- ಇದೇ ಜೂನ್ 20ರಂದು ಅಮಾನತು ಮಾಡಿ ಆದೇಶ ಮಾಡಿದ ಡಿಸಿ ನಡೆಗೆ ನೌಕರರು ಕಿಡಿ
ಬಾಗಲಕೋಟೆ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಾಗಲಕೋಟೆ ವಿಭಾಗದ ಇಳಕಲ್ ಘಟಕದ ಗರ್ಭಿಣಿ ನಿರ್ವಾಹಕರೊಬ್ಬರು ಪರಿಪರಿಯಾಗಿ ಬೇಡಿಕೊಂಡರು ಲೈಟ್ ಡ್ಯೂಟಿ ಕೊಡದೆ ಅಧಿಕಾರಿಗಳು ಬೇಜವಾಬ್ದಾರಿಯಿಂದ ನಡೆದುಕೊಂಡ ಪರಿಣಾಮ ಆಕೆಗೆ ಗರ್ಭಪಾತ (Abortion) ಆಗಿ ನರಕ ಯಾತನೆ ಅನುಭವಿಸಿದ್ದಾರೆ.
ಇದು 11-11-2023ರಲ್ಲಿ ಘಟನೆ ನಡೆದಿದ್ದು, ಈಗ ಆಕೆಯನ್ನು ಜೂನ್ 20ರಂದು ಅಮಾನತು ಮಾಡಿ ಡಿಸಿ ಆದೇಶ ಹೊರಡಿಸಿದ್ದಾರೆ. ಹೀಗೆ ಇಳಕಲ್ ಘಟಕದಲ್ಲಿ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರೇಖಾ ಎಸ್.ಶ್ಯಾವಿ ಎಂಬುವರೆ ಈ ನರಕಯಾತನೆ ಅನುಭವಿಸುತ್ತಿರುವ ಸಂಸ್ಥೆಯ ಮಹಿಳಾ ಸಿಬ್ಬಂದಿ. ಈಕೆ ಗರ್ಭಪಾತವಾಗಿ ಆಸ್ಪತ್ರೆಯಲ್ಲಿ ನರಳುತ್ತಾ ಮತ್ತೊಂದೆಡೆ ಗರ್ಭದಲ್ಲಿದ್ದ 4 ತಿಂಗಳ ಮಗು ಕಳೆದುಕೊಂಡ ನೋವು, ದುಃಖದಲ್ಲಿದ್ದ ಈಕೆಗೆ ಘಟಕದ ಅಧಿಕಾರಿಗಳು ಡ್ಯೂಟಿಗೆ ಬರದೆ ಎಲ್ಲಿ ಸಾಯುತ್ತಿದ್ದೀಯ ಎಂದು ನಿಂದಿಸುವ ಮೂಲಕ ಕಟುವಾಗಿ ನಡೆದುಕೊಂಡಿದ್ದಾರೆ.
ಇಂಥ ಅಧಿಕಾರಿಗಳಿಗೆ ಏನು ಹೇಳಬೇಕು. ಇವರ ಮನೆ ಮಗಳಿಗೆ ಈ ರೀತಿ ಆಗಿದ್ದರೆ ಇವರು ಇದೇ ಮಾತನ್ನು ಹೇಳುತ್ತಿದ್ದರೆ? ಹೀಗೆ ಮನಷ್ಯತ್ವವೇ ಇಲ್ಲದ ರೀತಿ ನಡೆದುಕೊಳ್ಳುವುದು ಇಡೀ ಮಾನವ ಕುಲಕ್ಕೆ ಮಾಡಿದ ಅದರಲ್ಲೂ ಮಹಿಳೆಯರಿಗೆ ಮಾಡಿದ ಅವಮಾನವಲ್ಲವೇ?
