ಮಂಡ್ಯ: ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸಲು ಆದೇಶ ಮಾಡಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ, ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯದ ಹಿತ ಕಾಪಾಡದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ನಿರಂತರ ಧರಣಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿವೃತ್ತ ನೌಕರರು ಬೆಂಬಲ ಸೂಚಿಸಿದ್ದಾರೆ.
ನಿಗಮದ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಿವೃತ್ತ ನೌಕರರು ನಗರದ ಜಯ ಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಮೆರವಣಿಗೆ ಹೊರಟು ರೈತ ಹಿತರಕ್ಷಣ ಸಮಿತಿ ಧರಣಿ ಸ್ಥಳಕ್ಕೆ ತೆರಳಿ ನಿರಂತರ ಧರಣೆಯಲ್ಲಿ ಭಾಗಿಯಾದರು.
ಈ ವೇಳೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಹೆದ್ದಾರಿ ತಡೆ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಮುಖಂಡ ವೆಂಕಟರಾಮು ಮಾತನಾಡಿ, ಆಳುವ ಸರ್ಕಾರಗಳು ಆಗಾಗ್ಗೆ ಹಣಕಾಸು ವಿಚಾರವಾಗಿ ಶ್ವೇತ ಪತ್ರ ಹೊರಡಿಸುತ್ತವೆ. ಆದರೆ, ಜನತೆಗೆ ಅತ್ಯಮೂಲ್ಯವಾದ ನೀರಿನ ವಿಚಾರದಲ್ಲಿ ನಿರ್ಲಕ್ಷ ವಹಿಸಿವೆ ಎಂದು ಕಿಡಿಕಾರಿದರು.
ಇನ್ನು ಜಲಾಶಯಗಳಲ್ಲಿ ಇರುವ ನೀರಿನಲ್ಲಿ ಲಭ್ಯತೆ, ಜನ ಜಾನುವಾರುಗಳಿಗೆ ಕುಡಿಯುವ ನೀರು, ರೈತರ ಜಮೀನಿನಲ್ಲಿ ಇರುವ ಬೆಳೆ, ಮತ್ತೆ ಎಷ್ಟು ಪ್ರದೇಶದಲ್ಲಿ ಬೆಳೆ ಹಾಕಬೇಕಾಗಿದೆ, ಬೇಸಿಗೆ ವೇಳೆ ಕೆರೆಕಟ್ಟೆಗಳಿಗೆ ಇರಬೇಕಿರುವ ನೀರು ಎಷ್ಟು ಎಂಬ ಲೆಕ್ಕಾಚಾರದ ಶ್ವೇತ ಪತ್ರ ಹೊರಡಿಸುವುದಿಲ್ಲ, ಇದನ್ನು ಗಮನಿಸಿದರೆ ಆಳುವ ವರ್ಗಕ್ಕೆ ರೈತರ ಬಗ್ಗೆ ಎಷ್ಟು ಕಾಳಜಿ ಇದೆ ಎಂಬುದನ್ನು ತೋರ್ಪಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತ ತಮಗೆ ಬೇಕಾದಾಗ ಕಾನೂನು ತಿದ್ದುಪಡಿ ಮಾಡಿಕೊಳ್ಳುತ್ತಾರೆ. ಸಂವಿಧಾನ ಬದಲು ಮಾಡುವುದಾಗಿ ಹೇಳುತ್ತಾರೆ. ಆದರೆ ಕಾವೇರಿ ವಿಚಾರದಲ್ಲಿ ಕಾನೂನು ತಿದ್ದುಪಡಿ ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.
ಸಂಘದ ಅಧ್ಯಕ್ಷ ಚಿಕ್ಕದೇವಯ್ಯ, ಗೌರವಾಧ್ಯಕ್ಷ ಮುನಿಯಪ್ಪ, ಕೆ ಶಿವಣ್ಣ, ನರಸೇಗೌಡ,ಮಹದೇವಸ್ವಾಮಿ ನೇತೃತ್ವ ವಹಿಸಿದ್ದರು. ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ಬೋರಯ್ಯ, ಸುನಂದ ಜಯರಾಂ. ಮಲ್ಲನಾಯಕನ ಕಟ್ಟೆ ಬೋರೇಗೌಡ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೆ ಗೌಡ, ಕನ್ನಡ ಸೇನೆ ಮಂಜುನಾಥ್, ನಾರಾಯಣ್, ಅಂಬುಜಮ್ಮ ಇತರರಿದ್ದರು.