ಬನ್ನೂರು: ಬೀಡನಹಳ್ಳಿ ಶ್ರೀ ನಂದಿ ಬಸವೇಶ್ವರ ಸ್ವಾಮಿಯ 12 ವರ್ಷದ ಕೊಂಡ ಮುಚ್ಚುವ ಸಮಾರಂಭ ನಾಳೆ (ಮಾ.22) ಬೆಳಗ್ಗೆ ಅದ್ದೂರಿಯಾಗಿ ಜರುಗಲಿದೆ.
ಗ್ರಾಮದ ಪ್ರತಿ ಮನೆಯಿಂದ ಧಾನ್ಯ ಸಂಗ್ರಹಿಸಿ ಶ್ರೀಸ್ವಾಮಿಯ ಸನ್ನಿಧಿಯಲ್ಲಿ ಭಕ್ತರಿಗೆ ಅನ್ನ ಪ್ರಸಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಳೆದ ಸೋಮವಾರ ಗ್ರಾಮದಲ್ಲಿ ಕಾಶಿವೇಷಧಾರಿ ಮಹದೇಸ್ವಾಮಿ ಅವರು ಗಜಗಾಂಭೀರ್ಯದಿಂದ 12ನೇ ಕೊಂಡ ಹಾಯ್ದರು. ಇವರ ನಂತರ ಶ್ರೀಸ್ವಾಮಿಯ ದೇವರ ಗುಡ್ಡಪ್ಪನವರಾದ ನಂಜುಂಡೆಗೌಡ ಮತ್ತು ರಾಜೇಶ್‌ಅವರು ಕೊಂಡ ಹಾಯ್ದರು.
ಕೊಂಡ ಹಾಯುವುದಕ್ಕೂ ಮುನ್ನಾ ಮುಂಜಾನೆ ಶ್ರೀಸ್ವಾಮಿಯ ಸನ್ನಿಧಿಯಿಂದ ಬಸವನ ಜತೆಗೆ ಗ್ರಾಮದೇವತೆ ಮಾರಮ್ಮನವರ ಮತ್ತು ಮುತ್ತತ್ತಿರಾಯನ ಪೂಜೆಯನ್ನು ರಾಜ ಬೀದಿಯ ಮೆರವಣಿಗೆ ಮೂಲಕ ಗುರುಸ್ವಾಮಿ ಅವರ ಮನೆಗೆ ಕರೆತರಲಾಯಿತು.
ಗುರುಸ್ವಾಮಿ ಅವರ ಮನೆಯಲ್ಲಿ ಪೂಜೆಗೆ ಹೂ ಹೊಂಬಾಳೆ ಮಾಡಿದ ನಂತರ ಅಲ್ಲಿಂದಲ್ಲೇ ಶ್ರೀಸ್ವಾಮಿಗೆ ಹರಕೆ ಹೊತ್ತುಕೊಂಡಿದ್ದ ಭಕ್ತರ ಬಾಯಿಬೀಗ ಚುಚ್ಚಲಾಯಿತು. ಈ ವೇಳೆ ತಮಟೆ, ಕೊಂಬು ಕಹಳೆಗಳ ಮಂಗಳವಾದ್ಯಗಳೊಂದಿಗೆ ಸಾವಿರಾರು ಭಕ್ತರು ಮೆರವಣಿಗೆ ಮೂಲಕ ಶ್ರೀಸ್ವಾಮಿಯ ಆವರಣದಲ್ಲಿ ತೆಗೆಯಲಾಗಿದ್ದ ಕೊಂಡದ ವರೆಗೂ ವಿಜೃಂಭಣೆಯಿಂದ ಮೆರವಣಿಗೆ ಮಾಡಿಕೊಂಡು ಬರಲಾಯಿತು.
ಬಾಯಿಬೀಗ ಹರಕೆ ಹೊತ್ತಿದ್ದ ಭಕ್ತರು ಪಂಜಿನ ಸೇವೆಯನ್ನು ಮೆರವಣಿಗೆ ಸಾಗಿದ ದಾರಿಯುದ್ದಕ್ಕೂ ಮಾಡಿಕೊಂಡು ಬಂದರು. ಕೊಂಡದ ಬಳಿ ಬರುತ್ತಿದ್ದಂತೆ ಕೊಂಗ ಬೀಸಿ ಕೆಂಡದ ಮೇಲೆ ಇದ್ದ ಬೂದಿಯನ್ನು ತೆಗೆಯಲಾಯಿತು. ಬಳಿಕ ಕಾಶಿಯ ವೇಷಧಾರಿ ಮಹದೇಸ್ವಾಮಿ, ಅವರ ಹಿಂದೆ ಶ್ರೀಸ್ವಾಮಿಯ ದೇವರ ಗುಡ್ಡಪ್ಪನವರಾದ ನಂಜುಂಡೆಗೌಡ ಮತ್ತು ರಾಜೇಶ್‌ಅವರು ಕೊಂಡ ಹಾಯ್ದರು.
ಕೊಂಡ ಹಾಯುವುದನ್ನು ಪ್ರತಿಯೊಬ್ಬರೂ ನೋಡಲೆಂದು ಬೆಳ್ಳಿ ಪರದೆಯ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ ನೆರೆದಿದ್ದ ಸಾವಿರಾರು ಭಕ್ತರು ಕೊಂಡ ಹಾಯುವುದನ್ನು ನೋಡಿ ಕಣ್ತುಂಬಿಸಿಕೊಂಡರು.
ಭಾನುವಾರ ಬಂಡಿಯುತ್ಸವ ನಡೆಯಿತು. ಸೋಮವಾರ ಕೊಂಡೋತ್ಸವ ನೆರವೇರುವ ಮೂಲಕ ಬಂಡಿಕೊಂಡೋತ್ಸವ ಪೂರ್ಣಗೊಂಡಿತ್ತು. ನಾಳೆ ಕೊಂಡ ಮುಚ್ಚುವ ಕಾರ್ಯಕ್ರಮವನ್ನು ಗ್ರಾಮದ ಮುಖಂಡರಾದ ಬೆಟ್ಟೇಗೌಡನ ಕುಟುಂಬದವರು ನೆರೆವೇರಿಸಲಿದ್ದಾರೆ.