ವೈದ್ಯರೆ ಆಕೆಗೆ ಕನಿಷ್ಠ 45 ದಿನಗಳಾದರೂ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ವೈದ್ಯ ಪ್ರಮಾಣಪತ್ರವನ್ನು ನೀಡಿ ಕಳುಹಿಸಿದ್ದಾರೆ. ಆದರೆ ಆ ಪ್ರಮಾಣ ಪತ್ರವನ್ನು ತೆಗದುಕೊಳ್ಳದೆ ಡಿಪೋ ವ್ಯವಸ್ಥಾಪಕ ಬಿ.ಎಸ್.ಬಿರಾದಾರ್ ಅವರು ಟಿಐ ಬಸವರಾಜು ಅಮ್ಲತಿಗೌಡ ಎಂಬುವರ ಬಳಿ ಕಳುಹಿಸಿದ್ದಾರೆ.
ಇನ್ನು ಬಸವರಾಜು ಅಮ್ಲತಿಗೌಡ ಘಟಕದ ಗುಮಾಸ್ತ ಮಲ್ಲಪ್ಪ ಹೈಲಿ ಎಂಬುವರ ಬಳಿ ಕಳುಹಿಸಿದ್ದಾರೆ. ಹೀಗೆ ಒಬ್ಬೊಬ್ಬರು ಒಂದು ಕಡೆ ಹೇಳಿ ಕಳುಹಿಸಿದ್ದಾರೆ. ಆದರೂ ಇವರೆಲ್ಲ ಹೇಳಿದಂತೆ ಪಾಪ ಗರ್ಭಪಾತದಿಂದ ಬಳಲುತ್ತಿದ್ದ ಆಕೆ ಒಬ್ಬರಾದ ಮೇಲೆ ಮತ್ತೊಬ್ಬರ ಬಳಿಗೆ ಅಲೆದಿದ್ದಾರೆ. ಆದರೂ ಆಕೆಗೆ ರಜೆ ಮಂಜೂರು ಮಾಡಲೇ ಇಲ್ಲ.
ಆ ಬಳಿಕ ಆಕೆಯೆ ಬಾಗಲಕೋಟೆಯಲ್ಲಿರುವ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ನಿತೀನ್ ಹೆಗಡೆ ಅವರ ಬಳಿ ಹೋಗಿದ್ದಾರೆ. ಆದರೆ ಈ ಮನುಷ್ಯ ಕೂಡ ಆಕೆಗೆ ನ್ಯಾಯದೊರಕಿಸಿಕೊಡಲಿಲ್ಲ. ಇದರಿಂದ ನೊಂದ ಆಕೆ ಬೇರೆ ದಾರಿ ಕಾಣದೆ ಶಾಸಕರ ಬಳಿ ಹೋಗಿದ್ದಾರೆ. ಅವರ ಬಳಿ ನಡೆದ ವಿಷಯವನ್ನು ಹೇಳಿಕೊಂಡಿದ್ದಾರೆ. ಕೂಡಲೇ ಶಾಸಕರು ಡಿಸಿಗೆ ಎಲ್ಲವನ್ನು ಅಂಗೀಕರಿಸಿ ವೇತನ ಕೊಡುವಂತೆ ತಾಕೀತು ಮಾಡಿದ್ದಾರೆ.
ಆ ಬಳಿಕ ಆಕೆಗೆ ವೇತನವನ್ನು ಕೊಟ್ಟಿದ್ದಾರೆ. ಆದರೆ ರೇಖಾ ಅವರ EL CL CML ಈ ಎಲ್ಲವನ್ನು ಝೀರೋ (೦) ಮಾಡಿದ್ದಾರೆ. ಇನ್ನು ಇಷ್ಟಾದ ಬಳಿಕವೂ ಪರವಾಗಿಲ್ಲ ಎಂದು ಎಲ್ಲವನ್ನು ಸಹಿಸಿಕೊಂಡು ಡ್ಯೂಟಿಗೆ ಬಂದ ಆಕೆಗೆ ಸರಿಯಾಗಿ ಡ್ಯೂಟಿ ಕೊಡದೆ ಒಂದು ವೇಳೆ ಡ್ಯೂಟಿ ಕೊಟ್ಟರು ಚಾಲಕರನ್ನು ಹಾಕದೆ ಡಿಪೋನಲ್ಲೇ ಕಾಯುವಂತೆ ಮಾಡಿ ಬಳಿಕ ಯಾರು ಚಾಲಕರಿಲ್ಲ ಎಂದು ಸಬೂಬು ಹೇಳಿ ರಜೆ ಕೊಟ್ಟುಹೋಗಿ ಎಂದು ಕಿರುಕುಳ ನೀಡಿದ್ದಾರೆ.
