ಬನ್ನೂರು: ಪ್ರತಿ ವರ್ಷ ಏಕಕಾಲಕ್ಕೆ ನಡೆಯುವ ಏಳೂರಿನ ಮಾರಮ್ಮ ದೇವರುಗಳ ಹಬ್ಬ ಮಂಗಳವಾರ (ಮಾ.2) ಮತ್ತು ಬುಧವಾರ (ಮಾ.3) ಆಯಾಯ ಗ್ರಾಮಗಳಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ.
ಬೀಡನಹಳ್ಳಿ, ಮಾಕನಹಳ್ಳಿ, ಬಸವನಹಳ್ಳಿ, ಬನ್ನೂರು, ಬೆಟ್ಟಹಳ್ಳಿ, ಚಾಮನಹಳ್ಳಿ ಮತ್ತು ಅತ್ತಹಳ್ಳಿಯ ಗ್ರಾಮಗಳಲ್ಲಿ ತಲಾತಲಾಂತರದಿಂದಲೂ ಏಕಕಾಲಕ್ಕೆ ಹಬ್ಬ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಅದರಂತೆ ಈ ವರ್ಷ ಮಾ.2 ಮತ್ತು 3ರಂದು ಹಬ್ಬ ಆಚರಣೆ ಮಾಡಲಾಗುತ್ತಿದೆ.
ಹಬ್ಬದ ಅಂಗವಾಗಿ ಮಂಗಳವಾರ ಆಯಾಯ ಗ್ರಾಮ ದೇವತೆ ಮಾರಮ್ಮನಿಗೆ ಮೊದಲ ಪೂಜೆ (ತಂಪು ಸೇವೆ) ಕಾರ್ಯಕ್ರಮ ನೆರವೇರಲಿದೆ. ಈ ಹಿನ್ನೆಲೆಯಲ್ಲಿ ಇಂದು ಗ್ರಾಮದ ಹೆಂಗಳೆಯರು ಬಿಂದಿಗೆಯಲ್ಲಿ ನೀರು ತುಂಬಿಸಿ ಗಂಗೆ ಪೂಜೆ ನೆರವೇಸಿ ಮೆನೆ ತೆಗೆದುಕೊಂಡು ಹೋದರು. ಇನ್ನು ಬುಧವಾರ ಗ್ರಾಮದ ಹೊರ ವಲಯದಲ್ಲಿ ಮಡೆ ಊಯ್ಯುತ್ತಾರೆ.
ಬೀಡನಹಳ್ಳಿಯಲ್ಲಿ ಮಾರಮ್ಮನ ಹಬ್ಬ
ಉತ್ತನಹಳ್ಳಿ ಮಾರಮ್ಮನಿಗೆ ಗ್ರಾಮದ ಪ್ರತಿ ಮನೆಯಿಂದ ಒಬ್ಬ ಸದಸ್ಯರಂತೆ ಮುಂಜಾನೆ 4.30ರಲ್ಲಿ ಒಂದೆಡೆ ಸೇರಿ ಮಡೆ ಊಯ್ಯುವುದು. (ಹೊಸ ಮಡಕೆ, ತಂದು ಅದರಲ್ಲಿ ಅಕ್ಕಿ, ಸಾರಿನ ಬೇಳೆ, ಉಪ್ಪು ಅದಕ್ಕೆ ತಕ್ಕಷ್ಟು ನೀರು ಹಾಕಿ ಅನ್ನಮಾಡುವುದು) ನಂತರ ಅನ್ನ ಮಾಡಿದ ಮಡಕೆಯ ಬಾಯಿಯನ್ನು ಅಡಕೆಯ ಎಲೆ( ಒಡಾಳೆ)ಯಿಂದ ಮುಚ್ಚಿ ಅದನ್ನು ಒಡಾಳೆ ದಾರದಿಂದಲೇ ಕಟ್ಟುವುದು. ಈ ವೇಳೆ ಜವನ ಬೇವಿನ ಸೊಪ್ಪು ಕಟ್ಟುವ ಮೂಲಕ ಒಂದು ರೀತಿ ಅಲಂಕರಿಸಿ ತಾವು ಮಡೆ ಮಾಡಿದ ಮಡಕೆಯನ್ನು ಗುತು ಹಾಕಿಕೊಂಡು ಬರುವುದು.
