ಸಂಗೀತ ನಿರ್ದೇಶನ ಆಂತೋಣಿ ಅವರ ಸಂಕಲನ ಈ ಚಿತ್ರಕ್ಕಿದ್ದು, ತಾನ್ಯಾ ಹೋಪ್, ಶ್ರೀನಿವಾಸ ಮೂರ್ತಿ, ಅವಿನಾಶ್, ಮಾಳವಿಕಾ ಅವಿನಾಶ್, ಸುಮನ್ ರಂಗನಾಥ್, ಸಾಧುಕೋಕಿಲ, ತಿಲಕ್, ಅಭಿಮನ್ಯು ಸಿಂಗ್, ವಿಜಯ್ ಚೆಂಡೂರ್, ಚಿದಾನಂದ್, ಬೇಬಿ ಆದ್ಯಾ ತಾರಾಬಳಗದಲ್ಲಿದ್ದು, ಸಿನಿ ಪ್ರಿಯರನ್ನು ರಂಜಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.