NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್- ಚಾಲನಾ ಸಿಬ್ಬಂದಿಗಳಿಗೆ ಗಾಯ
- ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಡಿಟಿಒ ಅಶೋಕ್ ಪಾಟೀಲ್
- ಗಾಯಾಳು ಚಾಲನಾ ಸಿಬ್ಬಂದಿಗಳನ್ನು ಸವಣೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ ಡಿಟಿಒ
ಹಾವೇರಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡದೆ ಪರಿಣಾಮ ಚಾಲಕ ಮತ್ತು ನಿರ್ವಾಹಕರು ಗಾಯಗೊಂಡಿರುವ ಘಟನೆ ಜಲ್ಲಾಪುರ ಕಡ್ಕೊಳ್ ಬಳಿ ನಡೆದಿದೆ.
ಅದೃಷ್ಟವಶಾತ್ ಪ್ರಯಾಣಿಕರು ಯಾರು ಇರಲಿಲ್ಲ. ಹೀಗಾಗಿ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ಚಾಲಕ ಉಮೇಶ್ ರೋಳ್ಳಿ, ನಿರ್ವಾಹಕ ಗವಿಸಿದ್ದಪ್ಪ ನುಂಚಂಲ್ಲಿ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಜೀವಪಾಯದಿಂದ ಪಾರಾಗಿದ್ದಾರೆ.
ನಿಗಮದ ಹಾವೇರಿ ವಿಭಾಗ ಸವಣೂರು ಘಟಕದ ಬಸ್ ಸವಣೂರಿನಿಂದ ಹೊರಟು ಜಲ್ಲಾಪುರ ಕಡ್ಕೊಳ್ ಮಾರ್ಗಮಧ್ಯೆ ಹೋಗುತ್ತಿದ್ದಾಗ ತಾಂತ್ರಿಕ ದೋಷ (ಸ್ಟೇರಿಂಗ್ ಪ್ಲೈ) ಕಾಣಿಸಿಕೊಂಡಿದೆ. ಈ ವೇಳೆ ಟರ್ನಿಂಗ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ.
ಬಸ್‌ನಲ್ಲಿ ಯಾವುದೇ ಪ್ರಯಾಣಿಕರಿಲ್ಲದ ಕಾರಣ ಮಹಾ ದುರಂತ ತಪ್ಪಿದೆ. ಇನ್ನು ಒಂದು ತಿಂಗಳಿನಿಂದಲೂ ಬಸ್ಸಿನ ಡಿಫಾಲ್ಟ್ ಬರೆದರು ಸುಮಾರು ನಾಲ್ಕು ದಿನಗಳ ಹಿಂದೆಯಷ್ಟೇ ಡಾಕಿಂಗ್ ಮಾಡಿದ್ದಾಗ್ಯೂ ಸರಿಪಡಿಸದೆ ಚಾಲಕ ಲಾಗ್‌ಶೀಟ್‌ನಲ್ಲಿ ಬರೆದ ಡಿಪಾಲ್ಟ್‌ಗೂ ಕ್ಯಾರೆ ಎನ್ನದ ತಾಂತ್ರಿಕ ಸಿಬ್ಬಂದಿ, ಪಾರೂಪತ್ತೆದಾರರು ಹಾಗೂ ಘಟಕ ವ್ಯವಸ್ಥಾಪಕರ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದೆ ಎಂದು ನೌಕರರು ಹೇಳಿದ್ದಾರೆ.
DTO ಅಶೋಕ್ ಪಾಟೀಲ್ ಭೇಟಿ: ಅಪಘಾತದಲ್ಲಿ ಚಾಲಕ ಮತ್ತು ನಿರ್ವಾಹಕರು ಗಾಯಗೊಂಡಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ವಿಭಾಗೀಯ ಹಿರಿಯ ಅಧಿಕಾರಿಗಳೂ ಆದ DTO ಅಶೋಕ್ ಪಾಟೀಲ್ ಅವರು ಖುದ್ದು ಸ್ಥಳಕ್ಕೆ ತೆರಳಿ ಗಾಯಾಳು ಚಾಲನಾ ಸಿಬ್ಬಂದಿಗಳನ್ನು ಸವಣೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಅಲ್ಲದೆ ಗಾಯಾಳು ಚಾಲನಾ ಸಿಬ್ಬಂದಿಗಳಿಗೆ ಚಿಕಿತ್ಸೆ ನೀಡಿದ ಬಳಿಕವೂ ಆಸ್ಪತ್ರೆಯಲ್ಲೇ ಇದ್ದು ವೈದ್ಯರಿಂದ ಆರೋಗ್ಯದ ಬಗ್ಗೆ ಮಾಹಿತಿ ಪಡೆದು ಯಾವುದೇ ಪ್ರಾಣಾಪಾಯವಿಲ್ಲ ಎಂದು ಖಾತರಿಪಡಿಸಿಕೊಂಡ ಬಳಿಕವೂ ಮತ್ತೊಮ್ಮೆ ಗಾಯಾಳು ಸಿಬ್ಬಂದಿಗಳನ್ನು ಭೇಟಿಮಾಡಿ ಯಾವುದೇ ಸಮಸ್ಯೆ ಇಲ್ಲ ಎಂದು ಧೈರ್ಯ ತುಂಬಿದರು.
ಅಲ್ಲದೆ ಈ ತಾಂತ್ರಿಕ ದೋಷಕ್ಕೆ ಕಾರಣರಾದ ಸಿಬ್ಬಂದಿಗಳ ವಿರುದ್ಧ ಕ್ರಮ ತೆಗೆದುಕೊಂಡು ಮುಂದೆ ಈರೀತಿ ಆಗದಂತೆ ನೋಡಿಕೊಳ್ಳುವ ಬಗ್ಗೆ ಎಚ್ಚರಿಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.