ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ವಿಭಾಗಗಳಲ್ಲೂ ಪಾಸ್ ಕೌಂಟರ್, ಅವತಾರ ಕೌಂಟರ್, ಸಿಸಿ ಸೆಲ್ ಮತ್ತು ವಾಣಿಜ್ಯ ಆದಾಯ ಸಂಗ್ರಹಣೆಗೆ UPI ವ್ಯವಸ್ಥೆ ಅಳವಡಿಸಿಕೊಳ್ಳಬೇಕು ಎಂದು ನಿಗಮದ ಮಾಹಿತಿ ತಂತ್ರಜ್ಞಾನ ವಿಭಾಗದ ಉಪ ಮುಖ್ಯ ಗಣಕ ವ್ಯವಸ್ಥಾಪಕರು ಸೂಚನೆ ನೀಡಿದ್ದಾರೆ.
ಈ ಸಂಬಂಧ ಮಂಗಳವಾರ ಆದೇಶ ಹೊರಡಿಸಿದ್ದು, ಹುಬ್ಬಳ್ಳಿ ಗ್ರಾ. ಧಾರವಾಡ ಗ್ರಾ. ಬೆಳಗಾವಿ, ಚಿಕ್ಕೋಡಿ, ಬಾಗಲಕೋಟ,ಗದಗ, ಹಾವೇರಿ ಮತ್ತು ಉತ್ತರ ಕನ್ನಡ ವಿಭಾಗಗಳ ವಿಭಾಗೀಯ ನಿಯಂತ್ರಣಾಧಿಕಾರಿಗಳು ಈ ವಿಷಯಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಇನ್ನು ಸಂಸ್ಥೆಯ ಬಸ್ಸುಗಳಲ್ಲಿ ನಗದು ರಹಿತ ವಹಿವಾಟುಗಳಿಗೆ ಉತ್ತೇಜನ ನೀಡುವ ಸಲುವಾಗಿ ಸಂಸ್ಥೆಯ ಎಲ್ಲ ಘಟಕಗಳ ಬಸ್ಸುಗಳಲ್ಲಿ UPI ವ್ಯವಸ್ಥೆ ಅಳವಡಿಸಿದ್ದು ಅದು ಯಶಸ್ವಿಯಾಗಿದೆ. ಪ್ರಸ್ತುತ ಪಾಸ್ ಕೌಂಟರ್, ಅವತಾರ ಕೌಂಟರ್, ಸಿ.ಸಿ.ಸೆಲ್ ಮತ್ತು ವಾಣಿಜ್ಯ ಆದಾಯ ಸಂಗ್ರಹ ಮಾಡುವಲ್ಲಿ UPI ವ್ಯವಸ್ಥೆ ಅಳವಡಿಸಿರುವ ಕುರಿತು ಕ್ರಮ ಕೈಗೊಳ್ಳಲಾಗಿದೆ.
ಹೀಗಾಗಿ ಇದಕ್ಕೆ ಸಂಬಂಧಿಸಿದಂತೆ ಡಿಸಿಎಸ್ ತಂತ್ರಾಂಶದಲ್ಲಿ ACC-40/G-12-Receipt ಜನರೇಟ್ ಮಾಡುವ ಹಾಗೆ ಅವಕಾಶ ಕಲ್ಪಿಸಲಾಗಿದ್ದು, ಈಗಾಗಲೇ ಈ ಕುರಿತಂತೆ, ತರಬೇತಿಯನ್ನೂ ನೀಡಲಾಗಿದೆ. ತಂತ್ರಾಂಶಕ್ಕೆ ಸಂಬಂಧಿಸಿದ Form ಮತ್ತು Reportಗಳನ್ನು 06-08-2024 ರಂದು ಇ-ಮೇಲ್ ಮೂಲಕ ವಿಭಾಗಗಳಿಗೆ ಕಳುಹಿಸಲಾಗಿದೆ. ಅದನ್ನು ಎಲ್ಲ ಘಟಕಗಳಿಗೆ ಅಳವಡಿಸಿ 13-08-2024 ರೊಳಗಾಗಿ ಅನುಸರಣಾ ವರದಿ ನೀಡಬೇಕು ಎಂದು ಸೂಚಿಸಿದ್ದಾರೆ.