ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸರ್ಕಾರದ ಅಂದರೆ ಕಳೆದ 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯ ನಂತರ ಬಂದ ಸರ್ಕಾರದ ಕೊನೆಯ ಬಜೆಟ್‌ಅನ್ನು ಇನ್ನು ಕೆಲವೇ ನಿಮಿಷಗಳಲ್ಲಿ ಮಂಡಿಸಲಿದ್ದಾರೆ.
ಅಂದರೆ, ಈ ಬಾರಿ ಚುನಾವಣೆ ಇರುವುದರಿಂದ ಬೊಮ್ಮಾಯಿ ಅವರು ಬಹುತೇಕ ಜನರ ನೀರಿಕ್ಷೆಗೆ ತಕ್ಕ ಬಜೆಟ್‌ಅನ್ನು ಮಂಡಿಸುತ್ತಾರೆ ಎಂಬ ಲೆಕ್ಕಚಾರದಲ್ಲಿ ವಿಪಕ್ಷಗಳೂ ಕೂಡ ಇವೆ.
ಒಂದು ವೇಳೆ ಜನಪರವಾದ ಬಜೆಟ್ ಮಂಡಿಸಿದರೆ ನಾವು ಚುನಾವಣೆಯಲ್ಲಿ ಯಾವರೀತಿ ಜನರ ಮನಸ್ಸನ್ನು ನಮ್ಮ ಪಕ್ಷದತ್ತ ಸೆಳೆಯಬೇಕು ಎಂಬ ಬಗ್ಗೆ ಯೋಚಿಸಲು ಈ ಬಜೆಟ್ ಮೇಲೆ ತಮ್ಮ ನೇರದೃಷ್ಟಿಯನ್ನು ಹರಿಸುತ್ತಿವೆ.
ಇನ್ನು ಕಳೆದ 2020ರ ಜನವರಿ 1ರಿಂದಲೇ ಜಾರಿಗೆ ಬರಬೇಕಿರುವ ಸಾರಿಗೆ ನೌಕರರ ವೇತನ ಹೆಚ್ಚಳ ಈವರೆಗೂ ಆಗಿಲ್ಲ. ಅಂದರೆ ಈ ಬಗ್ಗೆ ಈ ಬಜೆಟ್‌ನಲ್ಲೇ ಸರ್ಕಾರ ಘೋಷಣೆ ಮಾಡಿ ಒಳ್ಳೆಯ ವೇತನ ಕೊಡುವ ಭರವಸೆ ನೀಡಲಿದೆ ಎಂಬ ನಿರೀಕ್ಷೆಯಲ್ಲಿ ಸಾರಿಗೆ ನೌಕರರು ಮತ್ತು ಅಧಿಕಾರಿಗಳು ಇದ್ದಾರೆ.
ರೈತರಿಗೆ ಈಗಾಗಲೇ ನೀಡುತ್ತಿರುವ ಶೂನ್ಯ ಬಡ್ಡಿದರದ ಮಿತಿಯನ್ನು 3 ಲಕ್ಷ ರೂ.ಗಳಿಂದ 5 ಲಕ್ಷ ರೂಪಾಯಿಗೆ ಏರಿಕೆ ಮಾಡುವ ನಿಟ್ಟಿನಲ್ಲಿ ರೈತ ಪರ ಬಜೆಟ್ ಮಂಡನೆ ಮಾಡುವ ಸಂಭವವಿದೆ. ಅಲ್ಲದೆ ಕುಟುಂಬ ನಿರ್ವಹಣೆ ಮಾಡುವ ಮಹಿಳೆಯರಿಗೆ ಗೌರವ ಧನ ಹೆಚ್ಚಿಸುವ ಯೋಜನೆಯನ್ನೂ ಘೋಷಿಸುವ ಸಾಧ್ಯತೆ ಹೆಚ್ಚಾಗಿದೆ ಎಂದೇ ನಿರೀಕ್ಷಿಸಬಹುದು.
ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಕುರಿತು 7ನೇ ವೇತನ ಆಯೋಗ ನೀಡುವ ವರದಿ ಅನುಷ್ಠಾನದ ಭರವಸೆ ನೀಡಲಿದ್ದಾರೆ ಎಂಬುದರಲ್ಲಿ ಯಾವುದೆ ಅನುಮಾನವಿಲ್ಲ.
ಇನ್ನು ಪ್ರಸ್ತುತ ಬಿಜೆಪಿ ಸರ್ಕಾರದ ಕೊನೆಯ ಮತ್ತು ವಿಧಾನಸಭಾ ಚುನಾವಣೆ ಪೂರ್ವ ಬಜೆಟ್ ಇದಾಗಿರುವ ಹಿನ್ನೆಲೆ, ಬಜೆಟ್ ನತ್ತ ಎಲ್ಲರ ಚಿತ್ತ ನೆಟ್ಟಿದ್ದು, ಚುನಾವಣೆಯ ಲಾಭ-ನಷ್ಟ ಲೆಕ್ಕ ಹಾಕಿಕೊಂಡು ಈ ಬಜೆಟ್ ಮಂಡನೆಯಾಗುವ ಸಾಧ್ಯತೆ ಇದೆ.
ಇದು ಮುಖ್ಯಮಂತ್ರಿಯಾದ ಬಳಿಕ ಬಸವರಾಜ ಬೊಮ್ಮಾಯಿವರು ಮಂಡಿಸುತ್ತಿರುವ ಎರಡನೇ ಬಜೆಟ್ ಆಗಿದ್ದು ಜನರಿಗೆ ಯಾವ ರೀತಿಯ ಭರವಸೆದಾಯಕ ಬಜೆಟ್ ನೀಡುತ್ತಿದ್ದಾರೆ ಎಂಬುದನ್ನು ಇಂದು ಬೆಳಗ್ಗೆ 10.15ರ ಬಳಿಕ ತಿಳಿಯಬಹುದಾಗಿದೆ.