ಇತ್ತ ರಜೆ ಹಾಕುವುದಕ್ಕೂ ಇವರ ಬಳಿ EL CL CML ಯಾವುದು ಇಲ್ಲದ ಕಾರಣ ಗೈರುಹಾಜರಿ ತೋರಿಸಿ ವೇತನ ಕಡಿತ ಮಾಡಿದ್ದಾರೆ. ಅಲ್ಲದೆ ರೇಖಾ ಅವರಿಗೆ ಕೊಡುವ ರೂಟ್‌ಗೆ ಚಾಲಕರು ಬಂದರೆ ಆ ಚಾಲಕರಿಗೆ ನೀವು ಈಕೆ ಜತೆ ಡ್ಯೂಟಿ ಮಾಡಬೇಡಿ ಈಕೆ ಸರಿಯಿಲ್ಲ ಎಂದು ಚಾಲಕರನ್ನು ಭಯಪಡಿಸಿ ಅವರಿಂದ ರಜೆ ಪಡೆದು ಮನೆಗೆ ಕಳುಹಿಸಿದ್ದಾರೆ.
ರೇಖಾ ಅವರಿಗೆ ಬಾಗಲಕೋಟೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನಿತೀನ್ ಹೆಗಡೆ, ಇಳಕಲ್ ಘಟಕದ ಡಿಎಂ ಬಿ.ಎಸ್.ಬಿರಾದಾರ್, ಟಿಐ ಬಸವರಾಜು ಅಮ್ಲತಿಗೌಡ, ಗುಮಾಸ್ತ ಮಲ್ಲಪ್ಪ ಹೈಲಿ ಮತ್ತು ಭದ್ರತಾ ಸಿಬ್ಬಂದಿ ಮಲ್ಲಮ್ಮ ಅಂಗಡಿ ಹಾಗೂ ಕುಶಲಕರ್ಮಿ ಜಿ.ಎಸ್.ಬಡಿಗೇರ್ ಇವರೆಲ್ಲ ಸೇರಿಕೊಂಡು ಕಿರುಕುಳದ ಮೇಲೆ ಕಿರುಕುಳ ನೀಡಿದ್ದಾರೆ.
ಇನ್ನು ಈ ಕುಶಲಕರ್ಮಿ ಜಿ.ಎಸ್.ಬಡಿಗೇರ್ ಚಾಲಕರಿಗೆ ಡ್ಯೂಟಿ ಕೊಟ್ಟು ಆಕೆಯ ಜತೆ ಡ್ಯೂಟಿ ಮಾಡಬೇಡ ಎಂದು ಹೇಳುವುದು, ಇನ್ನು ಭದ್ರತಾ ಸಿಬ್ಬಂದಿ ಮಲ್ಲಮ್ಮ ಅಂಗಡಿ ರೇಖಾ ಡಿಪೋಗೆ ಬರುತ್ತಿದ್ದಂತೆ ಏನಾದರೊಂದು ಕಿರಿಕು ತೆಗೆದು ಆಕೆಗೆ ಕೋಪ ಬರುವಂತೆ ಮಾಡಿ ಅದನ್ನು ವಿಡಿಯೋ ಮಾಡುವ ಮೂಲಕ ಕಿರಿಕಿರಿ ಮಾಡುವುದು ಮಾಡಿದ್ದಾರೆ.
ಇಷ್ಟೆಲ್ಲ ನೋವು ಅನುಭವಿಸಿರುವ ರೇಖಾ ಎಸ್. ಶ್ಯಾವಿ ಈ ಸಂಬಂಧ ನಿಗಮದ ವ್ಯವಸ್ಥಾಪ ನಿರ್ದೇಶಕರಾದ ಪ್ರಯಾಂಗಾ ಅವರನ್ನು ಭೇಟಿ ಮಾಡಿ ಎಲ್ಲವನ್ನು ವಿವರಿಸಿ ಮನವಿ ಮಾಡಿದ್ದಾರೆ. ಅಲ್ಲದೆ ಬೆಂಗಳೂರು ಕೇಂದ್ರ ಕಚೇರಿಯ ಅಧಿಕಾರಿಗಳು ಸೇರಿದಂತೆ ಎಲ್ಲರಿಗೂ ಮನವಿ ಮಾಡಿದ್ದಾರೆ.
