ಎಚ್.ಡಿ.ಕೋಟೆ: ಪಟ್ಟಣದಲ್ಲಿ ಬೀದಿನಾಯಿ, ಕೋತಿಗಳ ಹಾವಳಿಯಿಂದ ಜನ ಹೈರಾಣರಾಗುತ್ತಿದ್ದಾರೆ. ಕೆಲದಿನದಿಂದ ಬೀದಿ ನಾಯಿಗಳ ಕಾಟದಿಂದ ಬೇಸತ್ತಿದ್ದವರು, ಈಗ ಕೋತಿಗಳ ಹಾವಳಿ ಹೆಚ್ಚಾಗಿದ್ದು, ರಸ್ತೆಯಲ್ಲಿ ಓಡಾಡುವುದಕ್ಕೂ ಹೆದರುವಂತಾಗಿದೆ.
ಆಗಾಗ್ಗೆ ಪಟ್ಟಣದೊಳಗೆ ನುಗ್ಗುವ ಕೋತಿಗಳು ಜನರಿಗೆ ಹಿಂಸೆ ನೀಡುತ್ತಿವೆ. ಮನೆಗೆ ನುಗ್ಗಿ ಸಿಕ್ಕಿದ್ದನ್ನು ಹೊತ್ತೊಯ್ಯುವುದಲ್ಲದೆ, ಸುತ್ತ ಮುತ್ತ ಬೆಳೆದ ಬೆಳೆಗಳನ್ನು ಹಾಳು ಮಾಡುತ್ತಿವೆ. ಒಂದೆಡೆ ನಾಯಿಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇವುಗಳಿಂದ ಶಾಲೆಗೆ ತೆರಳುವ ಮಕ್ಕಳಿಂದ ಹಿಡಿದು ವಯೋವೃದ್ಧರು ಭಯಪಡುವಂತಾಗಿದೆ.
ಇದೊಷ್ಟೇ ಅಲ್ಲದೆ ದ್ವಿಚಕ್ರ ವಾಹನ ಸವಾರರನ್ನು ಅಟ್ಟಿಸಿಕೊಂಡು ಹೋಗುವ ನಾಯಿಗಳು ಅಪಘಾತಕ್ಕೂ ಕಾರಣವಾಗುತ್ತಿವೆ. ಒಮ್ಮೆಗೆ ಬೈಕ್ ಸವಾರರ ಮೇಲೆ ದಾಳಿ ಮಾಡುತ್ತಿದ್ದು, ಇದರಿಂದ ನಿಯಂತ್ರಣ ತಪ್ಪಿ ಬಿದ್ದು ಸವಾರರು ಪೆಟ್ಟು ಮಾಡಿಕೊಳ್ಳುತ್ತಿದ್ದಾರೆ.
ಪಟ್ಟಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತನ್ನ ಮರಿಗಳ ಸಹಿತ ಹಿಂಡು ಹಿಂಡಾಗಿ ಬೀಡು ಬೀಡು ಬಿಡುವ ಕೋತಿಗಳು ಮನೆಯ ಗೃಹಣಿಯರನ್ನು ಇನ್ನಿಲ್ಲದಂತೆ ಕಾಡುತ್ತಿವೆ. ಕೋತಿಗಳ ಹಾವಳಿ ಎಷ್ಟರ ಮಟ್ಟಿಗೆ ಮಿತಿಮಿರಿದೆ ಎಂದರೆ ಮನೆಗಳ ಹೆಂಚುಗಳನ್ನು ತೆಗೆದು ಕೆಳಗೆ ಬಿಸಾಡಿ, ಒಡೆದು ಹಾಕುವುದಲ್ಲದೆ, ಮನೆಯ ಒಳಹೊಕ್ಕು ಕೆಲ ಉಪಕರಣಗಳನ್ನು ಕಿತ್ತು ನಾಶ ಮಾಡುತ್ತಿವೆ.
ಇನ್ನು ಆಡುಗೆ ಮನೆಯಲ್ಲಿ ಸಿಕ್ಕ ಸಿಕ್ಕ ಆಹಾರ ಸಾಮಾಗ್ರಿ, ತರಕಾರಿ, ದಿನಸಿ ಪದಾರ್ಥಗಳನ್ನು ತಿಂದು ಚೆಲ್ಲಾಡಿ ನಾಶಪಡಿಸುವುದರ ಜತೆಗೆ ಮನೆಯಲ್ಲಿರುವ ಹಣ್ಣು ಹಂಪಲು ಮತ್ತು ತಿಂಡಿ ತಿನಿಸುಗಳನ್ನು ಹೊತ್ತೊಯ್ಯುತ್ತಿವೆ.
ಮನೆ ಹಿಂದೆ ಮುಂದೆ ಇರುವ ತೆಂಗಿನ ಮರದ ಎಳೆನೀರನ್ನು ಕಿತ್ತು ಕುಡಿದು ಬಿಸಾಡುತ್ತಿದ್ದು, ಕೋತಿಗಳ ಮೀತಿ ಮೀರಿದ ಹಾವಳಿಯಿಂದಾಗಿ ಇಲ್ಲಿನ ನಿವಾಸಿಗಳು ಮನೆಯಲ್ಲಿ ಒಂಟಿಯಾಗಿ ಇರಲು ಹೆದರುವಂತಾಗಿದೆ. ದಿನನಿತ್ಯ ವಿವಿಧ ಕೆಲಸ ಕಾರ್ಯಗಳ ಈಡೇರಿಕೆಗೆ ಬರುವ ತಾಲೂಕಿನ ಜನರು ಕೋತಿಗಳ ಹಿಂಡನ್ನು ನೋಡಿ ಹೌಹಾರುತ್ತಿದ್ದಾರೆ. ಬೀದಿ ನಾಯಿಗಳ ಹಾವಳಿ ಹಾಗೂ ಕೋತಿಗಳ ಉಪಟಳಕ್ಕೆ ಮುಕ್ತಿ ನೀಡುವುದು ಅಗತ್ಯವಾಗಿದೆ.