ಮಂಡ್ಯ : ಸದಾ ಒತ್ತಡದ ಬದುಕಿನಲ್ಲಿ ಕೆಲಸ ಮಾಡುವ ವಕೀಲರಿಗೆ ಕ್ರೀಡಾಕೂಟ ಅತ್ಯಂತ ಅವಶ್ಯಕ ಎಂದು ವಕೀಲರ ಪರಿಷತ್ತು ಅಧ್ಯಕ್ಷ ಎಚ್.ಎಲ್.ವಿಶಾಲ್ ರಘು ತಿಳಿಸಿದ್ದಾರೆ.
ನಗರದ ವಕೀಲರ ಸಂಘದ ಆವರಣದಲ್ಲಿ ಜಿಲ್ಲಾ ವಕೀಲರ ಸಂಘ ಆಯೋಜಿಸಿದ್ದ ರಾಜ್ಯಮಟ್ಟದ ವಕೀಲರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಒತ್ತಡದ ಬದುಕಿಗೆ ಒಂದಷ್ಟು ವಿರಾಮ ಅಗತ್ಯ. ಈ ನಿಟ್ಟಿನಲ್ಲಿ ವಕೀಲರೂ ಹೂರತಾಗಿಲ್ಲ. ಹಾಗಾಗಿ ಎಲ್ಲರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಕ್ರೀಡೆ ಎಂದ ಮೇಲೆ ಸೋಲು ಗೆಲುವು ಸಹಜ. ಆದರೆ ಆರೋಗ್ಯಕರ ಸ್ಪರ್ಧೆ ಎಲ್ಲರ ಮನಸ್ಸಿನಲ್ಲಿರುವುದು ಅತ್ಯಂತ ಅವಶ್ಯಕ. ಸಣ್ಣಪುಟ್ಟ ಲೋಪಗಳನ್ನು ದೊಡ್ಡದು ಮಾಡದೆ ಅದನ್ನು ಇಲ್ಲೇ ಬಿಟ್ಟು ಎಲ್ಲರೂ ಸ್ನೇಹಪರದಿಂದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕೆಂದು ಕಿವಿಮಾತು ಹೇಳಿದರು.
ಎಲ್ಲೂ ಸಲ್ಲದವರು ವಕೀಲ ವೃತ್ತಿಗೆ ಬರುತ್ತಾರೆ ಎಂಬ ಮಾತು ಇತ್ತು. ಆದರೆ ಇಂದು ಕಾನೂನು ಪದವಿ ಪಡೆದ ವ್ಯಕ್ತಿ ವಿಶ್ವದ ಯಾವುದೇ ದೇಶದಲ್ಲಾದರೂ ಬದುಕುವಂತಹ ವಾತಾವರಣ ನಿರ್ಮಾಣವಾಗಿದೆ ಎಂದರು.
ವಕೀಲರ ಪರಿಷತ್ತಿನಲ್ಲಿ ಹೆಚ್ಚು ಮಂದಿ ನೋಂದಣಿಗೆ ಬರುತ್ತಿದ್ದಾರೆ. ಮೊದಲೆಲ್ಲ ತಿಂಗಳಿಗೆ ಒಮ್ಮೆ ಮಾಡಿಕೊಳ್ಳಲಾಗುತ್ತಿತ್ತು. ಈಗ ಮೊದಲ ಶನಿವಾರ ಮತ್ತು ಕಡೆಯ ಶನಿವಾರ ಎರಡು ದಿನಗಳಲ್ಲಿ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಸುಮಾರು 750 ಮಂದಿ ನೋಂದಣಿ ಆಗುತ್ತಿದ್ದಾರೆ ಎಂದು ತಿಳಿಸಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಜೆ.ರಮಾ ಮಾತನಾಡಿ. ಕ್ರೀಡೆ ಮನುಷ್ಯನಲ್ಲದೆ ಪ್ರಾಣಿಗಳಲ್ಲೂ ಸಹ ಕಂಡು ಬರುತ್ತಿದೆ. ಕ್ರೀಡೆಯಿಂದ ದೇಹ ಮತ್ತು ಮನಸು ಉಲ್ಲಾಸವಾಗುತ್ತದೆ. ನಿಯಮಿತವಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.
ಕ್ರೀಡೆಯಲ್ಲಿ ಸ್ಪರ್ಧಾ ಮನೋಭಾವ ಅಗತ್ಯ. ಎಲ್ಲವೂ ಆರೋಗ್ಯಕರ ಪೈಪೋಟಿ ಇದ್ದಾಗ ಮಾತ್ರ ಯಾವುದೇ ಅಡೆ ತಡೆಗಳಿಲ್ಲದೆ ಚೆನ್ನಾಗಿ ನಡೆಯುತ್ತದೆ. ಈ ನೀತಿನಲ್ಲಿ ವಕೀಲರು ಕ್ರೀಡಾಕೂಟದಲ್ಲಿ ಪಾಲ್ಗೊಂಡು ನೆನಪನ್ನು ಕೊಂಡೊಯ್ಯುವಂತೆ ಸಲಹೆ ನೀಡಿದರು.
ಸಾಮಾನ್ಯವಾಗಿ ವಕೀಲರು ತಮ್ಮ ಪ್ರತಿವಾದಿ ವಕೀಲರೊಂದಿಗೆ ನ್ಯಾಯಾಲಯದಲ್ಲಿ ಮಾನಸಿಕವಾಗಿ ಗುದ್ದಾಟ ನಡೆಸುತ್ತಲೇ ಇರುತ್ತಾರೆ. ಆದರೆ ಈ ಕ್ರೀಡಾಕೂಟದಲ್ಲಿ ದೈಹಿಕವಾಗಿಯೂ ಕೂಡ ಸ್ಪರ್ಧೆ ಒಡ್ಡುವುದು ಅಗತ್ಯ. ಕ್ರೀಡಾಕೂಟ ಮಂಡ್ಯದಲ್ಲಿ ನಡೆಯುತ್ತಿರುವುದು ಶ್ಲಾಘನೀಯ. ಇದು ಯಶಸ್ವಿಯಾಗಿ ನಡೆಯುವಂತೆ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ಎಂ.ಟಿ. ರಾಜೇಂದ್ರ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ. ಎಸ್ ವಿಜಯ ಆನಂದ್, ಹೈಕೋರ್ಟ್ ಹಿರಿಯ ವಕೀಲ ಆರ್.ಎಸ್. ರವಿ, ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಜಿ ರವಿ, ಹೈ ಕೋರ್ಟ್ ವಕೀಲ ಅನಿಲ್ ಕುಮಾರ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಖಜಾಂಚಿ ಡಿ.ಎಂ ಮಹೇಶ್, ಟಿ.ಕಾರ್ಯದರ್ಶಿ ಎನ್.ಎಂ. ಮಹದೇವ್, ಪದಾಧಿಕಾರಿಗಳಾದ ಸೀತಾರಾಮ, ಎಂ. ರೂಪ, ಎಂ. ಶ್ರೀನಿವಾಸ್, ರಾಮಚಂದ್ರ, ಗಿರಿಜಾಂಬಿಕೆ, ರತಿ ಕುಮಾರಿ, ಅಮೃತ್, ಯಶ್ವಂತ್ ಇತರರು ಇದ್ದರು.