ವಿವಿಧ ಬೇಡಿಕೆಗಳ ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ
ಬೆಂಗಳೂರು: ಇಪಿಎಸ್ ನಿವೃತ್ತರ ಬೃಹತ್ ಪ್ರತಿಭಟನೆ ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ರಾಷ್ಟ್ರೀಯ ಸಂಘರ್ಷ ಸಮಿತಿ, ಬಿಎಂಟಿಸಿ & ಕೆಎಸ್ಆರ್‌ಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್ ಚಿಕ್ಕಬಳ್ಳಾಪುರ ವತಿಯಿಂದ ಜರುಗಿತು.
ರಾಷ್ಟ್ರೀಯ ಸಂಘರ್ಷ ಸಮಿತಿ ಅಧ್ಯಕ್ಷ ಕಮಾಂಡರ್ ಅಶೋಕ್ ರಾವುತ್ ಅವರು ದೇಶಾದ್ಯಂತ ಇರುವ ಎಲ್ಲ ಇಪಿಎಸ್ ಪಿಂಚಣಿದಾರರಿಗೆ ಕರೆ ನೀಡಿದ್ದ ನವಂಬರ್ 27ರ ಪ್ರತಿಭಟನೆ ಹಿನ್ನೆಲೆಯಲ್ಲಿ ವಿವಿಧ ಬೇಡಿಕೆಗಳ ಈಡೇರಿಸಿ ಆಗ್ರಹಿಸಿ, ಮನವಿ ಪತ್ರವನ್ನು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರಿಗೆ ಸಲ್ಲಿಸಲಾಯಿತು.
ಪ್ರತಿಭಟಮನೆಯಲ್ಲಿ ಭಾಗವಹಿಸಿದ್ದ ನೂರಾರು ಮಂದಿ ನಿವೃತ್ತ ನೌಕರರು ಇಪಿಎಫ್ಒ ಅಧಿಕಾರಿಗಳ ವಿರುದ್ಧ ಕೂಗಿದ ಧಿಕ್ಕಾರದ ಘೋಷಣೆ ಕಚೇರಿ ಆವರಣದಲ್ಲಿ ಮಾರ್ಧನಿಸಿತು. ನಿವೃತ್ತರ ಆಕ್ರೋಶದ ಕಟ್ಟೆ ಒಡೆದಿತ್ತು. ಈ ಪ್ರತಿಭಟನಾ ಸಭೆಗೆ ಜನಸಾಗರವೇ ಹರಿದು ಬಂದಿತ್ತು. ನಿವೃತ್ತರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಚೇರಿ ಆವರಣದಲ್ಲಿ ಪಥಸಂಚಲನ ನಡೆಸಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಖಜಾಂಚಿ ಡೋಲಪ್ಪನವರು ಮಾತನಾಡಿ, ಸಂಯಮ, ಶಿಸ್ತು ಮತ್ತು ಶಾಂತಿಗೆ ಹೆಸರಾದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಹಾಗೂ ಇತರೆ ಹತ್ತಾರು ಕಂಪನಿಗಳ ನೂರಾರು ನಿವೃತ್ತ ನೌಕರರು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದು, ತಮ್ಮ ಬೇಡಿಕೆ ಈಡೇರಿಕೆಗೆ ಪಣತೊಟ್ಟಿದ್ದಾರೆ. ಆದರೆ ಅಧಿಕಾರಿಗಳು ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ನಡೆದುಕೊಳ್ಳುತ್ತಿರುವುದು ನೋವಿನ ಸಂಗತಿ ಎಂದು ಬೇಸರ ಹೊರಹಾಕಿದರು.
