ಮಂಡ್ಯ: ಗಣೇಶ ವಿಸರ್ಜನೆ ವೇಳೆ ಗಲಾಟೆ ಮಾಡಿರುವ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ಮಂಡ್ಯದಲ್ಲಿ ಮಾತನಾಡಿದ ಅವರು, ಪರಿಸ್ಥಿತಿ ಈಗ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದಿದೆ. 144 ಸೆಕ್ಷನ್ ಕೂಡ ಜಾರಿಯಲ್ಲಿದೆ. ಯಾವುದೇ ಆಸ್ತಿ-ಪಾಸ್ತಿ ನಷ್ಟ ಹಾಗೂ ಪ್ರಾಣಹಾನಿಯಾಗದಂತೆ ನೋಡಿಕೊಂಡು ಪರಿಸ್ಥಿತಿ ನಿಯಂತ್ರಣಕ್ಕೆ ಸೂಚನೆ ಕೊಟ್ಟಿದ್ದೇವೆ. ಆ ಕೆಲಸ ಆಗುತ್ತಿದೆ ಎಂದರು.
ಬೇರೆ ಬೇರೆ ಕಾರಣಕ್ಕೆ ಹಿಂದೂ-ಮುಸ್ಲಿಂ ಗಲಾಟೆ ಆಗಿತ್ತು. ಈ ರೀತಿ ಘಟನೆ ಆಗಿರಲಿಲ್ಲ. ದುರಾದೃಷ್ಟವಶಾತ್ ಈ ಘಟನೆ ಆಗಿದೆ. ಪ್ರಕರಣ ನಿಯಂತ್ರಣಕ್ಕೆ ತರುವ ಕೆಲಸ ಆಗುತ್ತಿದೆ. ಯಾವುದೇ ಅನಾಹುತ ಆಗದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕ್ರಮ ವಹಿಸಿದೆ ಎಂದರು.
46 ಜನರ ಬಂಧನ: ಪಟ್ಟಣದಲ್ಲಿ ಸಂಭವಿಸಿದ ಈ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 46 ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
ಸದ್ಯಕ್ಕೆ ಪಟ್ಟಣದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಸೂಕ್ತ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಆಯಾ ಕಟ್ಟಿನ ಪ್ರದೇಶದಲ್ಲಿ ಗಸ್ತು ಹೆಚ್ಚಿಸಲಾಗಿದೆ. ಜನಜೀವನ ಸಹಜ ಸ್ಥಿತಿಯಲ್ಲಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದರು.
ಗಲಭೆಯಲ್ಲಿ ಎರಡು ಕೋಮಿನವರು ಕಲ್ಲು ತೂರಾಟ ನಡೆಸಿದ್ದು, ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಸಾರ್ವಜನಿಕರು ಗಾಯಗೊಂಡಿರುವ ಬಗ್ಗೆ ಮಾಹಿತಿ ಇಲ್ಲ. ಏಳು ಬೈಕ್ ಸಂಪೂರ್ಣ ಸುಟ್ಟು ಹೋಗಿದ್ದು ಹಲವು ಬೈಕ್ ಗಳಿಗೆ ಹಾನಿಯಾಗಿದೆ. ಇಂಡಿಕಾ ಕಾರು ಬೆಂಕಿ ಗಾಹುತಿ ಯಾಗಿದ್ದು ಗಲಭೆ ಪೀಡಿತ ಪ್ರದೇಶದಲ್ಲಿನ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಲಾಗುತ್ತಿದ್ದು ಗಲಭೆಯಲ್ಲಿ ಭಾಗಿಯಾಗಿರುವವರನ್ನು ಬಂಧಿಸಲಾಗುವುದೆಂದು ಹೇಳಿದರು.