ಮತ್ತೆ ಮಧ್ಯಾಹ್ನನದ ನಂತರ ಗ್ರಾಮದ ಹೆಂಗಳೆಯರು ತಂಬಿಟ್ಟಿನಾರತಿ ಜತೆಗೆ ಹಣ್ಣು ಕಾಯಿ ಭೂಪ, ಸಮೇತ ಮಾರಮ್ಮ ಮುತ್ತತ್ತಿರಾಯನ ಪೂಜೆ ಹೊತ್ತು ಬೀಡನಹಳ್ಳಿ ಗ್ರಾಮದ ರಾಜ ಬೀದಿಗಳ ಮೂಲಕ ಮೆರವಣಿಗೆ ಮಾಡಿ ಮಡೆ ಮಾಡಿದ ಸ್ಥಳಕ್ಕೆ ಹೋಗುತ್ತಾರೆ.
ಇಲ್ಲಿ ತಮ್ಮ ಕುಟುಂಬದ ಒಬ್ಬ ಸದಸ್ಯರು ಮುಂಜಾನೆ ಮಡೆ ಊಯ್ದಿದ್ದ ಮಡಕೆಯ ಬಳಿ ತಾವು ಮೆರವಣಿಗೆ ಮೂಲಕ ಹೊತ್ತು ತಂದ ತಂಬಿಟ್ಟಿನಾರತಿ ಇಟ್ಟು ಹಣ್ಣು ಮುರಿದು ,ಕಾಯಿ ಒಡೆದು ಗಂಧದ ಕಟ್ಟಿ ಹಚ್ಚಿ ಹೆಂಗಳೆಯರು ಪೂಜೆ ಮಾಡುತ್ತಾರೆ.
ಈ ವೇಳೆ ಬನ್ನೂರು ಹೆಗ್ಗೆರೆಯಿಂದ ಮತ್ತೆ ಹೂ ಹೊಂಬಾಳೆಯಾಗಿ ಬಂದ ಬೀಡನಹಳ್ಳಿ ಮಾರಮ್ಮ ಮತ್ತು ಮುತ್ತತ್ತಿರಾಯನ ಪೂಜೆಗಳನ್ನು ಹೊತ್ತ ದೇವರ ಗುಡ್ಡಪ್ಪಂದಿರು ಮಡೆ ಇರಟ್ಟಿರುವ ಜಾಗದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಮಾಡಿ ನಂತರ ಮಡೆಗಳ ಮೇಲೆ ತೀರ್ಥ ಪ್ರೊಷಕ್ಷಣೆ ಮಾಡಿದ ಬಳಿಕ ಮಡೆ ಮಡಕೆಗಳನ್ನು ಮನೆಗಳಿಗೆಹೊತ್ತು ತರುತ್ತಾರೆ.
ಈ ವೇಳೆ ಮನೆ ಬಾಗಿಲಿಗೆ ಬಂದ ಮಡೆ ಹೊತ್ತವರ ಪಾದಕ್ಕೆ ಗಂಗೆ ಹಾಕಿ ದೇವರ ಸ್ವರೂಪಿ ಎಂದು ಮಡೆಯನ್ನು ಮನೆಯ ಒಂದು ರೂಂನಲ್ಲಿ ಇಟ್ಟು ಆ ಮಡೆ ಅನ್ನವನ್ನು ಪ್ರಸಾದವಾಗಿ ಮನೆಯ ಪ್ರತಿ ಸದಸ್ಯರಿಗೂ ಕೊಡುತ್ತಾರೆ. ಈ ಮೂಲಕ ಮಡೆ ಪ್ರಸಾದ ಪೂರ್ಣಗೊಳ್ಳುತ್ತದೆ.