ಪ್ರಸ್ತುತ ಡಂಬಚಾರದ “ನಿಧಿ ಆಪ್ಕೆ ನಿಕಟ್” ಕಾರ್ಯಕ್ರಮ ಕೇವಲ ವ್ಯರ್ಥ ಪ್ರಯತ್ನವಾಗಿದ್ದು, ಇಪಿಎಫ್ಒ ಅಧಿಕಾರಿಗಳು ನಿವೃತ್ತರನ್ನು ಕಳೆದ ಒಂದು ದಶಕದಿಂದ ವಂಚಿಸುತ್ತಿರುವ ಬಗ್ಗೆ ಅಧ್ಯಕ್ಷ ನಂಜುಂಡೇಗೌಡ ಆಕ್ರೋಶ ವ್ಯಕ್ತಪಡಿಸಿ, ಆರ್‌ಸಿ ಗುಪ್ತ ನ್ಯಾಯಾಲಯ ನಿಂದನಾ ಪ್ರಕರಣದಲ್ಲಿ ಅಧಿಕಾರಿಗಳು ಜೈಲು ಸೇರುವುದು ಖಚಿತ ಎಂದರು.
ನವೆಂಬರ್ 30 ರಂದು ಸಿಬಿಟಿ ಸಭೆ ಹಾಗೂ ಚಳಿಗಾಲದ ಪಾರ್ಲಿಮೆಂಟ್ ಅಧಿವೇಶನ ಮುಗಿಯುವ ಒಳಗಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸದೆ ಹೋದಲ್ಲಿ ಉಗ್ರ ಹೋರಾಟಕ್ಕೆ ತಾವೆಲ್ಲರೂ ಸಿದ್ಧರಾಗಬೇಕು ಎಂದು ಕರೆ ನೀಡಿದರು.
ಎನ್ಎಸಿ ರಾಜ್ಯಾಧ್ಯಕ್ಷ ಜಿಎಸ್‌ಎಮ್ ಸ್ವಾಮಿ ಮಾತನಾಡಿ, ಡಿಸೆಂಬರ್ 10 & 11ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಮಾಂಡರ್ ಅಶೋಕ್ ರಾಹುತ್ ಅವರ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಪ್ರಾರಂಭವಾಗಲಿದ್ದು, ದೇಶದ ವಿವಿಧ ಭಾಗಗಳಿಂದ ಸಾವಿರಾರು ನಿವೃತ್ತರು ಪಾಲ್ಗೊಳ್ಳುತ್ತಿದ್ದಾರೆ. ರಾಜ್ಯದ ಎನ್ಎಸಿ ಜಿಲ್ಲಾ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಅವರ ಪ್ರಯಾಣ ಭತ್ಯೆಯನ್ನು ಸಂಘದ ವತಿಯಿಂದ ಭರಿಸುವುದಾಗಿ ತಿಳಿಸಿದರು.
ಅಧಿಕಾರಿಗಳು ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸದೆ ಹೋದಲ್ಲಿ ದೇಶಾದ್ಯಂತ ಇರುವ ಎಲ್ಲ ಇಪಿಎಸ್ ನಿವೃತ್ತರು ವಿನೂತನ ಪ್ರತಿಭಟನೆ ನಡೆಸುತ್ತಾರೆ ಎಂದು ಎಚ್ಚರಿಕೆ ನೀಡಿದರು. ಮುಂದುವರಿದಂತೆ ನಮ್ಮ ಹೋರಾಟ ಫಲಪ್ರದವಾಗುವ ಎಲ್ಲ ಲಕ್ಷಣಗಳು ಇವೆ ಎಂದು ಹೇಳಿದರು.
