ಬೆಂಗಳೂರು: ಸಾರಿಗೆ ನೌಕರರು ಘಟಕ ಮಟ್ಟದಲ್ಲಿ ಅನುಭವಿಸುತ್ತಿರುವ ಕಷ್ಟ- ಸುಖಗಳ ಬಗ್ಗೆ ವಿಚಾರಿಸಲು ಕಾನೂನಾತ್ಮಕವಾಗಿಯೇ ಡಿಪೋಗಳಿಗೆ ಭೇಟಿ ನೀಡಿದ ವೇಳೆ ಅಧಿಕಾರಿಗಳು ತಡೆಯದಂತೆ ಕೋರಿ ಹೈ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವುದಾಗಿ ಕರಾರಸಾಸಂ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ಕಾನೂನು ಸಲಹೆಗಾರರೂ ಆದ ಸುಪ್ರೀಂ ಕೋರ್ಟ್ ಹಾಗೂ ಹೈ ಕೋರ್ಟ್ ವಕೀಲ ಎಚ್.ಬಿ.ಶಿವರಾಜು ತಿಳಿಸಿದ್ದಾರೆ.
10ಜನರನ್ನೊಳಗೊಂಡ ವಕೀಲರ ತಂಡ ನೌಕರರ ಸಮಸ್ಯೆ ಆಲಿಸಲು ಡಿಪೋಗಳಿಗೆ ಭೇಟಿ ನೀಡಲಿದೆ ಎಂದ ಅವರು, ನಾವು ಹೋದಾಗ ಡಿಪೋಗಳಲ್ಲಿನ ಭದ್ರತಾ ಸಿಬ್ಬಂದಿ ನಮಗೆ ಮೇಲಧಿಕಾರಿಗಳಿಂದ ಯಾವುದೆ ಮಾಹಿತಿ ಇಲ್ಲ, ಹೀಗಾಗಿ ನಾವು ನಿಮಗೆ ಡಿಪೋ ಪ್ರವೇಶ ಮಾಡುವುದಕ್ಕೆ ಅವಕಾಶ ಕೊಡಲು ಬರುದಿಲ್ಲ ಎಂದು ಹೇಳುತ್ತಾರೆ.
ಇನ್ನು ಈ ಬಗ್ಗೆ ಡಿಪೋ ವ್ಯವಸ್ಥಾಪಕರು ಸರಿಯಾಗಿ ಸ್ಪಂದಿಸುವುದಿಲ್ಲ ಆದ್ದರಿಂದ ನೌಕರರ ಸಮಸ್ಯೆಗಳು ಸಮಸ್ಯೆಗಳಾಗಿಯೇ ಇನ್ನೂ ಉಳಿದಿದ್ದು ನಿತ್ಯ ಹತ್ತಾರು ಮಂದಿ ನಮ್ಮ ಕಚೇರಿಗೆ ಸಮಸ್ಯೆಗಳನ್ನು ಹೊತ್ತು ತರುತ್ತಿದ್ದಾರೆ.
ನಾವು ನೌಕರರ ಹಿತ ದೃಷ್ಟಿಯಿಂದ ಕರಾರಸಾಸಂ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘ ಸ್ಥಾಪಿಸಿದ್ದು ಅವರ ತೊಂದರೆ ಆಲಿಸಲು ಆಗುತ್ತಿಲ್ಲ ಎಂದರೆ ಸಂಘದ ಪದಾಧಿಕಾರಿಗಳಿಗೂ ಮುಜುಗರವಾಗುತ್ತದೆ. ಅಲ್ಲದೆ ನೌಕರರು ಕೂಡ ಹಲವಾರು ಸಮಸ್ಯೆಗೆ ಸಿಲುಕಿ ಮಾನಸಿಕವಾಗಿ ಖಿನ್ನತೆಗೆ ಜಾರುತ್ತಿದ್ದಾರೆ.
ಈ ರೀತಿ ಖಿನ್ನತೆಗೆ ಒಳಗಾಗಿ ಈಗಾಗಲೇ ಹಲವರು ಜೀವನ ಕಳೆದುಕೊಂಡಿರುವುದು ಎಲ್ಲರಿಗೂ ತಿಳಿದಿದೆ. ಈ ರೀತಿಯ ಘಟನೆಗಳು ಮರು ಕಳುಹಿಸಬಾರದು ಎಂಬ ದೃಷ್ಟಿಯಿಂದ. ಮುಂದಿನ ವಾರದೊಳಗೆ ಹೈ ಕೋರ್ಟ್‌ನಲ್ಲೇ ಈ ಬಗ್ಗೆ ಅರ್ಜಿ ಸಲ್ಲಿಸಿ ಅನುಮತಿ ಕೋರಲಾಗುವುದು ಎಂದು ತಿಳಿಸಿದ್ದಾರೆ.