ಆದರೆ, ಇಷ್ಟೆಲ್ಲ ಮಾಡಿದ ಮೇಲೆ ರೇಖಾ ಅವರನ್ನು ಸುಮ್ಮನೆ ನಿಡುವುದು ಉಂಟೆ ಎಂಬ ಹಠಕ್ಕೆ ಬಿದ್ದ ಈ ಅಧಿಕಾರಿಗಳು ಕುಶಲಕರ್ಮಿ ಜಿ.ಎಸ್.ಬಡಿಗೇರ್ ಅವರ ಕುತ್ತಿಗೆ ಪಟ್ಟಿ ಹಿಡಿದು ಹಲ್ಲೆ ಮಾಡಿದ್ದಾರೆ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಇಲ್ಲ ಸಲ್ಲದ ಆರೋಪ ಮಾಡಿ ಅಮಾನತು ಮಾಡಿದ್ದಾರೆ. ಈ ರೀತಿ ಒಬ್ಬ ಸಾಮಾನ್ಯ ಮಹಿಳಾ ನಿರ್ವಾಹಕರಿಗೆ ಕಿರುಕುಳದ ಮೇಲೆ ಕಿರುಕುಳ ನೀಡುತ್ತಿದ್ದರೂ ಇದೇನು ಗೊತ್ತಿಲ್ಲ ಎಂಬ ರೀತಿ ನಡೆದುಕೊಳ್ಳುತ್ತಿರುವುದು ಎಂಡಿ ಮತ್ತು ಕೇಂದ್ರ ಕಚೇರಿಯಲ್ಲಿ ಇರುವ ಸಂಬಂಧಪಟ್ಟ ಅಧಿಕಾರಿಗಳಿಗೆ ಶೋಭೆ ತರುವುದಿಲ್ಲ.
ಇನ್ನಾರೂ ರೇಖಾ ಅವರಿಗೆ ಆಗಿರುವ ಮಾನಸಿಕ ಮತ್ತು ದೈಹಿಕ ನೋವಿಗೆ ಕಾನೂನಾತ್ಮಕವಾಗಿ ಎಂಡಿ ಪ್ರಿಯಾಂಗಾ ಅವರು ಕೂಡ ಒಬ್ಬ ಹೆಣ್ಣಾಗಿರುವುದರಿಂದ ಸ್ಪಂದಿಸಿ ತಪ್ಪು ಮಾಡಿರುವ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಿ, ರೇಖಾ ಅವರ ಅಮಾನತು ಆದೇಶವನ್ನು ತೆರೆವುಗೊಳಿಸಬೇಕು ಎಂದು ನೊಂದ ರೇಖಾ ಪರವಾಗಿ ನೌಕರರು ಒತ್ತಾಯಿಸಿದ್ದಾರೆ.
ಇನ್ನು ಇಷ್ಟೆಲ್ಲ ಆದ ಮೇಲೆ ವಿಭಾಗೀಯ ನಿಯಂತ್ರಣಾಧಿಕಾರಿ ನಿತೀನ್ ಹೆಗಡೆ ಮತ್ತು ಘಟಕ ವ್ಯವಸ್ಥಾಪಕ ಬಿ.ಎಸ್.ಬಿರಾದಾರ್ ಸೇರೆ ಮಾನವೀಯತೆಯೆ ಇಲ್ಲದ ರೀತಿ ನಡೆದುಕೊಂಡ ಈ ಎಲ್ಲರ ವಿರುದ್ಧ ಸಾರಿಗೆ ಸಚಿವರು ಮತ್ತು ಎಂಡಿ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವರೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಿದೆ.
1 Comment