ಕಾರ್ಯಾಧ್ಯಕ್ಷ ಶಂಕರ್ ಕುಮಾರ್ ಮಾತನಾಡಿ, ನಮ್ಮ ಹೋರಾಟ ಇಷ್ಟಕ್ಕೆ ನಿಲ್ಲುವುದಿಲ್ಲ, ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಕೇಂದ್ರ ಸರ್ಕಾರ ಹಾಗೂ ಇಪಿಎಫ್ಒ ಅಧಿಕಾರಿಗಳ ಮೇಲೆ ಇನ್ನು ಹೆಚ್ಚಿನ ಒತ್ತಡ ಹೇರಬೇಕು, ಹಾಗಾಗಿ ಅಧಿಕ ಸಂಖ್ಯೆಯಲ್ಲಿ ನಿವೃತ್ತರು ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ಪ್ರಧಾನಕಾಯ೯ದಶಿ೯ ಆರ್.ಸುಬ್ಬಣ್ಣ, ಮಾತನಾಡಿ, ಇಪಿಎಫ್ಒ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ವಿಳಂಬ ನೀತಿ ಅನುಸರಿಸುತ್ತಿದ್ದು, ಇಪಿಎಸ್ ನಿವೃತ್ತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ಇನ್ನೆಷ್ಟು ದಿನ ನಿವೃತ್ತರು ಕಾಯಬೇಕು? ಎಂದು ಅಧಿಕಾರಿಗಳನ್ನು ತಾರಾಟೆಗೆ ತೆಗೆದುಕೊಂಡರು. ನಿವೃತ್ತರ ತಾಳ್ಮೆ ಪರೀಕ್ಷಿಸುವ ಕಾಲ ಮುಗಿದಿದ್ದು, ತೀವ್ರತರ ಹೋರಾಟಕ್ಕೆ ತಾವೆಲ್ಲರೂ ಸಿದ್ಧರಾಗಬೇಕು ಎಂದು ಕರೆ ನೀಡಿದರು.
ಚಿಕ್ಕಬಳ್ಳಾಪುರ, ಕೆಎಸ್‌ಆರ್‌ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಡು ರವರು ಮಾತನಾಡಿ, ಇಷ್ಟು ವರ್ಷಗಳ ಕಾಲ ಇಪಿಎಸ್ ನಿವೃತ್ತರು ಸಹ್ಯಾಮದಿಂದ ನಡೆದುಕೊಂಡಿದ್ದು,ನಮ್ಮ ನಾಯಕರು ಮಂಡಿಸಿರುವ ಬೇಡಿಕೆ ರೂ. 7500/- ಭತ್ಯೆ ಹಾಗೂ ವೈದ್ಯಕೀಯ ವೆಚ್ಚ, ಇಪಿಎಸ್ ವ್ಯಾಪ್ತಿಯಲ್ಲಿ ಬರುವ ನಿವೃತ್ತರಿಗೆ ರೂ.5,000 ಕೂಡಲೇ ನೀಡಬೇಕು ಎಂದು ಆಗ್ರಹಿಸಿದರು.
ಅಂತಿಮವಾಗಿ ಇಪಿಎಫ್ಒ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕಾಗಮಿಸಿ, ರಾಷ್ಟ್ರೀಯ ಸಂಘರ್ಷ ಸಮಿತಿ ಹಾಗೂ ನಮ್ಮಸಂಘದ ಮನವಿ ಪತ್ರವನ್ನು ಸ್ವೀಕರಿಸಿ, ಪ್ರತಿಕ್ರಿಯಿಸಿದ್ದು, ಇದುವರೆಗಿನ ನಮ್ಮ ಹೋರಾಟದ ಎಲ್ಲ ಬೆಳವಣಿಗೆಯನ್ನು ನವದೆಹಲಿಯ ಕೇಂದ್ರ ಕಚೇರಿಗೆ ಕಳುಹಿಸಿ ಕೊಟ್ಟಿದ್ದು, ಅವರ ಆದೇಶದ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದ್ದು, ಇದಕ್ಕೆ ತೃಪ್ತರಾಗದ ಪ್ರತಿಭಟನಾಕಾರರು, ತಮ್ಮ ಆಕ್ರೋಶ ವ್ಯಕ್ತಪಡಿಸಿ, ಅಧಿಕಾರಿಗಳಿಗೆ ನೀಡುತ್ತಿರುವುದು ಇದೇ ಕೊನೆಯ ಅವಕಾಶ ಎಂಬ ಎಚ್ಚರಿಕೆ ನೀಡಿದರು.
ಪದಾಧಿಕಾರಿಗಳಾದ ನಾಗರಾಜು, ಮನೋಹರ್ ಹಾಗೂ ಕೃಷ್ಣಮೂರ್ತಿ, ಕೆಎಸ್ಆರ್‌ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.