ಬೆಂಗಳೂರು: ಕೋಲ್ಕತ್ತ ವೈದ್ಯೆಯ ಹತ್ಯೆ ಖಂಡಿಸಿ ಐಎಂಎ ಪ್ರತಿಭಟನೆಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಓಪಿಡಿ ಇಂದು ಬಂದ್ ಆಗಲಿವೆ. ತುರ್ತು ಸೇವೆಗಳು ಮಾತ್ರ ಲಭ್ಯವಿರಲಿವೆ.
ಕೋಲ್ಕತ್ತದಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಹತ್ಯೆ ಮಾಡಿರುವುದನ್ನು ಖಂಡಿಸಿ ಇಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಪ್ರತಿಭಟನೆಗೆ ಕರೆ ಕೊಟ್ಟಿದೆ. ಐಎಂಎ ಕೊಟ್ಟಿರುವ ಕರೆಗೆ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಖಾಸಗಿ ಆಸ್ಪತ್ರೆಗಳ ಒಕ್ಕೂಟ ಮತ್ತು ಹಲವು ವೈದ್ಯಕೀಯ ಅಸೋಸಿಯೇಶನ್‌ಗಳು ಬೆಂಬಲ ಕೊಟ್ಟಿದ್ದು, ಇಂದು ಬೆಳಗ್ಗೆ 6 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೂ ಓಪಿಡಿ ಬಂದ್ ಆಗಲಿದೆ. ಅಂದರೆ 24 ಗಂಟೆಗಳ ಕಾಲ ಓಪಿಡಿ ಸೇವೆ ಸ್ಥಗಿತ ಆಗಲಿದೆ.
ಓಪಿಡಿ ಸೇವೆ ಬಂದ್ ಆಗುವ ಕಾರಣ ರೋಗಿಗಳು ಆಸ್ಪತ್ರೆಗೆ ಹೋದರೆ ಚಿಕಿತ್ಸೆ ಸಿಗುವುದಿಲ್ಲ. ತುರ್ತು ಸೇವೆ ಮಾತ್ರ ಲಭ್ಯವಿರಲಿದೆ. ಬೆಂಗಳೂರಿನಲ್ಲಿ ಇರುವ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲೂ ಪ್ರತಿಭಟನೆ ಕಾವು ಜೋರಾಗಿ ಇರಲಿದೆ.
ಇಂದಿನ ವೈದ್ಯರ ಪ್ರತಿಭಟನೆಯನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡ ಪರೋಕ್ಷವಾಗಿ ಬೆಂಬಲಿಸಿದ್ದಾರೆ. ಪ್ರತಿಭಟನೆ ಉದ್ದೇಶ ಸರಿ ಇದೆ. ಅವರ ಹಕ್ಕನ್ನು ಅವರು ವ್ಯಕ್ತಪಡಿಸಲಿ. ಸಾರ್ವಜನಿಕರಿಗೆ ತೊಂದರೆ ಆಗದೇ ಇರೋಥರ ಮಾಡಲಿ ಎಂದಿದ್ದಾರೆ. ಜತೆಗೆ ಪ್ರತಿಭಟನೆ ಇರುವ ಹಿನ್ನೆಲೆ ಇಂದು ವೈದ್ಯರಿಗೆ ರಜೆ ಮಂಜೂರು ಮಾಡದಂತೆ ಸರ್ಕಾರ ಕೂಡ ಆದೇಶ ಮಾಡಿದೆ.
ಪ್ರತಿಭಟನೆಗೆ ಯರ‍್ಯಾರ ಬೆಂಬಲ?: ರಾಜ್ಯಾದ್ಯಂತ ಐಎಂಎ ವ್ಯಾಪ್ತಿಯಲ್ಲಿ 30,000 ವೈದ್ಯರಿದ್ದು, ಪ್ರತಿಭಟನೆಗೆ ಎಲ್ಲರೂ ಬೆಂಬಲ ವ್ಯಕ್ತಪಡಿಸಿದ್ದಾರೆ. ಖಾಸಗಿ ಆಸ್ಪತ್ರೆಗಳ ಒಕ್ಕೂಟ, ಸರ್ಕಾರಿ ವೈದ್ಯಾಧಿಕಾರಿಗಳ ಅಸೋಸಿಯೇಷಶನ್, ಮಕ್ಕಳ ವೈದ್ಯರ ಅಸೋಸಿಯೇಶನ್, ಅರ್ಥೋಪಿಡಿಕ್ ಅಸೋಸಿಯೇಶನ್, ಮೆಡಿಕಲ್ ಕಾಲೇಜ್ ವೈದ್ಯರ ಅಸೋಸಿಯೇಶನ್, ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿವೆ.