APSRTCಯಲ್ಲೂ ಶಕ್ತಿ ಯೋಜನೆ ಶೀಘ್ರ ಜಾರಿ: ಬೆಂಗಳೂರಿಗೆ ಭೇಟಿ ನೀಡಿದ ಸಾರಿಗೆ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ ನಿಯೋಗ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲೂ ‘ಶಕ್ತಿ’ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕೈಗೊಂಡಿರುವ ಕ್ರಮಗಳ ಕುರಿತು ತಿಳಿದುಕೊಳ್ಳಲು ಆಂಧ್ರಪ್ರದೇಶ ಸರ್ಕಾರದ ಸಚಿವರು ಹಾಗೂ ಅಧಿಕಾರಿಗಳು ಶುಕ್ರವಾರ ರಾಜ್ಯಕ್ಕೆ ಭೇಟಿ ನೀಡಿ ಅನೇಕ ಮಾಹಿತಿ ಪಡೆದುಕೊಂಡರು.
ಆಂಧ್ರಪ್ರದೇಶ ಸರ್ಕಾರದ ಸಾರಿಗೆ, ಯುವಜನ & ಕ್ರೀಡಾ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ, ಗೃಹ ಸಚಿವರಾದ ಅನಿತಾ ವಂಗಲಪುಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಗುಮ್ಮಿಡಿ ಸಂಧ್ಯಾರಾಣಿ ಹಾಗೂ ಸಾರಿಗೆ, ಆರ್ಥಿಕ ಇಲಾಖೆ ಅಧಿಕಾರಿಗಳು, ಆಂಧ್ರ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳ ನಿಯೋಗದ ತಂಡ ಬೆಂಗಳೂರಿಗೆ ಆಗಮಿಸಿತು.
ಈ ವೇಳೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಕೇಂದ್ರ ಕಚೇರಿಗೆ ಭೇಟಿ ನೀಡಿದ ಸಂದರ್ಭ ಅವರನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬರಮಾಡಿಕೊಂಡರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಜತೆ ಸಭೆ ನಡೆಸಿ ಚರ್ಚೆ ನಡೆಸಿದರು.
ಈ ವೇಳೆ ಸಚಿವ ರಾಮಲಿಂಗಾರೆಡ್ಡಿ ಅವರು ನಿಗಮದಲ್ಲಿ ‘ಶಕ್ತಿ’ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕೈಗೊಂಡಿರುವ ಕ್ರಮಗಳ ಕುರಿತು ಅನೇಕ ಮಾಹಿತಿಯನ್ನು ನೀಡಿದರು.
ಈ ಎಲ್ಲ ಮಾಹಿತಿ ಪಡೆದುಕೊಂಡ ಆಂಧ್ರಪ್ರದೇಶ ಸರ್ಕಾರದ ಸಾರಿಗೆ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ ಅತೀ ಶೀಘ್ರದಲ್ಲೇ ನಮ್ಮ ರಾಜ್ಯದಲ್ಲೂ ‘ಶಕ್ತಿ’ ಯೋಜನೆ ಜಾರಿ ಮಾಡುತ್ತೇವೆ ಎಂದು ಹೇಳಿದರು.
ಸಾರಿಗೆ ಇಲಾಖೆ ಕಾರ್ಯದರ್ಶಿಗಳು ಹಾಗೂ KSRTC ಉಪಾಧ್ಯಕ್ಷ ರಿಜ್ವಾನ್ ನವಾಬ್, ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.